Friday, February 27, 2015

ನಾನು ನಾನೆನ್ನುತಿಹನಾರು? ನೀನೊರ‍್ವನೇಂ? (730)

ನಾನು ನಾನೆನ್ನುತಿಹನಾರು? ನೀನೊರ‍್ವನೇಂ? |
ಲೀನರಲ್ಲವೆ ನಿನ್ನೊಳೆಲ್ಲ ಪೂರ್ವಿಕರು? ||
ಅನ್ನವಿಡುವರಿವೀವ ಬಾಳಿಸುವರೆಲ್ಲರುಂ |
ಪ್ರಾಣದೊಳವೊಗದಿಹರೆ - ಮರುಳ ಮುನಿಯ || (೭೩೦)

(ನಾನ್+ಎನ್ನುತ+ಇಹನ್+ಆರು)(ನೀನ್+ಒರ‍್ವನೇಂ)(ಅನ್ನ+ಇಡುವ+ಅರಿವು+ಈವ)(ಬಾಳಿಸುವರ್+ಎಲ್ಲರುಂ)(ಪ್ರಾಣದ+ಒಳು+ವೊಗದೆ+ಇಹರೆ)

"ನಾನು ನಾನು" ಎನ್ನುತ್ತಿರುವವರು ಯಾರು? ನೀನು ಒಬ್ಬನೇ ಏನು? ನಿನ್ನ ಒಳಗಡೆ ನಿನ್ನ ಪೂರ್ವಿಕರೆಲ್ಲರೂ ಸೇರಿಕೊಂಡಿಲ್ಲವೇನು? ಅನ್ನವನ್ನು ಇಟ್ಟು, ತಿಳುವಳಿಕೆಯನ್ನು ನೀಡಿ, ನೀನು ಜೀವನವನ್ನು ನಡೆಸುವಂತೆ ಮಾಡುವವರೆಲ್ಲರೂ ನಿನ್ನ ಪ್ರಾಣದೊಳಗೆ ಸೇರಿ ಕೊಂಡಿರದಿರುವರೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is it who says I, I and I? Is it you alone?
Don’t all your ancestors remain merged in you?
Won’t all those who feed and bless you with knowledge
And help you to live, enter into your soul? – Marula Muniya (730)
(Translation from "Thus Sang Marula Muniya" by Sri. Narasimha Bhat)

Thursday, February 26, 2015

ನಿನ್ನೊಳಗು ನಿನ್ನ ಹೊರಗೆರಡನುಮನರಿತು ನೀಂ (729)

ನಿನ್ನೊಳಗು ನಿನ್ನ ಹೊರಗೆರಡನುಮನರಿತು ನೀಂ |
ಚೆನ್ನಾಗಿ ಹೊಂದಿಸಿಕೊ ಹೊಂದಿಕೆಯ ಚೆನ್ನ ||
ಭಿನ್ನತ್ವ ತೋರದವೊಲಳವಡಿಸಿ ಬಾಳ್ದವನೆ |
ಧನ್ಯನೀ ಸೃಷ್ಟಿಯಲಿ - ಮರುಳ ಮುನಿಯ || (೭೨೯)

(ನಿನ್+ಒಳಗು)(ಹೊರಗೆ+ಎರಡನುಮನ್+ಅರಿತು)(ತೋರದವೊಲ್+ಅಳವಡಿಸಿ)(ಧನ್ಯನ್+ಈ)

ನಿನ್ನಂತರಂಗ ಮತ್ತು ಬಹಿರಂಗ ಪ್ರಪಂಚಗಳನ್ನು ಅರ್ಥ ಮಾಡಿಕೊಂಡು, ನೀನು ಅವೆರಡನ್ನೂ ಚೆನ್ನಾಗಿ ಹೊಂದಿಸಿಕೊ. ಈ ರೀತಿಯ ಹೊಂದಾಣಿಕೆಯೇ ಒಳ್ಳೆಯದು. ಭೇದಭಾವಗಳನ್ನು ತೋರದಂತೆ ಹೊಂದಿಸಿಕೊಂಡು ಜೀವನವನ್ನು ನಡೆಸುವವನೇ ಸೃಷ್ಟಿಯಲ್ಲಿ ಪುಣ್ಯವಂತ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Know yourself inside and the world outside and coordinate them both.
Harmonizing the inside and the outside is the most appropriate thing to be done
One who lives in harmony with no discord
Is the most blessed being in this situation – Marula Muniya (729)
(Translation from "Thus Sang Marula Muniya" by Sri. Narasimha Bhat)

Wednesday, February 25, 2015

ಬಹುಜೀವದೊಳಗೇಕೆ ಜೀವದ ವಿಲೀಕರಣ (728)

ಬಹುಜೀವದೊಳಗೇಕೆ ಜೀವದ ವಿಲೀಕರಣ |
ಬಹುತೆಯಿಂದೇಕತ್ವ ಏಕದಿಂ ಬಹುತೆ ||
ಇಹದೊಳಿದು ಪರಮಾರ್ಥವಿದರಿಂದಲಾನಂದ |
ವಿಹಿತಮಿದು ಮುಕ್ತಂಗೆ - ಮರುಳ ಮುನಿಯ || (೭೨೮)

(ಬಹುಜೀವದ+ಒಳಗೆ+ಏಕೆ)(ಬಹುತೆಯಿಂದ+ಏಕತ್ವ)(ಇಹದೊಳು+ಇದು)
(ಪರಮಾರ್ಥ+ಇದರಿಂದಲ್+ಆನಂದ)(ವಿಹಿತಮ್+ಇದು)

ಅನೇಕಾನೇಕ ಜೀವಗಳ ಒಳಗೆ ಒಂದು ಜೀವ ಏಕೆ ಸೇರಿಕೊಂಡು ಹೋಗಿದೆ? ಏಕೆಂದರೆ ಈ ಅನೇಕದಿಂದ ಒಂದಾಗುವುದು ಮತ್ತೂ ಒಂದರಿಂದ ಅನೇಕವಾಗುವುದು ಪ್ರಪಂಚದಲ್ಲಿ ಪುನರಾವರ್ತಿತವಾಗುತ್ತಿರುತ್ತದೆ. ಅದು ಈ ಪ್ರಪಂಚದಲ್ಲಿ ಪರಮಾತ್ಮನ ಇರುವಿಕೆಯನ್ನೂ ನಮಗೆ ತಿಳಿಸಿಕೊಡುತ್ತದೆ ಮತ್ತು ಅದರಿಂದ ನಮಗೆ ಸಂತೋಷವುಂಟಾಗುತ್ತದೆ. ಪ್ರಪಂಚದಿಂದ ಬಿಡುಗಡೆಯಾಗ ಬಯಸುವವನಿಗೆ, ಈ ಭಾವನೆ ಅಗತ್ಯವಾದುದ್ದಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Merging of one soul with many other souls in the world,
One from many and many from one,
This is the Divine Truth and happiness from this in the world.
This principle is the best to the liberated one – Marula Muniya (728)
(Translation from "Thus Sang Marula Muniya" by Sri. Narasimha Bhat)

Tuesday, February 24, 2015

ನೀನೊಬ್ಬ ಜಗದೊಳಗೆ, ನಿನ್ನೊಳಗದೊಂದು ಜಗ (727)

ನೀನೊಬ್ಬ ಜಗದೊಳಗೆ, ನಿನ್ನೊಳಗದೊಂದು ಜಗ |
ನೀನೆ ಜಗ, ನೀನಿರದೆ ಜಗವುಂಟೆ ನಿನಗೆ? ||
ತಾನೆ ಜಗವೆಲ್ಲವೆಂದರಿತಂಗೆ ಹಗೆಯಲ್ಲಿ? |
ಏನಿಹುದವಂಗನ್ಯ - ಮರುಳ ಮುನಿಯ || (೭೨೭)

(ನಿನ್ನ+ಒಳಗೆ+ಅದು+ಒಂದು)(ಜಗ+ಎಲ್ಲ+ಎಂದು+ಅರಿತಂಗೆ)(ಏನ್+ಇಹುದು+ಅವಂಗೆ+ಅನ್ಯ)

ಪ್ರಪಂಚದ ಬಾಳುವೆಯಲ್ಲಿ ನೀನು ಒಬ್ಬನಾಗಿ ಬಾಳುತ್ತಿರುವೆ. ಆದರೆ ನಿನ್ನೊಳಗಡೆಯೇ ನೀನು ಒಂದು ಪ್ರತ್ಯೇಕ ಜಗತ್ತನ್ನು ನಿರ್ಮಿಸಿಕೊಂಡಿರುವೆ. ನೀನೇ ಜಗತ್ತು. ನೀನು ಇಲ್ಲದಿದ್ದರೆ ಬೇರೆ ಯಾವ ಜಗತ್ತೂ ನಿನಗಿಲ್ಲ. ತಾನೇ ಈ ಜಗತ್ತು ಎಂದು ಅರ್ಥ ಮಾಡಿಕೊಂಡವನಿಗೆ ದ್ವೇಷ(ಹಗೆ)ದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವನಿಗೆ ಬೇರೆ ಎನ್ನುವುದು ಯಾವುದೂ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are one individual in the vast world but you contain a world in yourself,
You yourself are a world; does the world exist for you, when you don’t exist?
Is there an enemy to him who thinks that the world is not different from him?
What is alien to him? – Marula Muniya (727)
(Translation from "Thus Sang Marula Muniya" by Sri. Narasimha Bhat)

Monday, February 23, 2015

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ (726)

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ |
ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ ||
ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು |
ಬಾಳು ತಾಳುಮೆ ಕಲಿತು - ಮರುಳ ಮುನಿಯ || (೭೨೬)

(ಪರಿಯುತ+ಇರೆ)(ಬಿರುಬೀಸುತಿರಲ್+ಆತ್ಮಗಿರಿ+ಅಚಲ)(ಹಾಳ್+ಆಗುತ+ಇರೆ)

ಕಾಲವೆಂಬ ನದಿಯು ಹರಿಯುತ್ತಿರಲು ಮಧ್ಯದಲ್ಲಿ ಸದಾಚಾರವೆಂಬ ಪರ್ವತ(ಶೈಲ)ವು ಸ್ಥಿರವಾಗಿ ನಿಂತಿರುವುದು ಕಂಡುಬರುತ್ತದೆ. ವೇಗವಾಗಿ ಗಾಳಿಯು ಬೀಸುತ್ತಿರುವಾಗ ಆತ್ಮವೆಂಬ ಬೆಟ್ಟ(ಗಿರಿ)ವು ಸ್ಥಿರವಾಗಿ ಅಲುಗಾಡದೆ ನಿಂತಿರುತ್ತದೆ. ಜನಗಳು ಹೋಳು ಹೋಳಾಗಿ ಹಾಳಾಗಿ ಹೋಗುತ್ತಿರುವಾಗ ಅವರ ನಡುವೆ ನೀನು ಸಹನಾಶಕ್ತಿಯನ್ನು ಗಳಿಸಿ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The mountain of character stands firm in the rushing river of time,
The mountain of self remains immovable against all violent storms
Learn to endure with patience while people split into splinters
And ruin themselves – Marula Muniya (726)
(Translation from "Thus Sang Marula Muniya" by Sri. Narasimha Bhat)

Friday, February 20, 2015

ಮಾತು ಮನಗಳ ಸೇತು, ಜ್ಯೋತಿ ಕಣ್ಗಳ ಸೇತು (725)

ಮಾತು ಮನಗಳ ಸೇತು, ಜ್ಯೋತಿ ಕಣ್ಗಳ ಸೇತು |
ಪ್ರೀತಿ ಸೇತು ಪ್ರಿಯರ ಸವಿನೆನಸುಗಳಿಗೆ ||
ಸೇತುವಾತ್ಮಕೆ ದೇವಮೂರ್ತಿ ಕೀರ್ತನೆ ಪೂಜೆ |
ನೀತಿಗಾತ್ಮವೆ ಸೇತು - ಮರುಳ ಮುನಿಯ (೭೨೫)

(ಸೇತು+ಆತ್ಮಕೆ)(ನೀತಿಗೆ+ಆತ್ಮವೆ)

ಒಬ್ಬರು ಇನ್ನೊಬ್ಬರೊಡನಾಡುವ ನುಡಿಗಳು ಮನಸ್ಸುಗಳು ಸೇರಲು ಸೇತುವೆಯಾಗುತ್ತವೆ. ಕಣ್ಣುಗಳು ನೋಡಲು ಬೆಳಕು ಒಂದು ಮಾಧ್ಯಮವಾಗುತ್ತದೆ. ನಮ್ಮ ಇಷ್ಟಜನರ ಸಿಹಿನೆನಪುಗಳಿಗೆ ಪ್ರೀತಿಯು ಬಂಧನವಾಗುತ್ತದೆ. ಮೂರ್ತಿಪೂಜೆ, ಭಜನೆ, ಕೀರ್ತನೆಗಳು ಆತ್ಮವು ಪರಮಾತ್ಮನನ್ನು ಸೇರಲು ಕಾರಣಕರ್ತವಾಗುತ್ತವೆ. ಸನ್ನಡತೆಗೆ ಆತ್ಮಭಾವನೆಯೇ ಒಂದು ಸೇತುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Speech is the bridge between minds while light is the bridge between eyes
Love is the bridge between the sweet thoughts of the loved ones,
Image of God, prayers and worship form the bridge between self and God
And self itself is the bridge to righteousness – Marula Muniya (724)
(Translation from "Thus Sang Marula Muniya" by Sri. Narasimha Bhat)

Wednesday, February 18, 2015

ಶಿರದ ಮೇಲಣ ಬುತ್ತಿ ಹೊರೆ ದಾರಿ ನಡೆವಂಗೆ (724)

ಶಿರದ ಮೇಲಣ ಬುತ್ತಿ ಹೊರೆ ದಾರಿ ನಡೆವಂಗೆ |
ಅರಗಿದ ಬಳಿಕ್ಕದುವೆ ನವ ಪುಷ್ಟಿ ಶಕ್ತಿ ||
ಹೊರಗೆ ಬೇರೆಯದೆನಿಪ ಜಗ ನಿನ್ನೊಳಗೆ ಕೂಡೆ |
ಅರಿ ಯಾರು ನಿನಗಿನ್ನು? - ಮರುಳ ಮುನಿಯ || (೭೨೪)

(ಬಳಿಕ್ಕ+ಅದುವೆ)(ಬೇರೆ+ಅದು+ಎನಿಪ)(ನಿನ್ನ+ಒಳಗೆ)(ನಿನಗೆ+ಇನ್ನು)

ದಾರಿಯಲ್ಲಿ ಪ್ರಯಾಣಿಸುತ್ತಿರುವ ದಾರಿಹೋಕನಿಗೆ, ಅವನು ಅವನ ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಬುತ್ತಿಯು ಭಾರವೆನ್ನಿಸುತ್ತದೆ. ಆದರೆ ಕಟ್ಟಿಕೊಂಡು ಹೋಗಿರುವ ಅ ಊಟವನ್ನು ಅವನು ಮಾಡಿದಾಗ, ಅದು ಜೀರ್ಣವಾಗಿ ಅವನಿಗೆ ಬೆಳವಣಿಗೆ ಮತ್ತು ಬಲಗಳನ್ನು ಒದಗಿಸುತ್ತದೆ. ಅದೇ ರೀತಿ ಹೊರಜಗತ್ತು ಬೇರೆ ಎಂದೆನ್ನಿಸಿದರೂ, ಅದು ನಿನ್ನೊಳಗಡೆ ಸೇರಿಕೊಂಡರೆ ನಿನಗೆ ಯಾವ ಶತ್ರು(ಅರಿ)ಗಳೂ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The packet of food on the head is a burden to one who walks,
But on digestion it becomes fresh energy and strength to him.
When once the outer world merges in your inner self,
Who is a foe to you in the world – Marula Muniya (724)
(Translation from "Thus Sang Marula Muniya" by Sri. Narasimha Bhat)

Tuesday, February 17, 2015

ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ (723)

ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ |
ತಂದೆ ನಿನ್ನೆಯೊ (ಇಂದೊ) ನಾಳೆಯೇ ಮಗನೊ ||
ಹಿಂದು-ಮುಂದುಗಳ ಮರೆತಿಂದು ಬಾಳ್ವುದು ಸರಿಯೆ |
ಇಂದನಂತದ ಭಾಗ - ಮರುಳ ಮುನಿಯ || (೭೨೩)

(ಇಂದ್+ಎಂಬುದು+ಈಚಣವೊ)(ನಾವ್+ಉಸಿರ‍್ವಷ್ಟು)(ಮರೆತು+ಇಂದು)(ಇಂದು+ಅನಂತತ)

ಈವತ್ತು ಎನ್ನುವುದು ಈ ಕ್ಷಣ (ಚಣ) ಮತ್ತು ಅದು ನಮ್ಮಲ್ಲಿ ಉಸಿರು ಇರುವಷ್ಟು ಹೊತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಈವತ್ತು ತಂದೆಯಾಗಿರುವವನು, ನಾಳೆ ಮಗನಾಗಿ ಹುಟ್ಟುತ್ತಾನೋ? ನಾವು ಈ ಹಿಂದು ಮತ್ತು ಮುಂದುಗಳನ್ನು ಮರೆತು ಜೀವನವನ್ನು ನಡೆಸುವುದು ಸರಿಯೇನು? ಈವತ್ತೆನ್ನುವುದು ಅನಂತಕಾಲದ ಒಂದು ಅಂಶವಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is today? Is it just this moment or our entire life till our last breath?
The father of yesterday or today, may be the son tomorrow,
Is it then proper to live in the present forgetting the past and the future?
Today is just a minute fraction of eternity – Marula Muniya (723)
(Translation from "Thus Sang Marula Muniya" by Sri. Narasimha Bhat)

Monday, February 16, 2015

ಜಾತಿ ಮತ ಕುಲ ಭೇದ ಲೋಕ ಕಾರ್ಯದಿ ಗಣ್ಯ (722)

ಜಾತಿ ಮತ ಕುಲ ಭೇದ ಲೋಕ ಕಾರ್ಯದಿ ಗಣ್ಯ |
ಪ್ರೀತಿನೀತಿಗಳಲಿ ಸುಖದುಃಖಭಯಗಳಲಿ ||
ಜಾತರೆಲ್ಲರುಮೊಂದೆ ಭೇದಂಗಳೇನುಂಟು |
ಆತುಮದ ಅನುಭವದಿ - ಮರುಳ ಮುನಿಯ || (೭೨೨)

(ಜಾತರ್+ಎಲ್ಲರುಂ+ಒಂದೆ)(ಭೇದಂಗಳ್+ಏನ್+ಉಂಟು)

ಜಾತಿ, ಕುಲ, ಪಂಗಡ, ಈ ವ್ಯತ್ಯಾಸಗಳು ಜಗತ್ತಿನ ಕೆಲಸಕಾರ್ಯಗಳಲ್ಲಿ ಲೆಕ್ಕಕ್ಕೆ ಬರುತ್ತವೆ. ಅನುರಾಗ, ಸಂತೋಷ, ನಿಯಮಪಾಲನೆ, ಸುಖ, ದುಃಖ ಮತ್ತು ಭಯಗಳನ್ನನುಭವಿಸುವುದರಲ್ಲಿ. ಪ್ರತಿಯೊಬ್ಬರ ಅನುಭವ ಒಂದೇ ತೆರನಾಗಿ ಇರುತ್ತದೆ. ಭೇದ ಭಾವಗಳು ಆತ್ಮದ ಅನುಭವಿಕೆಯಲ್ಲಿ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Differences of caste, creed and religion, count in worldly matters
But moral conduct, love, happiness, sorrow and fear
All human beings are equal. What difference is there
In Self-experience? – Marula Muniya (722)
(Translation from "Thus Sang Marula Muniya" by Sri. Narasimha Bhat)

Friday, February 13, 2015

ಕೊಳದಿ ನಡುವೆಯದೆಂತೊ ಸುಳಿಯೆದ್ದು ಬಳೆಯಾಗಿ (721)

ಕೊಳದಿ ನಡುವೆಯದೆಂತೊ ಸುಳಿಯೆದ್ದು ಬಳೆಯಾಗಿ |
ವಲಯವಲಯಗಳಾಗುತಂಚು ಸೋಕುವವೋಲ್ ||
ಕಳೆ ನಿನ್ನೆದೆಯೊಳೆದ್ದು ವಲಯವಲಯಗಳಾಗಿ |
ಇಳೆಯೆಲ್ಲ ಸೋಕುವುದು - ಮರುಳ ಮುನಿಯ || (೭೨೧)

(ನಡುವೆ+ಅದು+ಎಂತೊ)(ವಲಯಗಳ್+ಆಗುತ+ಅಂಚು)(ನಿನ್ನ+ಎದೆಯ+ಒಳ್+ಎದ್ದು)()

ಒಂದು ಕೆರೆಯ ಮಧ್ಯೆ ಸುಳಿಯು ಹುಟ್ಟಿಕೊಂಡು, ಬಳೆಯಾಕಾರದಲ್ಲಿ, ವರ್ತುಲಾಕಾರವಾಗಿ ದಡವನ್ನು ಮುಟ್ಟುವಂತೆ, ಒಂದು ಕಾಂತಿ(ಕಳೆ)ಯು ನಿನ್ನ ಹೃದಯದ ಮಧ್ಯದಲ್ಲಿ ಎದ್ದು ವರ್ತುಲಾಕಾರವಾಗಿ ಜನರನ್ನೆಲ್ಲ ತಾಗಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Somehow circular wave arises in the middle of a lake
And then expands around in circles and touches the sides,
Radiance in your heart likewise spreads out in circles
And reaches the entire world – Marula Muniya (721)
(Translation from "Thus Sang Marula Muniya" by Sri. Narasimha Bhat)