Tuesday, July 31, 2012

ಕಂಗಳಿಗೆ ಮೆಯ್ದೋರಿ ಕರೆಗೆ ಮಾರುಲಿಯುಲಿದು (254)

ಕಂಗಳಿಗೆ ಮೆಯ್ದೋರಿ ಕರೆಗೆ ಮಾರುಲಿಯುಲಿದು |
ಸಂಕಟದಿ ಬಂದು ಬಳಿಯಿರುವೆ ನಾನೆಂದು ||
ಸಂಗಡಿಗನಾಗಲೊಲ್ಲದ ದೈವವಾರ‍್ಗೇನು ? |
ತಿಂಗಳಿಲ್ಲದೆ ಶಶಿಯೆ - ಮರುಳ ಮುನಿಯ || (೨೫೪)

(ಮೆಯ್+ತೋರಿ)(ಮಾರುಲಿ+ಉಲಿದು)(ನಾನ್+ಎಂದು)(ಸಂಗಡಿಗನ್+ಆಗಲು+ಒಲ್ಲದ)(ದೈವವು+ಆರ‍್ಗೇನು)(ತಿಂಗಳು+ಇಲ್ಲದೆ)

ನಮ್ಮ ಕಣ್ಣುಗಳಿಗೆ ಕಾಣಿಸಿಕೊಂಡು, ನಮ್ಮ ಕೂಗುಗಳಿಗೆ ಪ್ರತಿಧ್ವನಿಸಿ(ಮಾರುಲಿ), ನಾವು ಕಷ್ಟ, ತಾಪತ್ರಯ ಮತ್ತು ದುಃಖಗಳಲ್ಲಿರುವಾಗ ತಾನು ನಮ್ಮ ಹತ್ತಿರವಿರುವೆನೆಂದು ಬಂದು ನಮ್ಮ ಜೊತೆಗಾರನಾಗಲು ಇಚ್ಛಿಸಿದ ದೈವದಿಂದ ನಮಗೆ ಆಗಬೇಕಾದದ್ದೇನೂ ಇಲ್ಲ. ಬೆಳದಿಂಗಳನ್ನು (ತಿಂಗಳ್) ಕೊಡದ ಚಂದ್ರನಿಂದೇನುಪಯೋಗ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

 Of what use is God who doesn’t physically appear before our eyes?
Who doesn’t respond to our call with a favorable reply,
And who doesn’t stand by our side as a companion at time of distress?
Who needs the moon without moonlight? – Marula Muniya
(Translation from "Thus Sang Marula Muniya" by Sri. Narasimha Bhat)

Monday, July 30, 2012

ಜೀವ ಜೀವಂ ಬೇರೆ ಜೀವಚರಿತಂ ಬೇರೆ (253)

ಜೀವ ಜೀವಂ ಬೇರೆ ಜೀವಚರಿತಂ ಬೇರೆ |
ಜೀವಿಸೈ ನಿನ್ನಂತೆ ನೀನು ನೈಜದಲಿ ||
ಪಾವನಂಬರೆಸು ಜೀವವ ದಿವಸದಿಂ ದಿನಕೆ |
ದೈವಕ್ಕೆ ತಲೆಬಾಗು - ಮರುಳ ಮುನಿಯ || (೨೫೩)

ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯೂ ಪ್ರತ್ಯೇಕವಾಗಿರುತ್ತದೆ. ಒಂದು ಜೀವಿಯಂತೆ ಮತ್ತೊಂದು ಜೀವಿ ಇಲ್ಲ. ಹಾಗೆಯೇ ಅವುಗಳ ನಡವಳಿಕೆಯೂ ಬೇರೆ ಬೇರೆ ತರಹವಾಗಿರುತ್ತವೆ. ನೀನು ನಿನ್ನಂತೆಯೇ ಸಹಜ(ನೈಜ)ವಾಗಿ ಜೀವನವನ್ನು ನಡೆಸು. ದಿನದಿಂದ ದಿನಕ್ಕೆ ನಿನ್ನ ಜೀವವನ್ನು ಪಾವನಗೊಳಿಸು, ದೈವಕ್ಕೆ ಶರಣಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every soul is different from the other and each has its own past
Live your life like yourself, safeguarding your identity
Make your life purer and purer from day to day,
Bow before God at all times – Marula Muniya
(Translation from "Thus Sang Marula Muniya" by Sri. Narasimha Bhat)

Friday, July 27, 2012

ಉದ್ಯಮದಿ ಸಂಯಮಂ ಪೌರುಷನಯದ್ವಯಂ (252)

ಉದ್ಯಮದಿ ಸಂಯಮಂ ಪೌರುಷನಯದ್ವಯಂ |
ಸದ್ಯೋಚಿತಪ್ರಕಾರವನರಿತ ಸಾಸಂ ||
ಆದ್ಯಕರ್ತನನುಗ್ರಹಿಸಲಹುದು ಪುರುಷಂಗೆ |
ಸದ್ವಿಜಯಮೈ ದಿಟದಿ - ಮರುಳ ಮುನಿಯ || (೨೫೨)

(ಸದ್ಯ+ಉಚಿತ+ಪ್ರಕಾರವನ್+ಅರಿತ)(ಆದ್ಯಕರ್ತನ್+ಅನುಗ್ರಹಿಸಲ್+ಅಹುದು)(ಸತ್+ವಿಜಯಮೈ)

ಕೆಲಸ ಮಾಡುವುದರಲ್ಲಿ ಹತೋಟಿ ಮತ್ತು ಧೀರತನದ ಎರಡು ನಾಜೂಕತೆಗಳು, ಆಯಾ ಸಮಯಕ್ಕೆ ಯೋಗ್ಯವಾದದ್ದನ್ನು ಮಾಡುವ ರೀತಿಗಳನ್ನು ತಿಳಿದು ಪರಾಕ್ರಮಗಳನ್ನು ತೋರಿಸುವುದು, ಪ್ರಮುಖ ಮತ್ತು ಶ್ರೇಷ್ಠನಾಗಿರುವ ಭಗವಂತನು ಇವುಗಳನ್ನು ಪುರುಷನಿಗೆ ಅನುಗ್ರಹಿಸಲು, ಅವನಿಗೆ ನಿಜವಾಗಿ ಒಳ್ಳೆಯ ಯಶಸ್ಸು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to God in every difficulty you face in life
God only makes and unmakes everything
There is nothing except God’s omnipotent authority
God alone is your best refuge – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 26, 2012

ಜೀವನದ ಕಷ್ಟದಲಿ ದೈವವನೆ ನಂಬಿ ನೀಂ (251)

ಜೀವನದ ಕಷ್ಟದಲಿ ದೈವವನೆ ನಂಬಿ ನೀಂ |
ದೈವ ಮಾಡಿಪುದೆಲ್ಲವನು ತಡೆವುದೆಲ್ಲ ||
ದೈವದಧಿಕಾರದಿಂ ಪೆರತೊಂದುಮಿರದಲ್ಲಿ |
ದೈವವೇ ಪರಮಗತಿ - ಮರುಳ ಮುನಿಯ || (೨೫೧)

(ಮಾಡಿಪುದು+ಎಲ್ಲವನು)(ದೈವದ+ಅಧಿಕಾರದಿಂ)(ಪೆರತು+ಒಂದುಂ+ಇರದು+ಅಲ್ಲಿ)

ಜೀವನವನ್ನು ನಡೆಸುವಾಗ ಬರುವ ಕಷ್ಟಗಳಲ್ಲಿ ನೀನು ದೈವದಲ್ಲಿ ವಿಶ್ವಾಸವನ್ನಿಡು. ಈ ಪ್ರಪಂಚದಲ್ಲಿ ಎಲ್ಲವನ್ನೂ ನಡೆಸುವುದು ಮತ್ತು ತಡೆಯುವುದೂ ಸಹ ದೈವವೇ. ದೈವದ ಅಧಿಕಾರವನ್ನು ಬಿಟ್ಟು ಬೇರೆ ಯಾವುದರ ಅಧಿಕಾರವೂ ಇಲ್ಲಿಲ್ಲ. ದೈವವನ್ನು ನಂಬುವುದೇ ಶ್ರೇಷ್ಠವಾದ ಮೋಕ್ಷವನ್ನು ಹೊಂದುವುದಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to God in every difficulty you face in life
God only makes and unmakes everything
There is nothing except God’s omnipotent authority
God alone is your best refuge – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 25, 2012

ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? (250)

ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? |
ನಿತ್ಯ ಕಿಸಲಯ ಕುಸುಮ ನವಸೃಷ್ಟಿ ವೀಕ್ಷೆ ||
ಉದ್ಯತನ್ ಬ್ರಹ್ಮನಂತನವರತ ಸೃಷ್ಟಿಯಲಿ |
ಸದ್ಯಸ್ಕತಾ ತೋಷಿ - ಮರುಳ ಮುನಿಯ || (೨೫೦)

(ಉದ್ಯಾನದ+ಉಜ್ಜುಗೆಯ)(ಬ್ರಹ್ಮನಂತೆ+ಅನವರತ)

ಒಂದು ಉಪವನದಲ್ಲಿ ಕೆಲಸ ಮಾಡುವವನ ದುಡಿಮೆಗೆ ಫಲವೇನು ? ಪ್ರತಿದಿನವೂ ಹೊಸ ಹೊಸದಾಗಿ ಹುಟ್ಟುವ ಹೂವುಗಳು ಅರಳುವುದು (ಕಿಸ), ಬಾಡುವುದು (ಲಯ) ಮತ್ತು ಹೊಸ ಸೃಷ್ಟಿಯನ್ನು ಉತ್ಪಾದಿಸುವುದನ್ನು ನೋಡುವುದೇ (ವೀಕ್ಷೆ) ಅವನ ಕೆಲಸಕ್ಕೆ ಪ್ರತಿಫಲ. ಕರ್ತವ್ಯನಿಷ್ಠ ವ್ಯಕ್ತಿಯೂ ಸಹ ಪರಬ್ರಹ್ಮನಂತೆ ನಿರಂತರವಾದ ಈ ಸೃಷ್ಟಿಯಲ್ಲಿ, ಆಯಾ ಸಮಯದಲ್ಲಿ ತನಗೆ ದೊರೆತಿರುವುದನ್ನು ಕಂಡು ಅನುಭವಿಸಿ ಸಂತೋಷಿಸುತ್ತಾನೆ (ಸದ್ಯಸ್ಕತಾತೋಷಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the reward for the gardener’s assiduous labour?
Witnessing new tender leaves and flowers every day.
Brahma likewise is ever busy with creation
He enjoys every moment of happiness – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 24, 2012

ಬೇಸಿಗೆಯೊಳೆಂದೊ ಸಂಜೆಯೊಳಾವಗಮೊ ಮೆಲನೆ (249)

ಬೇಸಿಗೆಯೊಳೆಂದೊ ಸಂಜೆಯೊಳಾವಗಮೊ ಮೆಲನೆ |
ಬೀಸಿ ತಂಗಾಳಿ ತಾನಾಗಿ ಬರುವಂತೆ ||
ಈಶಕೃಪೆ ಬೀಸೀತು ಮನದಳಲ ನೀಗೀತು |
ಸೈಸು ನೀನದುವರಂ - ಮರುಳ ಮುನಿಯ || (೨೪೯)

(ಬೇಸಿಗೆಯೊಳ್+ಎಂದೊ)(ಸಂಜೆಯೊಳ್+ಆವಗಮೊ)(ಮನದ+ಅಳಲ)(ನೀನ್+ಅದುವರಂ)

ಸೆಕೆಗಾಲದಲ್ಲಿ ಯಾವಾಗಲೋ ಒಂದು ಸಲ, ಸಾಯಂಕಾಲದ ಯಾವುದೋ ಒಂದು ಹೊತ್ತಿನಲ್ಲಿ, ನಿಧಾನವಾಗಿ ತಂಪಾದ ಗಾಳಿಯು ತಾನೇ ತಾನಾಗಿ ಬೀಸಿಕೊಂಡು ಬಂದು ನಮಗೆ ಸಂತೋಷ ಮತ್ತು ತೃಪ್ತಿಯನ್ನುಂಟುಮಾಡುವಂತೆ ಪರಮಾತ್ಮನ ಅನುಗ್ರಹವೆಂಬ ಗಾಳಿಯೂ ಸಹ ಬೀಸಿ ಮನಸ್ಸಿನ ದುಃಖ(ಅಳಲ್) ಮತ್ತು ಚಿಂತೆಗಳನ್ನು ಕಳೆಯಬಹುದು. ನೀನು ಅಲ್ಲಿಯವರೆಗೆ ನಿನ್ನ ಪಾಲಿಗೆ ಬಂದ ದುಃಖ ಮತ್ತು ದುಮ್ಮಾನಗಳನ್ನು ಸಹಿಸಿಕೊಂಡಿರು (ಸೈಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the cool breeze that comes blowing slowly at its own free will
Sometimes on some summer evenings
God’s grace would come and blow off your sorrows
Endure everything patiently till then – Marula Muniya
(Translation from "Thus Sang Marula Muniya" by Sri. Narasimha Bhat)

Monday, July 23, 2012

ಕಡಲ ಪನಿಯೊಂದು ಕಡಲನು ತಣಿಪ ಮರ್ಯಾದೆ (248)

ಕಡಲ ಪನಿಯೊಂದು ಕಡಲನು ತಣಿಪ ಮರ್ಯಾದೆ |
ಗಿಡದ ಹೂವೊಂದು ಗಿಡವನರ್ಚಿಸುವ ರೀತಿ ||
ಪೊಡವಿಯನ್ನು ಮಣ್ಣ ಹಿಡಿಯೊಂದು ಪೂಜಿಪ ಸೊಗಸು |
ಬಡಜೀವ ದೇವನನು - ಮರುಳ ಮುನಿಯ || (೨೪೮)

(ಗಿಡವನು+ಅರ್ಚಿಸುವ)

ಸಮುದ್ರದ ನೀರಿನ ಹನಿಯು ಹೇಗೆ ಸಮುದ್ರವನ್ನು ತೃಪ್ತಿಪಡಿಸುವಂತಹ ಸೌಜನ್ಯದ ವರ್ತನೆಯನ್ನು ತೋರುತ್ತದೆಯೋ, ಗಿಡದಲ್ಲಿ ಬಿಟ್ಟಿರುವ ಹೂವು ಆ ಗಿಡವನ್ನು ಹೇಗೆ ಆರಾಧಿಸುವುದೋ ಮತ್ತು ಭೂಮಿಯನ್ನು ಒಂದು ಹಿಡಿ ಮಣ್ಣು ಯಾವ ಸೊಗಸಿನಿಂದ ಪೂಜಿಸುತ್ತದೆಯೋ, ಇದೇ ರೀತಿ ಒಂದು ಬಡಜೀವವು ಪರಮಾತ್ಮನನ್ನು ಆರಾಧಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The etiquette of a seawater drop cooling all the sea
The manner of a flower worshipping flower plant,
The grace of a handful of soil adoring the whole earth
Are present in a poor soul worshipping God – Marula Muniya
(Translation from "Thus Sang Marula Muniya" by Sri. Narasimha Bhat)

Friday, July 20, 2012

ರಾಘವಾಕೃತಿಯ ತಾಂ ಕಣ್ಣಾರೆ ಕಾಣದಿರೆ (247)

ರಾಘವಾಕೃತಿಯ ತಾಂ ಕಣ್ಣಾರೆ ಕಾಣದಿರೆ |
ತ್ಯಾಗರಾಜನ ಮುಖದೆ ಲಲಿತ ಭಾವಗಳು ||
ರಾಗರಾಗಗಳಾಗಿ ಪರಿದು ಬರುತಿರ‍್ದಪುವೆ ? |
ವಾಗ್ಗೇಯ ಸತ್ಯವದು - ಮರುಳ ಮುನಿಯ || (೨೪೭)

(ರಾಘವ+ಆಕೃತಿಯ)(ಕಾಣದೆ+ಇರೆ)

ರಾಮನ ಸುಂದರವಾದ ರೂಪವನ್ನು ತನ್ನ ಕಣ್ಣುಗಳಿಂದ ಸ್ವತಃ ನೋಡದಿದ್ದಲ್ಲಿ, ತ್ಯಾಗರಾಜರ ಬಾಯಿಂದ ಮನೋಹರ ಮತ್ತು ಕೋಮಲವಾದ ಭಾವನೆಗಳು ವಿಧವಿಧವಾದ ರಾಗಗಳಲ್ಲಿ ಹರಿದು ಬರಲು ಸಾಧ್ಯವಾಗುತ್ತಿತ್ತೇನು ? ಇದು ಕೃತಿರಚಿಸಿ ಹಾಡುವವನಲ್ಲಿ ಕಂಡುಬರುವ ಸತ್ಯವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If Thyagaraja had not seen the vision of Shri Rama with his own eyes,
How could have the graceful emotions flowed out
Through his face in so many moving tunes?
What he sang was the truth he experienced – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 19, 2012

ಕಣ್ಣ ತುಂಬಲು ಕೇಶವಾಕಾರವಿರದೆ ಜ- (246)

ಕಣ್ಣ ತುಂಬಲು ಕೇಶವಾಕಾರವಿರದೆ ಜ- |
ಕ್ಕಣ್ಣನಾ ಬೇಲೂರ ದೇಗುಲದೊಳೆಂತಾ- ||
ಚನ್ನೆಯರ ಮನ್ನೆಯರ ರಸಿಕ ಪ್ರಸನ್ನೆಯರ |
ಸನ್ನೆಗಳ ತರಲಾಯ್ತು? - ಮರುಳ ಮುನಿಯ || (೨೪೬)

(ಕೇಶವ+ಆಕಾರ+ಇರದೆ)(ಜಕ್ಕಣ್ಣನು+ಆ)(ದೇಗುಲದೊಳು+ಎಂತು+ಆ)(ತರಲು+ಆಯ್ತು)

ತನ್ನ ಕಣ್ಣುಗಳನ್ನು ತುಂಬಲು ಚೆನ್ನಕೇಶವನ ಆಕಾರ ಅವನ ಮನಸ್ಸಿನಲ್ಲಿಲ್ಲರದಿದ್ದಲ್ಲಿ ಜಕ್ಕಣಾಚಾರಿ ಶಿಲ್ಪಿಯು ಬೇಲೂರಿನ ದೇವಸ್ಥಾನದೊಳಗೆ ಚೆಲುವೆಯರ ಮತ್ತು ಗೌರವಾನ್ವಿತ ರಸಿಕರನ್ನು ಮೆಚ್ಚಿಸುವ ಕೋಮಲೆಯರ ಭಂಗಿ ಭಣಿತಗಳನ್ನು ತರಲು ಹೇಗೆ ಶಕ್ಯವಾಗುತ್ತಿತ್ತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If the images of Keshava had not filled his eyes
How could Jakkanna bring out the attractive postures and signals?
Of the beautiful dignified graceful, happy maidens
Inside the temple of Bellur? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 18, 2012

ಮೆಚ್ಚಿದರು ಮೂರ‍್ಮಂದಿ ಪೆಚ್ಚೆಂದರಾರ‍್ಮಂದಿ (245)

ಮೆಚ್ಚಿದರು ಮೂರ‍್ಮಂದಿ ಪೆಚ್ಚೆಂದರಾರ‍್ಮಂದಿ |
ಸ್ವಚ್ಚಮತಿಗಿದು ಹುಚ್ಚು ಹುಚ್ಚು ಕೃತಿ ತಾನೇ? ||
ನೆಚ್ಚಿ ಬಾಳ್ವಜ್ಞಂಗೆ ಕಗ್ಗ ಮರುಕಗ್ಗ ರುಚಿ |
ಅಚ್ಯುತ ಹಸಾದ ರುಚಿ - ಮರುಳ ಮುನಿಯ || (೨೪೫)

(ಮೂರ್+‍ಮಂದಿ)(ಪೆಚ್ಚು+ಎಂದರು+ಆರ‍್+ಮಂದಿ)(ಸ್ವಚ್ಚಮತಿಗೆ+ಇದು)(ಬಾಳ್ವ+ಅಜ್ಞಂಗೆ)

ಕಗ್ಗವನ್ನು ಮೂರು ಜನರು ಓದಿ ಸಂತೋಷಪಟ್ಟರೆ, ಆರು ಮಂದಿ ಅದು ದಡ್ಡತನ (ಪೆಚ್ಚು) ಎಂದರು. ಶುದ್ಧ ಮತ್ತು ಶುಭ್ರವಾಗಿರುವ ಬುದ್ಧಿಗೆ ಇದು ಒಂದು ಹುಚ್ಚು ಕೃತಿಯೆಂದು ತೋರಬಹುದು. ಆದರೆ ಇದರ ತತ್ತ್ವಗಳನ್ನೇ ನಂಬಿ (ನೆಚ್ಚಿ) ಬಾಳನ್ನು ನಡೆಸುತ್ತಿರುವನಿಗೆ ಮಂಕುತಿಮ್ಮನ ಕಗ್ಗ ಮತ್ತು ಮರುಳಮುನಿಯನ ಕಗ್ಗಗಳು ಆಸ್ವಾದಕರವಾಗಿ ಕಾಣುತ್ತವೆ. ಪರಮಾತ್ಮನ ಚ್ಯುತಿಯಿಲ್ಲದಿರುವ ಪ್ರಸಾದವು (ಹಸಾದ) ಅವನಿಗೆ ಬಹು ರುಚಿಕರವಾಗಿ ಕಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The three admired it, but the six ridiculed it as quite foolish
Of course to the wise sage this is somewhat a childish work
But both the Kaggas are liked by the unsophisticated lover of life
Blessed  is God’s grace – Marula Muniya
(Translation from "Thus Sang Marula Muniya" by Sri. Narasimha Bhat)

Monday, July 16, 2012

ಆಕಾರವೆನೆ ರೂಪನಿಯತಿಯದು ಗಾತ್ರಮಿತಿ (244)

ಆಕಾರವೆನೆ ರೂಪನಿಯತಿಯದು ಗಾತ್ರಮಿತಿ |
ರೇಖೆಯೊಳು ಮಿತಬಡಿಸುವೆಯ ಅಪರಿಮಿತವ ? ||
ಬೇಕು ಮಿತಮತಿಯ ಹಿಡಿತಕೆ ಹಿರಿಯ ಗುರುತೊಂದು |
ಸಾಕಾರಮಂತುಚಿತ - ಮರುಳ ಮುನಿಯ || (೨೪೪)

(ಗುರುತು+ಒಂದು)(ಸಾಕಾರಮಂತು+ಉಚಿತ)

ಆಕಾರವೆನ್ನುವುದು ರೂಪದ ನಿಯಮ. ಆದರೆ ದೇಹವು ಒಂದು ಪರಿಮಿತಿಯಲ್ಲಿರುತ್ತದೆ. ಎಲ್ಲೆಯಿರದಿರುವ ಸತ್ತ್ವವನ್ನು ಒಂದೇ ಗೆರೆಯಲ್ಲಿ ಹಿಡಿಯಬಯಸುವೆಯೇನು? ಮಿತವಾದ ಬುದ್ಧಿಶಕ್ತಿಯ ಹಿಡಿತಕ್ಕೆ ಒಂದು ದೊಡ್ಡ ಚಿಹ್ನೆ ಬೇಕು. ಅದಕ್ಕೆ ಸರಿಯಾಗಿರುವುದು ಆಕಾರ ಮತ್ತು ರೂಪವಿರುವ ವಸ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An image is a fixed form of right proportions
Can you limit the limitless within lines?
However a proper symbol is needed for the limited mind to grasp
Appropriate therefore is a concrete form – Marula Muniya
(Translation from "Thus Sang Marula Muniya" by Sri. Narasimha Bhat)

Friday, July 13, 2012

ದೇವನಲಿ ಭಕ್ತಿ ದೈಹಿಕ ಭೋಗದಿ ವಿರಕ್ತಿ (243)

ದೇವನಲಿ ಭಕ್ತಿ ದೈಹಿಕ ಭೋಗದಿ ವಿರಕ್ತಿ |
ಜೀವಲೋಕದಿ ಮೈತ್ರಿಯೀ ತ್ರಿದಳಬಿಲ್ವಂ ||
ಭಾವುಕನೊಳಧ್ಯಾತ್ಮದಲ್ಲಿ ಪಲ್ಲವಿಸಿರಲು |
ಪಾವನವೊ ಜನ್ಮಕ್ಕೆ - ಮರುಳ ಮುನಿಯ || (೨೪೨)

(ಭಾವುಕನೊಳು+ಅಧ್ಯಾತ್ಮದಲ್ಲಿ)(ಪಲ್ಲವಿಸಿ+ಇರಲು)

ದೇವರಲ್ಲಿ ಭಕ್ತಿ, ದೇಹಕ್ಕೆ ಸಂಬಂಧಿಸಿದ ಸುಖಾನುಭವಗಳಲ್ಲಿ ವಿರಕ್ತಿ, ಜೀವಿಗಳು ತುಂಬಿರುವ ಈ ಜಗತ್ತಿನ ಜೊತೆ ಸ್ನೇಹದಿಂದಿರುವುದು. ಈ ರೀತಿಯ ಮೂರು ಎಲೆಗಳ ಬಿಲ್ವಪತ್ರೆಗಳು, ಸದಭಿರುಚಿಯುಳ್ಳ ಭಾವಜೀವಿಯ ಅಂತರಂಗದ ಅಧ್ಯಾತ್ಮದಲ್ಲಿ ವಿಕಾಸವಾದಾಗ (ಪಲ್ಲವಿಸು) ಅದು ಬಾಳಿಗೆ ಪರಿಶುದ್ಧಿಯನ್ನು ತರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the three-petalled bilva of devotion to God
Detachment from the sense enjoyment and overflowing love for all living beings
Blooms with green petals in an aspirant’s spiritual space
Blessed becomes his Life – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 12, 2012

ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ (242)

ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ |
ಚರ್ಚೆ ತರ್ಕ ವಿಚಾರ ಮತಿಯ ವಿಶದತೆಗೆ ||
ಪೆರ‍್ಚಿದ ತಪೋಯೋಗಯಜ್ಞಾದಿಯಾತುಮದ |
ವರ್ಚಸ್ಸಿಗಪ್ಪುದೆಲೊ - ಮರುಳ ಮುನಿಯ || (೨೪೨)

(ತಪೋಯೋಗ+ಯಜ್ಞ+ಆದಿ+ಆತುಮದ)(ವರ್ಚಸ್ಸಿಗೆ+ಅಪ್ಪುದು+ಎಲೊ)

ಪೂಜೆ, ಜಪ, ಧ್ಯಾನ ಮತ್ತು ತೀರ್ಥಯಾತ್ರೆಗಳು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೂ, ವಾದ ವಿವಾದಗಳು, ತರ್ಕ ಮತ್ತು ಅಲೋಚನೆಗಳು ಬುದ್ಧಿಯ ಖಚಿತತೆಗೂ ಮತ್ತು ಇವೆಲ್ಲಕ್ಕಿಂತಲೂ ಮಿಗಿಲಾದ ತಪಸ್ಸು, ಯೋಗ ಮತ್ತು ಯಜ್ಞ ಇತ್ಯಾದಿಗಳು ಆತ್ಮದ ತೇಜಸ್ಸಿಗೂ ಯೋಗ್ಯವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Worship, prayer, meditation and pilgrimage are for mind’s welfare
Discussions and arguments for clear understanding
Penance and selfless service are taken up
To make the Atman radiant – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 11, 2012

ಕರ್ಮವಶದಿಂ ಸ್ಥಾನ ನಿಯತ ಲೋಕದಿ ನಿನಗೆ (241)

ಕರ್ಮವಶದಿಂ ಸ್ಥಾನ ನಿಯತ ಲೋಕದಿ ನಿನಗೆ |
ಧರ್ಮನಿಶ್ಚಯವಪ್ಪುದಾ ಸ್ಥಾನದಂತೆ ||
ಭರ್ಮ ಸಂದಾಯ ನಿನಗಾಧರ್ಮಸಾಧನಕೆ |
ಮರ್ಮವಿದು ಧನ ನಯದಿ - ಮರುಳ ಮುನಿಯ || (೨೪೧)

(ಧರ್ಮನಿಶ್ಚಯ+ಅಪ್ಪುದು+ಆ)(ನಿನಗೆ+ಆ+ಧರ್ಮಸಾಧನಕೆ)(ಮರ್ಮ+ಇದು)

ನಿನ್ನ ಪೂರ್ವಜನ್ಮಗಳ ಕರ್ಮಗಳ ವಶದಿಂದ ಈ ಜಗತ್ತಿನಲ್ಲಿ ನಿನಗೆ ಒಂದು ಜಾಗ ಮತ್ತು ಪದವಿ ನಿಶ್ಚಯಪಡಿಸಲ್ಪಟ್ಟಿದೆ. ಆ ಪದವಿ ಮತ್ತು ಜಾಗಕ್ಕೆ ತಕ್ಕಂತೆ ನೀನು ಧರ್ಮವನ್ನು ಪಾಲಿಸುವ ನಿರ್ಣಯಗಳು ಆಗುತ್ತವೆ. ಆ ಧರ್ಮವನ್ನು ನೀನು ಪಾಲಿಸುವುದಕ್ಕೋಸ್ಕರ ನಿನಗೆ ಭತ್ಯವು(ಭರ್ಮ) ದೊರಕುತ್ತದೆ. ಅರ್ಥಶಾಸ್ತ್ರ (ಧನನಯ)ದಲ್ಲಿರುವ ಗುಟ್ಟಿದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Your place in the world is decided according to your past Karma
Your duties in the world are decided according to your place,
Salary to you is paid so that you can ably discharge your duties
This is the guiding principle of your economics – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 10, 2012

ಅಹಮನಹಮುಗಳ್ ಜೀವರಥಕೆರಡು ಕೀಲುಗಳು (240)

ಅಹಮನಹಮುಗಳ್ ಜೀವರಥಕೆರಡು ಕೀಲುಗಳು |
ಬಹುವೇಗಮಹಮಿಂದೆ ವೇಗಮಿತಿಗನಹಂ ||
ವಿಹಿತಮಿದ್ದೊಡಹಂತೆ ನಿರಹಂತೆಯಾಜ್ಞೆಯಲಿ |
ಸುಹಿತ ರಥಸಂಚಾರ - ಮರುಳ ಮುನಿಯ || (೨೪೦)

(ಅಹಮ್+ಅನಹಮುಗಳ್)(ಜೀವರಥಕೆ+ಎರಡು)(ಬಹುವೇಗಮ್+ಅಹಂ+ಇಂದೆ)(ವೇಗಮಿತಿಗೆ+ಅನಹಂ)
(ವಿಹಿತಂ+ಇದ್ದೊಡೆ+ಅಹಂತೆ)(ನಿಃ+ಅಹಂತೆ+ಆಜ್ಞೆಯಲಿ)

ನಮ್ಮಗಳ ಜೀವನಯಾತ್ರೆಯ ತೇರಿ(ರಥ)ಗೆ ಅಹಂಕಾರ ಮತ್ತು ನಿರಹಂಕಾರವೆಂಬ ಎರಡು ಕೀಲುಗಳಿವೆ. ಅಹಂಕಾರವು ಬಹು ರಭಸವಾಗಿರುವಾಗ, ಅದರ ರಭಸವನ್ನು ಮಿತಿಯಲ್ಲಿರಿಸಲು ನಿರಹಂಕಾರದ ಅವಶ್ಯಕತೆ ಇದೆ. ನಿರಹಂಕಾರದ ಅಪ್ಪಣೆಯಲ್ಲಿ ಅಹಂಕಾರವು ಇದ್ದರೆ ಅದು ಸರಿಯಾದದ್ದು. ಅವಾಗ ತೇರಿನ ಪ್ರಯಾಣವು ಹಿತಕರವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ego and egolessness  are the two springs to life’s chariot,
While ego accelerates the speed, egolessness makes it run in the normal speed
It is well and good if ego functions, taking orders from the egolessness
Then the chariot-ride will be smooth – Marula Muniya
(Translation from "Thus Sang Marula Muniya" by Sri. Narasimha Bhat)

Friday, July 6, 2012

ಹೊರಗೆ ಘನಲೋಕ ನಿನ್ನೊಳಗೆ ಸುಯ್ವ ರಹಸ್ಯ (239)

ಹೊರಗೆ ಘನಲೋಕ ನಿನ್ನೊಳಗೆ ಸುಯ್ವ ರಹಸ್ಯ |
ಎರಡಕಂ ನಡುವೆ ಸುಳಿಸುಳಿವ ಮುಗಿಲ ಪೊರೆ ||
ಅರಿತು ನೀಂ ಮೂರನದಕದಕೆ ಸಲುವುದ ಸಲಿಸೆ |
ಇರುವೆಡೆಯೆ ಪರ ನಿನಗೆ - ಮರುಳ ಮುನಿಯ || (೨೩೯)

(ಮೂರನ್+ಅದಕೆ+ಅದಕೆ)(ಇರುವ+ಎಡೆಯೆ)

ಹೊರಗೆ ಗಟ್ಟಿಯಾದ ಪ್ರಪಂಚವಿದೆ. ಆದರೆ ನಿನ್ನ ಒಳಗೆ ಉಸಿರುವ ರಹಸ್ಯವಿದೆ. ಇವೆರಡರ ಮಧ್ಯದಲ್ಲಿ ಮೋಡ(ಮುಗಿಲು)ದ ಪದರವು ಚಲಿಸುತ್ತಿದೆ. ಈ ಮೂರನ್ನೂ ನೀನು ಅರ್ಥಮಾಡಿಕೊಂಡು ಯಾವು ಯಾವುದಕ್ಕೆ ಏನೇನು ಸಂದಾಯವಾಗಬೇಕೋ ಅವುಗಳನ್ನು ತಲುಪಿಸಿದಲ್ಲಿ, ನೀನಿರುವ ಜಾಗದಲ್ಲೇ ನಿನಗೆ ಸದ್ಗತಿ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Solid world outside and the unseen mystery breathing inside,
Layers of clouds sailing between the two,
If you know these three and offer hem their dues
Your own humble place will be heaven to you – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 5, 2012

ವರ್ಗಸೋಪಾನ ನೈಸರ್ಗಿಕ ಸಮಾಜದಲಿ (238)

ವರ್ಗಸೋಪಾನ ನೈಸರ್ಗಿಕ ಸಮಾಜದಲಿ |
ದುರ್ಗತಿಯದೇನಲ್ಲ ತಗ್ಗಿರಲಹಂತೆ ||
ಭರ್ಗನಿತ್ತೆಡೆಯಿಂದಲಾದನಿತು ಸೇವೆಯ ಸ - |
ಮರ್ಪಿಸುತ ಧನ್ಯನಾಗು - ಮರುಳ ಮುನಿಯ || (೨೩೮)

(ದುರ್ಗತಿ+ಅದು+ಏನ್+ಅಲ್ಲ)(ತಗ್ಗಿ+ಇರಲ್+ಅಹಂತೆ)(ಭರ್ಗನು+ಇತ್ತ+ಎಡೆಯಿಂದಲ್+ಆದನಿತು)

ವಿಧವಿಧವಾದ ದರ್ಜೆ ಮತ್ತು ಅಂತಸ್ತುಗಳ ತಾರತಮ್ಯದ ಮೆಟ್ಟಿಲುಗಳು ಸಮಾಜದಲ್ಲಿ ಸಹಜವೇ ಹೌದು. ತಗ್ಗಿ ಬಗ್ಗಿ ನಡೆಯುವುದು ಹೀನ ಸ್ಥಿತಿ ಎಂದೇನು ಎನ್ನಿಸುವುದಿಲ್ಲ. ಈಶ್ವರನು(ಭರ್ಗ) ನಿನಗೆ ಕೊಟ್ಟಿರುವ ಅವಕಾಶದಿಂದ ನಿನ್ನ ಪಾಲಿನ ಭಾಗ್ಯವನ್ನು ಇತರರಿಗೂ ನೀಡುವ ಮೂಲಕ ಕೃತಾರ್ಥನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Stratification of different classes is natural in society,
It’s not such a bad situation if ego is pushed down,
Attain fulfillment by offering the maximum possible service
From whatever place God has allotted to you – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 4, 2012

ಪೂರುಷಂ ಸೃಷ್ಟಿಶಿಶು ಮಾತೆಯೊಳೆ ಕೃತ್ರಿಮದ (237)

ಪೂರುಷಂ ಸೃಷ್ಟಿಶಿಶು ಮಾತೆಯೊಳೆ ಕೃತ್ರಿಮದ |
ಬೇರಿರಲ್ ಸಂತಾನ ಋಜುವಪ್ಪುದೆಂತು ? ||
ನಾರುತೊಗಟಿರದೆ ಮರೆವೆಲ್ಲ ಹೂವಾದಂದು |
ಧಾರುಣಿಗೆ ಶಾಂತಿಯಿಲೊ - ಮರುಳ ಮುನಿಯ || (೨೩೭)

(ಮಾತೆಯ+ಒಳೆ)(ಬೇರ್+ಇರಲ್)(ಋಜು+ಅಪ್ಪುದು+ಎಂತು)(ನಾರುತೊಗಟು+ಇರದೆ)(ಹೂ+ಆದಂದು)

ಮನುಷ್ಯನಾದರೋ ಈ ಸೃಷ್ಟಿಯ ಮಗು. ತಾಯಿಯ ಒಳಗೇ ಕಪಟದ ಬೇರು ಇರುವಾಗ, ಅದರ ಸಂತತಿಯು ಪ್ರಮಾಣಿಕತೆ ಮತ್ತು ನೀತಿಯಿಂದ ಕೂಡಿರಲು ಸಾಧ್ಯವೇನು? ನಾರು ಮತ್ತು ತೊಗಟೆಗಳಿರದೆ ಮರವೆಲ್ಲವು ಪೂರ್ತಿ ಹೂವಿನಿಂದಲೇ ತುಂಬಿಕೊಂಡ ದಿನ, ಭೂತಾಯಿಗೆ ಶಾಂತಿ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Man is a child of nature and how can a child be fully righteous
When the roots of deception are present in mother Nature?
When the tree is all flowers with no fibers and barks
Peace will fill the earth – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 3, 2012

ನೈಸರ್ಗಿಕದಿನಂತರಂಗವಸಮದೊಳಿರಲು (236)

ನೈಸರ್ಗಿಕದಿನಂತರಂಗವಸಮದೊಳಿರಲು |
ವೈಷ್ಯಮ್ಯವೆಂತಿರದು ನರಬಹಿರ್ನಯದೊಳ್ ? ||
ಆಶೆಯಾವೇಗವನವರ್ ಸಮದಿ ತಡೆದಂದು |
ಭೂಶಾಂತಿಗೆಡೆಯಹುದೊ - ಮರುಳ ಮುನಿಯ || (೨೩೬)

(ನೈಸರ್ಗಿಕದಿಂ+ಅಂತರಂಗವು+ಅಸಮದೊಳ್+ಇರಲು)(ವೈಷ್ಯಮ್ಯ+ಎಂತು+ಇರದು)(ಆಶೆಯ+ಆವೇಗವನ್+ಅವರ್)
(ಭೂಶಾಂತಿಗೆ+ಎಡೆ+ಅಹುದೊ)

ಮನುಷ್ಯರ ಮನಸ್ಸು ಮತ್ತು ಹೃದಯಗಳು ಸ್ವಾಭಾವಿಕವಾಗಿ (ನೈಸರ್ಗಿಕ) ಸಮಾನವಾಗಿಲ್ಲದಿರಲು, ಅವನ ಹೊರಜಗತ್ತಿನ ನಡವಳಿಕೆಗಳಲ್ಲಿ (ಬಹಿರ್ನಯ) ಹಗೆತನ ಮತ್ತು ವ್ಯತ್ಯಾಸ(ವೈಷಮ್ಯ)ಗಳು ಇರದಿರಲು ಹೇಗೆ ಸಾಧ್ಯ? ತಮ್ಮ ಬಯಕೆಗಳ ರಭಸವನ್ನು ಅವರು ಸ್ಥಿತಪ್ರಜ್ಞತ್ವದಿಂದ (ಸಮದಿ) ತಡೆದಾಗ, ಭೂಮಿಯಲ್ಲಿ ಶಾಂತಿಗೆ ಜಾಗ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the mind within is in imbalance due to natural tendencies
How can the imbalances in outer conduct be prevented?
When we control the velocity of desires with self-restraint
There will be hope of peace for the world – Marula Muniya
(Translation from "Thus Sang Marula Muniya" by Sri. Narasimha Bhat)

Monday, July 2, 2012

ಸಾಮಾಜಿಕಾಧಿಕೃತಿ ಸಂಪತ್ತುಗಳ ಬಾಹ್ಯ (235)

ಸಾಮಾಜಿಕಾಧಿಕೃತಿ ಸಂಪತ್ತುಗಳ ಬಾಹ್ಯ |
ಸಾಮ್ಯವಿಧಿ ಶೃಂಖಲೆಯ ಜನಕೆ ತೊಡಿಸಿದೊಡೇಂ? ||
ಧೀಮನಗಳಂತರ್ಧನದೊಳವರ್ ಸಮರಾಗೆ |
ಭೂಮಿತಾಯಿಗೆ ಶಾಂತಿ - ಮರುಳ ಮುನಿಯ || (೨೩೫)

(ಸಾಮಾಜಿಕ+ಅಧಿಕೃತಿ)(ತೊಡಿಸಿದೊಡೆ+ಏಂ)(ಧೀಮನಗಳ+ಅಂತರ್+ಧನದೊಳ್+ಅವರ್)(ಸಮರ್+ಆಗೆ)

ಸಮಾಜಕ್ಕೆ ಸಂಬಂಧಪಟ್ಟ ಅಧಿಕಾರದ ಕೆಲಸಗಳಿಂದ ಸಂಪತ್ತನ್ನು ದೊರಕಿಸಲು ಹೊರಜಗತ್ತಿಗೆ ಸಮಾನವಾದ ನಿಯಮಗಳೆಂಬ ಬಂಧನ(ಶೃಂಖಲೆ)ಗಳನ್ನು ಎಲ್ಲ ಜನರಿಗೂ ತೊಡಿಸಿದರೆ ಏನು ಬಂತು? ಒಳಗಿನ ಬುದ್ಧಿಶಕ್ತಿ ಮತ್ತು ಮನಸ್ಸುಗಳ ಸಮಾಧಾನ ಮತ್ತು ತೃಪ್ತಿಗಳಲ್ಲಿ ಅವರೆಲ್ಲರೂ ಸಮಾನರಾದಾಗ ಮಾತ್ರ ಭೂಮಿತಾಯಿಗೆ ಶಾಂತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the use if you outwardly decorate people with the chains of
Socialist order, social authority and socialized wealth?
When people become equal in the inner wealth of mind and intellect
Then only Mother Earth will enjoy peace – Marula Muniya
(Translation from "Thus Sang Marula Muniya" by Sri. Narasimha Bhat)