Friday, December 30, 2011

ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ (133)

ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ-|
ತಾನಪಾಲನೆಯ ಕರ್ತವ್ಯ ಭಾರವನು ||
ಬೋನಕಾಶಿಸಿ ದಾನಿಭಯದೆ ಹೊರುವವನೊರ‍್ವ |
ಸಾನುಕಂಪೆಯಿನೊರ‍್ವ - ಮರುಳ ಮುನಿಯ || (೧೩೩)
(ಬೋನಕೆ+ಆಶಿಸಿ)(ಹೊರುವವನ್+ಒರ‍್ವ)
ತಿಳಿದಂಥವನು ಹೊರುವಂತೆ ಮತ್ತು ಅವನಂತೆಯೇ ಸೃಷ್ಟಿಯ ಪೀಳಿಗೆಗಳ ರಕ್ಷಣೆಯ ಕರ್ತವ್ಯದ ಭಾರವನ್ನು, ಅನ್ನ (ಬೋನಕೆ) ಮತ್ತು ಆಹಾರಕ್ಕೆ ಆಶಿಸಿ, ದಾನಿಯ ಭಯದಿಂದ ಹೊರುವವನು ಒಬ್ಬನಾದರೆ ಸಹಾನುಭೂತಿ ಮತ್ತು ದಯೆಯಿಂದ ಮತ್ತೊಬ್ಬನು ಹೊರುತ್ತಾನೆ.

Thursday, December 29, 2011

ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ (132)

ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ |
ಜನಕಾರ್ಯ ಯಂತ್ರಗಳ ನಿರವಿಸುವ ಚತುರರ್ ||
ಮನುಜಹೃದಯೋದ್ವೇಗ ಶಕ್ತಿಯನು ಯಂತ್ರಕ್ಕೆ |
ವಿನಿಯೋಜಿಸರೇಕೆ - ಮರುಳ ಮುನಿಯ || (೧೩೨)

(ಹೃದಯ+ಉದ್ವೇಗ)(ವಿನಿಯೋಜಿಸರ್+ಏಕೆ)

ಬೀಸುವ ಗಾಳಿಯ ರಭಸ (ಅನಿಲಗತಿ), ನೀರಿನ ಪ್ರವಾಹ (ಜಲಧಾರೆ) ಮತ್ತು ಸೂರ್ಯನ(ದಿನಪ) ಕಿರಣ(ರಶ್ಮಿ)ಗಳಿಂದ ಜನಗಳಿಗೆ ಉಪಯುಕ್ತವಾಗುವ ಯಂತ್ರಗಳನ್ನು ನಿರ್ಮಿಸುವ ನಿಪುಣರು, ಮನುಷ್ಯರ ಹೃದಯಗಳ ಉದ್ರೇಕದ ಶಕ್ತಿಯನ್ನು ಯಂತ್ರ ನಿರ್ಮಾಣಕ್ಕೆ ಏಕೆ ಬಳಸಿಕೊಳ್ಳಲಾರರು (ವಿನಿಯೋಜಿಸು) ?

Wednesday, December 28, 2011

ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ (131)

ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ |
ಕರಣವಾತಂಗೆ ಸೂಕ್ಷ್ಮದ ಕಾಚಯಂತ್ರ ||
ವಿರಚಿಸಿಕೊ ನೀನಂತರಂಗಯಂತ್ರವನಂತು |
ಪರತತ್ತ್ವ ದರ್ಶನಕೆ - ಮರುಳ ಮುನಿಯ || (೧೨೧)

(ಕಣ್ಣಿಂದ+ಅಣುವ)(ಕರಣವು+ಆತಂಗೆ)(ನೀನ್+ಅಂತರಂಗಯಂತ್ರವಂ+ಅಂತು)

ಬರಿಯ ಕಣ್ಣಿನಿಂದ ಒಂದು ಅತಿ ಸೂಕ್ಷ್ಮವಾದ ವಸ್ತುವನ್ನು (ಅಣು) ವಿಜ್ಞಾನಿಯು ಪರೀಕ್ಷಿಸಲು ಸಾಧ್ಯವೇನು? ಸೂಕ್ಷ್ಮವಾದ ಗಾಜಿ(ಕಾಚ)ನ ಉಪಕರಣ ಅಣುವನ್ನು ಪರೀಕ್ಷಿಸಲು ಅವನಿಗೆ ಸಾಧನ. ನೀನೂ ಸಹ ನಿನ್ನ ಅಂತರಂಗಯಂತ್ರವನ್ನು ಆ ರೀತಿ ನಿರ್ಮಿಸಿಕೊಂಡಲ್ಲಿ ಪರಮಾತ್ಮನ ದರ್ಶನವನ್ನು ಮಾಡಲು ಸಾಧ್ಯ.

Tuesday, December 27, 2011

ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು (130)

ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು ? |
ಆಂದೋಳನವೆ ವಾಸ್ತುಶುದ್ಧಿ ನಿಶ್ಚಿತಕೆ ||
ಅಂಧವಿಶ್ವಾಸಕಾತನುಭವಿಪ್ರಶ್ನೆ ಬಳಿ |
ಸಂದಿಹುದು ಸತ್ಯಕ್ಕೆ - ಮರುಳ ಮುನಿಯ || (೧೩೦)

(ಪಕ್ವ+ಎಂತು+ಅಹುದು)(ಅಂಧವಿಶ್ವಾಸಕೆ+ಆತ+ಅನುಭವಿಪ್ರಶ್ನೆ)

ಅನುಮಾನವೆಂಬ ಬೆಂಕಿ (ಶಿಖಿ) ಇಲ್ಲದಿದ್ದರೆ ಬುದ್ಧಿಯು ಹೇಗೆ ತಾನೇ ಮಾಗುತ್ತದೆ ? ವಸ್ತುವಿನ ಸತ್ಯಾಸತ್ಯದ ದರ್ಶನಕ್ಕೆ (ವಾಸ್ತುಶುದ್ಧಿ) ತರ್ಕಿಸುವುದೇ (ಆಂದೋಳನವೆ) ದಾರಿ. ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಅನುಭವಿ ಪ್ರಶ್ನೆಗಳು ಅವನನ್ನು ಸತ್ಯದ ಸಮೀಪಕ್ಕೆ ತೆಗೆದುಕೊಂಡು ಹೋಗುತ್ತವೆ.

Thursday, December 22, 2011

ಸಂಶಯವೆ ಸಾಜವಲ ಕಣ್ಭೋಗದೆಡೆಗಳಲಿ (129)

ಸಂಶಯವೆ ಸಾಜವಲ ಕಣ್ಭೋಗದೆಡೆಗಳಲಿ |
ಅಂಶವನೆ ಪೂರ್ಣವೆಂದೆಣಿಸೆವೇನಲ್ಲಿ ||
ಭ್ರಂಶವಿಲ್ಲದ ನಿಶ್ಚಯಕೆ ಶೋಧನೆಯೆ ದಾರಿ |
ಸಂಶೋಧಕವೊ ಶಂಕೆ - ಮರುಳ ಮುನಿಯ || (೧೨೯)

(ಕಣ್+ಭೋಗದ+ಎಡೆಗಳಲಿ)(ಪೂರ್ಣ+ಎಂದು+ಎಣಿಸೆವೇಂ+ಅಲ್ಲಿ)(ಭ್ರಂಶ+ಇಲ್ಲದ)

ಕಣ್ಣುಗಳು ಸುಖವನ್ನು ಕಾಣುವ ಜಾಗಗಳಲ್ಲಿ, ಅನುಮಾನ (ಸಂಶಯ)ಗಳಿರುವುದು ಸಹಜವೇ(ಸಾಜ) ತಾನೆ. ಅಂತಹ ಕಡೆಗಳಲ್ಲಿ ಭಾಗಶಃ ಸತ್ಯವನ್ನೇ ಪೂರ್ಣಸತ್ಯವೆಂದು ತಿಳಿಯುತ್ತೇವೆ ಅಲ್ಲವೇ! ಅಂತಹ ಶಂಕೆಗಳೇ ನಿಶ್ಚಯ ಸತ್ಯದ ಅನ್ವೇಷಣೆಗೆ ದಾರಿ ಆಗುತ್ತದೆ. ಆದ ಕಾರಣ ಸಂದೇಹದಿಂದಲೇ ಸತ್ಯಾನ್ವೇಷಣೆ ಆಗಲು ಶಕ್ಯ.

Wednesday, December 21, 2011

ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ (128)

ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ |
ಮನುಜರನುದಿನದ ಸಂಸರ್ಗ ಸಂಸ್ಕೃತಿಯಿಂ ||
ಜನಿಸುವುವು ನೂತನ ಜ್ಞಾನ ನವಭಾವಗಳು |
ಅನುಪೂರ್ವರೀತಿಯಲಿ - ಮರುಳ ಮುನಿಯ || (೧೨೮)

(ಮತಿಗಳುಂ+ಅಂತೆ)(ಬೆಳೆವುವು+ಒಂದು)(ಮನುಜರ+ಅನುದಿನದ)

ಮನಸ್ಸು ಮತ್ತು ಬುದ್ಧಿಶಕ್ತಿಗಳು, ಹಾಗೆಯೇ, ಒಂದು ನಿಯಮ ಮತ್ತು ರೀತಿಯಲ್ಲಿ ಬೆಳೆಯುತ್ತವೆ. ಮನುಷ್ಯರ ಪ್ರತಿನಿತ್ಯದ ಸಂಪರ್ಕ (ಸಂಸರ್ಗ) ಮತ್ತು ಬೌದ್ಧಿ ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ ವಿಕಾಸದಿಂದ ಹೊಸ ತಿಳಿವು ಮತ್ತು ಅಭಿಪ್ರಾಯಗಳು ಒಂದು ಕ್ರಮದಲ್ಲಿ (ಅನುಪೂರ್ವ) ಹುಟ್ಟುತ್ತವೆ.

Tuesday, December 20, 2011

ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ (127)

ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ |
ವೇದನೆಗಳಂತುದಿಸಿ ಮಾಯೆ ತೂಂಕಿಡುವಾ ||
ಖೇದ ಮೋದಾಂದೋಲನಗಳಿನಾತ್ಮೋದ್ಬೋಧ |
ಬೋಧೆಯಿಂ ಭ್ರಾಂತಿಲಯ - ಮರುಳ ಮುನಿಯ || (೧೨೬)

(ವೇದನೆಗಳ+ಅಂತು+ಉದಿಸಿ)(ಮೋದ+ಆಂದೋಲನಗಳಿನ್+ಆತ್ಮ+ಉದ್+ಬೋಧ)

ಜಗತ್ತಿನಲ್ಲಿ ಜೀವಿಸುತ್ತಿರುವ ಜೀವಿಗಳಿಗೆ ಈ ಜಗತ್ತಿನ ಸಹವಾಸವೇ ಬೇರೆ ಮತ್ತು ತಾವೇ ಬೇರೆ ಎಂಬ ತಪ್ಪು ಗ್ರಹಿಕೆ ಇರುವಾಗ, ನೋವು (ವೇದನೆ)ಗಳನ್ನು ಹಾಗೆ ಹುಟ್ಟುವಂತೆ (ಉದಿಸಿ) ಮಾಡಿ, ಮಾಯೆಯು ಇಳಬಿಡುವ (ತೂಂಕಿಡುವ) ದುಃಖ ಮತ್ತು ಸಂತೋಷಗಳ ತೂಗಾಡುವಿಕೆ(ಆಂದೋಲನ)ಯಿಂದ ಆತ್ಮ ಜಾಗೃತಗೊಳ್ಳುತ್ತದೆ. ಈ ಜಾಗೃತಿಯಿಂದ ತಪ್ಪುಗ್ರಹಿಕೆ (ಭ್ರಾಂತಿ)ಯ ನಾಶ(ಲಯ)ವಾಗುತ್ತದೆ.

Monday, December 19, 2011

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ (126)

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ |
ಸಿರಿದೇವಿಯಂಗಡಿಯನರಸಿ ತಟವಟಿಸಿ ||
ಹೊರ ಹೊಳಪಿನಾಸೆಯಿಂದೊಳಮಬ್ಬನಪ್ಪುವನು |
ಕುರುಡನೇ ಕಂಡವನೊ - ಮರುಳ ಮುನಿಯ || (೧೨೬)

(ಸಿರಿದೇವಿಯ+ಅಂಗಡಿಯನ್+ಅರಸಿ)(ಹೊಳಪಿನ+ಆಸೆಯಿಂದ+ಒಳಮಬ್ಬನ್+ಅಪ್ಪುವನು)

ಸರಸ್ವತಿದೇವಿಯ ಛತ್ರ ತನ್ನ ಹತ್ರದಲ್ಲೇ ಇದ್ದರೂ ಸಹ, ಅದನ್ನು ಬಿಟ್ಟು ದೂರದಲ್ಲಿರುವ ಲಕ್ಷ್ಮಿದೇವಿಯ ಅಂಗಡಿಯನ್ನು ಹುಡುಕಿಕೊಂಡುಹೋಗಿ, ಮೋಸಹೋಗಿ, ಹೊರಗಿನ ಕಾಂತಿಯ (ಹೊಳಪು) ಆಸೆಯಿಂದ ತನ್ನ ಒಳಗಡೆ ಕತ್ತಲೆ(ಮಬ್ಬು)ಯನ್ನು ಹೊಂದುತ್ತಾನೆ. ಅವನು ಒಬ್ಬ ಕುರುಡನೇ ಎಂದು ತಿಳಿ.

Friday, December 16, 2011

ನರ್ತನಾವೇಶನದ ವಿಶ್ವಮೂರ್ತಿಯ ದೇಹ (125)

ನರ್ತನಾವೇಶನದ ವಿಶ್ವಮೂರ್ತಿಯ ದೇಹ |
ವರ್ತನೆಯ ಪರಿಕಿಪ್ಪೆನೆನುತೆ ನಿಜ ನಯನ ||
ವರ್ತ್ಮವನು ವಿಜ್ಞಾನಿ ತೆರೆವನಿತ್ತರೊಳು ಪರಾ |
ವರ್ತಿತವೊ ನಟ ಭಂಗಿ - ಮರುಳ ಮುನಿಯ || (೧೨೫)

(ನರ್ತನ+ಆವೇಶನದ)(ಪರಿಕಿಪ್ಪೆನ್+ಎನುತೆ)(ತೆರೆವ+ಅನಿತ್ತರೊಳು)

ಭಾವಾವೇಶದಿಂದ (ಆವೇಶನ) ನರ್ತಿಸುತ್ತಿರುವ ಪರಮಾತ್ಮನ ದೇಹದ ಚಲನೆಯನ್ನು ಪರೀಕ್ಷಿಸುವೆನೆನ್ನುತ್ತ (ಪರಿಕಿಪ್ಪೆನ್+ಎನುತ) ತನ್ನ ಕಣ್ಣುಗಳ ಎವೆಯನ್ನು (ವರ್ತ್ಮವನು) ವಿಜ್ಞಾನಿಯು ತೆರೆದು ಅತ್ತಕಡೆ ನೋಡುವಷ್ಟರಲ್ಲಿ, ಪರಮಾತ್ಮನ ನಾಟ್ಯದ ನಿಲುವು ಬದಲಾವಣೆಯಾಗಿರುತ್ತದೆ (ಪರಾವರ್ತಿತ).

Thursday, December 15, 2011

ಏನೇನೊ ನಡೆದಿಹುವು ಮಾನುಷ್ಯ ಸಿದ್ಧಿಯಲಿ (124)

ಏನೇನೊ ನಡೆದಿಹುವು ಮಾನುಷ್ಯ ಸಿದ್ಧಿಯಲಿ |
ಯಾನಗಳು ಯಂತ್ರಗಳು ರಸ ನಿರ್ಮಿತಿಗಳು ||
ಭಾನುಗೋಲಕ್ಕೇಣಿಕಟ್ಟಲೆಳಸುವ ನರನು |
ತಾನಿಳಿಯುತಿಹನೇಕೊ - ಮರುಳ ಮುನಿಯ || (೧೨೪)

(ನಡೆದು+ಇಹುವು)(ಭಾನುಗೋಲಕ್ಕೆ+ಏಣಿಕಟ್ಟಲ್+ಎಳಸುವ)(ತಾನ್+ಇಳಿಯುತ+ಇಹನು+ಏಕೊ)

ಮನುಷ್ಯನು, ಪಯಣಿಸುವ ವಾಹನಗಳ ವಿಚಾರದಲ್ಲಿ (ರೈಲು, ಕಾರು, ವಿಮಾನ, ಹಡಗು, ರಾಕೆಟ್), ನಿರ್ಮಿಸಿರುವ ಯಂತ್ರ ಮತ್ತು ರಸಗಳ ಉತ್ಪಾದನೆಯಲ್ಲಿ, ಸಾಕಷ್ಟು ಕಾರ್ಯಗಳನ್ನು ಸಾಧಿಸಿದ್ದಾನೆ. ಸೂರ್ಯಮಂಡಲ(ಭಾನುಗೋಲ)ಕ್ಕೇ ಏಣಿ ಹಾಕಲು ಬಯಸುತ್ತಿರುವ (ಎಳಸುವ) ಮನುಷ್ಯನು, ತಾನು ಮಾತ್ರ ತನ್ನ ವಿಚಾರ ಮತ್ತು ಬಾಂಧವ್ಯಗಳಲ್ಲಿ ಏಕೆ ಕೆಳಕ್ಕೆ ಇಳಿಯುತ್ತಿದ್ದಾನೆಯೋ ಅರ್ಥವಾಗುತ್ತಿಲ್ಲ.

Wednesday, December 14, 2011

ಏನೇನೊ ನಡೆದಿಹುದು ವಿಜ್ಞಾನ ಸಂಧಾನ (123)

ಏನೇನೊ ನಡೆದಿಹುದು ವಿಜ್ಞಾನ ಸಂಧಾನ |
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ||
ತಾನೊಡರ‍್ಚಿದ ಹೊನ್ನರಸವೆ ಕೊರಳ್ಗೆ |
ನೇಣಾಗಿಹುದು ನೋಡು - ಮರುಳ ಮುನಿಯ || (೧೨೩)

(ನಡೆದು+ಇಹುದು)(ಮುರಿದು+ಇಹುದು)(ತಾನ್+ಒಡರ‍್ಚಿದ)(ನೇಣ್+ಆಗಿಹುದು)

ವಿಜ್ಞಾನದ ಹೊಂದಾಣಿಕೆಯಲ್ಲಿ ಮನುಷ್ಯನು ಸಾಕಷ್ಟು ಸಾಧಿಸಿದ್ದಾನೆ. ಇನ್ನೂ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನ ಸಂಬಂಧಗಳು ಮಾತ್ರ ಮುರಿದುಹೋಗುತ್ತಿವೆ. ತಾನು ನಿರ್ಮಿಸಿದ (ಒಡರ‍್ಚಿದ) ಬಂಗಾರದ ರಸವೇ (ಇದು ಹೊನ್ನರಸ, ಬಂಗಾರದ ಸರ ಎಂದಿರಬಹುದೇ?) ಮನುಷ್ಯನ ಕುತ್ತಿಗೆಗೆ ನೇಣುಹಗ್ಗವಾಗಿರುವುದನ್ನು ನೋಡು.

Tuesday, December 13, 2011

ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು (122)

ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು |
ಮುಗಿಲು ಶೃಂಗೇರಿಗಭಿಷೇಕವನೆ ಮಾಳ್ಕುಂ ||
ದುಗುಡ ಸೊಗಗಳಿಗೊಂದು ನಂಟುಂಟು ನಯವುಂಟು |
ಮುಗಿಲಹುದೆ ಧಗೆಯಿರದೆ - ಮರುಳ ಮುನಿಯ || (೧೨೨)

(ಬೇಸಿಗೆಯೊಳು+ಅಂದು)(ಶೃಂಗೇರಿಗೆ+ಅಭಿಷೇಕವನೆ)(ಸೊಗಗಳಿಗೆ+ಒಂದು)(ಮುಗಿಲು+ಅಹುದೆ)

ಬೇಸಿಗೆಯ ಬಿಸಿಲಿನ ಝಳದಿಂದ ಉತ್ತರದ ದೆಹಲಿಯು ಬಾಡಿಹೋಗಿರುವಾಗ, ಮೋಡಗಳು ದಕ್ಷಿಣದ ಶೃಂಗೇರಿಗೆ ಅಭಿಷೇಕವನ್ನು ಮಾಡುತ್ತವೆ (ಮಾಳ್ಕುಂ). ಈ ರೀತಿಯಾಗಿ ದುಃಖ (ದುಗುಡ) ಮತ್ತು ಸುಖ (ಸೊಗ)ಗಳಿಗೆ ಒಂದು ವಿಧವಾದ ಸಂಬಂಧ ಮತ್ತು ರೀತಿ ನೀತಿಗಳಿವೆ. ಬಿಸಿಲಿನ ತಾಪ ಮತ್ತು ಝಳಗಳಿರದೆ ಮೋಡವಾಗಲು ಸಾಧ್ಯವಿಲ್ಲ.

Monday, December 12, 2011

ಭೇದ್ಯವಲ್ಲದ ನಾಭಿ ನೇಮಿಗಳು ಚಕ್ರಕ್ಕೆ (121)

ಭೇದ್ಯವಲ್ಲದ ನಾಭಿ ನೇಮಿಗಳು ಚಕ್ರಕ್ಕೆ |
ಮಧ್ಯದರಗಳು ಮಾತ್ರ ತಾಂ ಬೇರೆ ಬೇರೆ ||
ಎದ್ದು ಕಾಣುವುವಂತು ಜೀವಿಗಳು ಜಗದಿ ತ-|
ಮ್ಮಾದ್ಯಂತಗಳ ಮರೆತು- ಮರುಳ ಮುನಿಯ || (೧೨೧)

(ಭೇದ್ಯ+ಅಲ್ಲದ)(ಮಧ್ಯದ+ಅರಗಳು)(ಕಾಣುವುವು+ಅಂತು)(ತಮ್ಮ+ಆದಿ+ಅಂತಗಳ)

ಒಡೆಯಲಿಕ್ಕೆ ಸಾಧ್ಯವಾಗದಂತಹ ಬಂಡಿಯ ಗಾಲಿಗಳ ನಡುವೆ ಗುಂಬ (ನಾಭಿ) ಮತ್ತು ಅದರ ಸುತ್ತುಪಟ್ಟಿಗಳು (ನೇಮಿ). ಆದರೆ ಅವುಗಳ ಮಧ್ಯದಲ್ಲಿರುವ ಅರೆಕಾಲುಗಳು(ಅರೆ) ಮಾತ್ರ ಬೇರೆಬೇರೆಯಾಗಿರುತ್ತವೆ. ಇದೇ ರೀತಿಯಾಗಿ ಪ್ರಪಂಚದಲ್ಲಿ ಜೀವಿಗಳೂ ಸಹ ತಮ್ಮ ಮೂಲ (ಆದಿ) ಮತ್ತು ಜೊನೆ(ಅಂತ)ಗಳನ್ನು ಮರೆತು ತಾವೇ ಬೇರೆ ಬೇರೆಯಾಗಿ ಎದ್ದು ಕಾಣುತ್ತವೆ ಮತ್ತು ಮೆರೆಯುತ್ತವೆ.

Friday, December 9, 2011

ಪುನರುಕ್ತಿ ಬಾರದೆಂದು ಪ್ರಕೃತಿ ಕಂಠದಿಂ (120)

ಪುನರುಕ್ತಿ ಬಾರದೆಂದುಂ ಪ್ರಕೃತಿ ಕಂಠದಿಂ  |
ದಿನದಂತೆ ದಿನವಿರದದೊರ‍್ವನಿನನಿರೆಯುಂ ||
ಇನನೆ ತಾಂ ಕ್ಷಣದಿಂ ಮರುಕ್ಷಣಕೆ ಸವೆಯುವನು |
ಅನಿತರತೆ ಮೇಲ್ತೋರ‍್ಕೆ - ಮರುಳ ಮುನಿಯ || (೧೨೦)

(ದಿನ+ಇರದು+ಅದು+ಒರ‍್ವನ್+ಇನನ್+ಇರೆಯುಂ)

ಪ್ರಕೃತಿಯ ಕೊರಳಿನಿಂದ ಎಂದೆಂದಿಗೂ ಅದೇ ಮಾತು ಬರಲಾರದು. ಸೂರ್ಯ(ಇನ)ನೊಬ್ಬನೆ ಆದರೂ ಒಂದು ದಿನದಂತೆ ಇನ್ನೊಂದು ದಿನವಿರುವುದಿಲ್ಲ. ಸೂರ್ಯನೂ ಸಹ ಕ್ಷಣದಿಂದ ಕ್ಷಣಕ್ಕೂ ಕ್ಷೀಣಿಸುತ್ತಿರುತ್ತಾನೆ. ಅದು ಸವೆಯದಂತಿರುವುದು ಮೇಲ್ನೋಟಕ್ಕೆ ಮಾತ್ರ ಕಾಣುತ್ತದೆ.

Thursday, December 8, 2011

ತಾರಂಗ ನೃತ್ಯಗತಿ ವಿಶ್ವಜೀವನ ವಿವೃತಿ (119)

ತಾರಂಗ ನೃತ್ಯಗತಿ ವಿಶ್ವಜೀವನ ವಿತಿ |
ಆರೋಹವವರೋಹವೊಂದಾಗಲೊಂದು ||
ಸಾರೂಪ್ಯಸಮ ಜವತೆಯೆರಡು ತೆರೆಗಳ್ಗಿರದು |
ಬೇರೆತನದಿನೆ ಸೊಗಸು - ಮರುಳ ಮುನಿಯ || (೧೧೯)

(ಆರೋಹವು+ಅವರೋಹವು+ಒಂದಾಗಲೊಂದು)(ತೆರೆಗಳ್ಗೆ+ಇರದು)

ಈ ಪ್ರಪಂಚದ ವಿವರಣೆ(ವಿವೃತಿ) ತೆರೆಗಳ (ತಾರಂಗ) ಕುಣಿತದ ನಡೆಯಂತಿದೆ. ಏರುವುದು (ಆರೋಹ) ಮತ್ತು ಇಳಿಯುವುದು (ಅವರೋಹ), ಇವೆರಡೂ ಒಂದೇ ಆದರೂ, ಒಂದೇ ಸಮನಾದ ಆಕಾರ (ಸಾರೂಪ) ಮತ್ತು ಒಂದೇ ವೇಗ (ಸಮ ಜವತೆ) ಎರಡು ಅಲೆಗಳಿಗಿರಲು ಸಾಧ್ಯವಿಲ್ಲ. ಈ ರೀತಿ ಬೇರೆ ಬೇರೆಯಾಗಿರುವ ವಿವಿಧತೆಯಲ್ಲಿಯೇ ನಾವು ಚೆಲುವು ಮತ್ತು ಸುಖವನ್ನು ಕಾಣುತ್ತೇವೆ.

Wednesday, December 7, 2011

ನರಕುಲದಿ, ಕಿಂಪುರುಷರರ್ಧ ಕಿನ್ನರರರ್ಧ (118)


ನರಕುಲದಿ, ಕಿಂಪುರುಷರರ್ಧ ಕಿನ್ನರರರ್ಧ |
ಪರಿರಂಭವಶ್ವತನುಗೆಂತು ನರಮುಖದಿ? ||
ತುರಗ ಮುಖಕೆಂತು ಚುಂಬನ ಪುರುಷತನುವಿರಲ್ |
ಕರುಬೆ ಪಾಡಿರ‍್ವರಿಗೆ - ಮರುಳ ಮುನಿಯ || (೧೧೮)

(ಕಿಂಪುರುಷರ್+ಅರ್ಧ)(ಕಿನ್ನರರ್+ಅರ್ಧ)(ಪರಿರಂಭವು+ಅಶ್ವತನುಗೆ+ಎಂತು)
(ಮುಖಕೆ+ಎಂತು)(ಪುರುಷತನು+ಇರಲ್)(ಪಾಡು+ಇರ‍್ವರಿಗೆ)

ಮನುಷ್ಯ ವಂಶದಲ್ಲಿ ಅರ್ಧದಷ್ಟು ಮನುಷ್ಯರು ಕುದುರೆಯ ಮುಖವನ್ನು ಮತ್ತು ಮನುಷ್ಯ ದೇಹವನ್ನೂ ಹೊಂದಿರುವರಾದರೆ(ಕಿಂಪುರುಷ), ಇನ್ನರ್ಧದಷ್ಟು ಮನುಷ್ಯರು, ಮನುಷ್ಯರ ಮುಖವನ್ನೂ ಮತ್ತೂ ಕುದುರೆಯ ದೇಹವನ್ನು (ಕಿನ್ನರ) ಹೊಂದಿರುತ್ತಾರೆ. ಕುದುರೆಯ ದೇಹವು ಮನುಷ್ಯನ ಮುಖವನ್ನು ಹೇಗೆ ಆಲಂಗಿಸಲು ಶಕ್ಯ (ಪರಿರಂಭ)? ಕುದುರೆ(ತುರುಗ)ಯ ಮುಖವಿರುವವನು ಮನುಷ್ಯನ ದೇಹ(ತನು)ವಿರುವವನನ್ನು ಹೇಗೆ ಚುಂಬಿಸಲಾದೀತು? ಇಬ್ಬರೂ ಹೊಟ್ಟೆಕಿಚ್ಚಿನ (ಕರುಬೆ) ಸ್ಥಿತಿಯಲ್ಲೇ ಇರುತ್ತಾರೆ.

Tuesday, December 6, 2011

ಮೆಣಸು ಹುಣಿಸೆಗಳ ಸವಿಗಳು ಬೇರೆಯಿಹುದಿರಲಿ (117)


ಮೆಣಸು ಹುಣಿಸೆಗಳ ಸವಿಗಳು ಬೇರೆಯಿಹುದಿರಲಿ |
ಹುಣಿಸೆಯಿಂ ನಿಂಬೆ ಮಾವುಗಳ ಹುಳಿ ಬೇರೆ ||
ಮನುಜನುಳಿದ ಪ್ರಾಣಿಯಿಂ ಬೇರೆ ತಾಂ ಬೇರೆ |
ಗುಣದೊಳೋರೊರ‍್ವನುಂ - ಮರುಳ ಮುನಿಯ || (೧೧೭)

(ಬೇರೆ+ಇಹುದು+ಇರಲಿ)(ಮನುಜನ್+ಉಳಿದ)(ಗುಣದ+ಒಳ್+ಓರೊರ‍್ವನುಂ)

ಮೆಣಸು, ಹುಣಿಸೆಹಣ್ಣು ಇತ್ಯಾದಿ ವಸ್ತುಗಳ ರುಚಿಯು ಬೇರೆ ಬೇರೆಯಾಗಿರುತ್ತವೆ. ಅದು ಹಾಗೇ ಇರಲಿ ಮತ್ತು ಅವು ಹಾಗಿದ್ದರೇ ಚೆನ್ನವೂ ಹೌದು. ಆದರೆ ಹುಳಿಯು ಒಂದೇ ಆದರೂ ಹುಣಿಸೆಹಣ್ಣು, ನಿಂಬೆಹಣ್ಣು ಮತ್ತು ಮಾವಿನಕಾಯಿಗಳ ಹುಳಿಯ ರುಚಿಗಳು ಬೇರೆ ಬೇರೆಯಾಗಿರುತ್ತವೆ. ಹಾಗೆಯೇ ಈ ಮನುಷ್ಯನೂ ಸಹ ಪ್ರಪಂಚದಲ್ಲಿ ಒಂದು ಜೀವಿಯಾದರೂ ಇವನು ಇತರ ಪ್ರಾಣಿಗಳಿಂದ ಬೇರೆಯಾಗಿ ಕಾಣಿಸಿಕೊಳ್ಳುತ್ತಾನೆ. ಅದೂ ಅಲ್ಲದೆ ಬೇರೆ ಬೇರೆ ಹುಳಿಗಳ ರುಚಿಯಂತೆ ಒಬ್ಬೊಬ್ಬ ಮನುಷ್ಯನೂ ಬೇರೆ ಬೇರೆ ಸ್ವಭಾವಗಳನ್ನು ಹೊಂದಿರುತ್ತಾನೆ.

Monday, December 5, 2011

ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ (116)


ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ |
ಹಸಿವ ತೀರಿಪ್ಪುದಾರತೆಯಿಲ್ಲ ಜಗದಿ ||
ವಿಷಮವಿರದೊಡೆ ಧಾತುಗಳ್ ಜಗದಿ ಸೃಷ್ಟಿಯಾ |
ಕಸಬು ಸಾಗುವುದೆಂತೊ - ಮರುಳ ಮುನಿಯ || (೧೧೬)

(ಕೆರಳಿಪ+ಅನಿತು+ಉಂಟು)(ತೀರಿಪ್ಪ+ಉದಾರತೆಯಿಲ್ಲ)(ವಿಷಮ+ಇರದೊಡೆ)

ಪ್ರಪಂಚದಲ್ಲಿರುವ ಬಗೆಬಗೆಯಾದ ರುಚಿಗಳು ನಿನ್ನ ನಾಲಿಗೆಯನ್ನು ಕೆರಳಿಸಿದರೂ, ನಿನ್ನ ಹಸಿವನ್ನು ಪರಿಹರಿಸುವಂತಹ ಉದಾರತೆ ಈ ಜಗತ್ತಿಗಿಲ್ಲ. ಅದನ್ನು ನೀನೇ ಪೂರೈಸಿಕೊಳ್ಳಬೇಕು. ಪ್ರಪಂಚದಲ್ಲಿ ಸೃಷ್ಟಿಸಲ್ಪಟ್ಟಿರುವ ಮೂಲವಸ್ತುಗಳೆಲ್ಲವೂ ಅಸಮವಾಗಿರದಿದ್ದಲ್ಲಿ, ಎಂದರೆ ಎಲ್ಲವೂ ಸಮವಾಗಿದ್ದರೆ ಬ್ರಹ್ಮಸೃಷ್ಟಿಯ ಜಗತ್ತಿನಲ್ಲಿ ಯಾವ ವಿಧವಾದ ಕೆಲಸಗಳೂ ಸಾಧ್ಯವಿಲ್ಲ.

Friday, December 2, 2011

ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ (115)


ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ |
ಧೀವಪುವಿಕಾಸದಲಿ ಗುಣವೃತ್ತಿಗಳಲಿ ||
ಜೀವಧರ್ಮದಲಿ ನಾನಾತ್ವವಾತ್ಮಧ್ಯಾನ |
ಕೈವಲ್ಯದಲಿ ಸಾಮ್ಯ - ಮರುಳ ಮುನಿಯ || (೧೧೫)

(ಲೋಕ+ಐಕ್ಯದಿಂ)(ನಾನಾತ್ವ+ಆತ್ಮಧ್ಯಾನ)

ವಿವಿಧತೆಯಿಂದ ಜಗತ್ತು. ಐಕ್ಯದಿಂದ ನಿರ್ಲೋಕ. ಬುದ್ಧಿಶಕ್ತಿ (ಧೀ) ಮತ್ತು ದೇಹ (ವಪು)ಗಳ ಅರಳುವಿಕೆ, ಸ್ವಭಾವ ಮತ್ತು ಉದ್ಯೋಗದಲ್ಲಿ, ಜೀವನವನ್ನು ನಡೆಸುವ ನ್ಯಾಯ, ನೀತಿಗಳಲ್ಲಿ ವಿಧವಿಧವಾದ ಆಕಾರಗಳಲ್ಲಿರುವ ಆತ್ಮದ ಬಗ್ಗೆ ಚಿಂತಿಸುವುದು. ಇವೆಲ್ಲವೂ ಮೋಕ್ಷ ಗಳಿಸುವಲ್ಲಿ ಸಮಾನ ಧರ್ಮದವೇ ಆಗಿರುತ್ತದೆ.

Thursday, December 1, 2011

ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು (114)


ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು |
ಇವನ ಕಣ್ಗವನಿರವುನೋಟಗಳು ಬೆಪ್ಪು ||
ಅವನವನಿಗವನವನ ಹುಚ್ಚಾಟದಲಿ ನಚ್ಚು |
ಶಿವನಿಗೆಲ್ಲವು ಮೆಚ್ಚು - ಮರುಳ ಮುನಿಯ || (೧೧೪)

(ಕಣ್ಗೆ+ಇವನ)(ಬಾಳ್+ಕುಣಿದಾಟಗಳು)(ಕಣ್ಗೆ+ಅವನ+ಇರವು+ನೋಟಗಳು)(ಅವನವನಿಗೆ+ಅವನವನ)

ಒಬ್ಬನ ಕಣ್ಣುಗಳಿಗೆ ಇನ್ನೊಬ್ಬನ ಜೀವನ ಮತ್ತು ಹಾರಾಟಗಳು ತಪ್ಪಾಗಿ ಕಾಣುತ್ತವೆ. ಇನ್ನೊಬ್ಬನ ಕಣ್ಣುಗಳಿಗಾದರೋ ಇವನ ಸ್ಥಿತಿ (ಇರುವು) ಮತ್ತು ಪ್ರದರ್ಶನಗಳು ತಿಳಿಗೇಡಿತನ ಮತ್ತು ದಿಗ್ಭ್ರಮೆಗಳಾಗಿ ಕಾಣುತ್ತವೆ. ಅವರವರಿಗೆ ಅವರವರ ಮನಬಂದಂತೆ ನಡೆಯುವ ಪ್ರವೃತ್ತಿಗಳಲ್ಲಿ ಅಪಾರ ನಂಬಿಕೆ (ನಚ್ಚು). ತಾನು ಮಾಡುತ್ತಿರುವುದೇ ಸರಿ ಎಂಬ ವಿಶ್ವಾಸ. ಆದರೆ ಪರಮಾತ್ಮನಿಗಾದರೋ ಇವರೆಲ್ಲರ ಭಾವನೆ ಮತ್ತು ವರ್ತನೆಗಳಲ್ಲಿ ಸಮ್ಮತಿ ಮತ್ತು ಸಂತೋಷವುಂಟು.