Tuesday, November 29, 2011

ತೇಲಾಡುತಿಹುದು ಗಾಳಿಯ ಪಟದವೊಲು ಲೋಕ (113)

ತೇಲಾಡುತಿಹುದು ಗಾಳಿಯ ಪಟದವೊಲು ಲೋಕ |
ಕಾಲವದಕಾಕಾಶ ನೋಳ್ಪಮತಿಯೆ ಧರೆ ||
ನೂಲು ಕಾಯಕ, ನಿಯತಿ ಗಾಳಿ, ಮಾನಸ ವಿಕೃತಿ |
ಲೀಲೆ, ಶಿವಸಂತೋಷ - ಮರುಳ ಮುನಿಯ || (೧೧೩)

(ತೇಲಾಡುತ+ಇಹುದು)(ಕಾಲ+ಅದಕೆ+ಆಕಾಶ)

ಗಾಳಿಪಟದಂತೆ ಜಗತ್ತು ಹಾರಾಡುತ್ತಾ ಇದೆ. ಆಕಾಶವೇ ಅದಕ್ಕೆ ಸಮಯ. ನೋಡುತ್ತಿರುವ (ನೋಳ್ಪ) ಬುದ್ಧಿಶಕ್ತಿಯೇ ಭೂಮಿ (ಧರೆ). ಆ ಗಾಳಿಪಟವನ್ನು ಹಿಡಿದಿರುವ ದಾರವೇ ದುಡಿಮೆ (ಕಾಯಕ). ಪ್ರಕೃತಿಯಲ್ಲಿರುವ ಗಾಳಿಯೇ ವಿಧಿ, ದೈವ, ನಿಯಮ ಮತ್ತು ಅದೃಷ್ಟ. ಏಕೆಂದರೆ ಗಾಳಿ ಹೊಡೆದುಕೊಂಡ ಕಡೆಯೇ ಗಾಳಿಪಟ ಹೋಗಬೇಕು. ಅದು ಒಂದು ಕಟ್ಟುಪಾಡಿಗೆ ಒಳಪಟ್ಟದ್ದು. ಮನುಷ್ಯನ ಮನಸ್ಸು ಚಂಚಲವಾಗಿದ್ದು ಇದನ್ನು ಬದಲಾಯಿಸುತ್ತದೆ. ಇವೆಲ್ಲವೂ ಪರಮಾತ್ಮನ ಆನಂದಕ್ಕಾಗಿ ನಡೆಯುವ ಗಾಳಿಪಟದಾಟವಾಗಿದೆ.

Monday, November 28, 2011

ಲೀಲೆಯಿಂ ಪಾರಾಗು ಲೀಲೆಯಿಂ ಮೇಲಾಗು (112)

ಲೀಲೆಯಿಂ ಪಾರಾಗು ಲೀಲೆಯಿಂ ಮೇಲಾಗು |
ಲೀಲೆಯೊಳಗೋಲಾಡು ಲೀಲೆಯಂ ನೋಡು ||
ಲೀಲೆಯೊಳಚಾಲಕನು ಪಾಲಕನು ನೀನಾಗಿ |
ಮೂಲೋಕದಾನಂದಿ - ಮರುಳ ಮುನಿಯ || (೧೧೨)

(ಪಾರ್+ಆಗು)(ಮೇಲ್+ಆಗು)(ಲೀಲೆಯೊಳಗೆ+ಓಲಾಡು)(ಲೀಲೆಯ+ಒಳಚಾಲಕನು)(ನೀನ್+ಆಗಿ)(ಮೂಲೋಕದ+ಆನಂದಿ)

ಈ ಆಟದಿಂದ ತಪ್ಪಿಸಿಕೊಂಡು ಪಾರಾಗು, ಈ ಆಟದಿಂದ ಇನ್ನೂ ಮೇಲುಗಡೆಗೆ ಹೋಗು, ಈ ಆಟದಲ್ಲಿ ಸಂತೋಷದಿಂದ ಪಾಲುಗೊಳ್ಳು. ಈ ಆಟವನ್ನು ವೀಕ್ಷಿಸು. ಈ ಆಟವನ್ನು ನಡೆಯಿಸುವನಾಗಿ ಮತ್ತು ಅದರ ರಕ್ಷಕ(ಪಾಲಕ)ನೂ ಆಗಿ ಮೂರೂ (ಮೂ) ಲೋಕಗಳಲ್ಲೂ ಸಂತೋಷಪಟ್ಟು ಸುಖಿಸುವಂತವನಾಗು.

Friday, November 25, 2011

ಚೈತನ್ಯ ಲೀಲೆಯೊಳಗೇನುಂಟದೇನಿಲ್ಲ (111)

ಚೈತನ್ಯ ಲೀಲೆಯೊಳಗೇನುಂಟದೇನಿಲ್ಲ |
ಜ್ಞಾತಮಜ್ಞಾತಂಗಳೂಹ್ಯಮದನೂಹ್ಯಂ ||
ದ್ವೈತಮದ್ವೈತಂ ವಿಶಿಷ್ಟಾದ್ವೈತ ಭೇದಂಗ-|
ಳಾತನೊಳಗೈಕ್ಯವೆಲೊ - ಮರುಳ ಮುನಿಯ || (೧೧೧)

(ಲೀಲೆಯೊಳಗೆ+ಏನುಂಟು+ಅದೇನಿಲ್ಲ)(ಜ್ಞಾತಂ+ಅಜ್ಞಾತಂಗಳ್+ಊಹ್ಯಂ+ಅದು+ಅನೂಹ್ಯಂ)(ದ್ವೈತಂ+ಅದ್ವೈತಂ)(ಭೇದಂಗಳ್+ಆತನೊಳಗೆ+ಐಕ್ಯವೆಲೊ)

ಈ ಪರಮಾತ್ಮನ ಚೇತನದ ಆಟಗಳಲ್ಲಿ ಏನಿದೆ ಮತ್ತು ಏನಿಲ್ಲ? ಅದರಲ್ಲಿ ಎಲ್ಲವೂ ಇವೆ. ತಿಳಿದಿರುವಂತಹು (ಜ್ಞಾತ) ತಿಳಿಯದಿರುವಂತಹುವು (ಅಜ್ಞಾತ). ಊಹೆಗೆ ದೊರಕುವಂತಹವು (ಊಹ್ಯಂ), ಊಹಿಸಲಸಾಧ್ಯವಾದಂತಹವು (ಅನೂಹ್ಯಂ). ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತಗಳ ವ್ಯತ್ಯಾಸಗಳೆಲ್ಲವೂ ಪರಮಾತ್ಮನಲ್ಲಿ ಸೇರಿ ಒಂದಾಗಿಹೋಗಿವೆ.

Thursday, November 24, 2011

ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು (110)

ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು |
ಮೂಲಕರ್ತನ ಲೀಲೆ ಜೀವಿಗಳ ಲೀಲೆ ||
ಗೋಳುಗುದ್ದಾಟಗಳ ಬೆರೆತಪ್ಪ ವಿಧಿಲೀಲೆ |
ಕೋಲಾಹಲದ ಲೀಲೆ - ಮರುಳ ಮುನಿಯ || (೧೧೦)

ಇದು ಕೇವಲ ಒಂದು ವಿನೋದವಾದ ಆಟ. ಎಲ್ಲೆಲ್ಲಿಯೂ ಎಲ್ಲಾ ಕಡೆಗಳಲ್ಲಿಯೂ (ಸರ್ವತೋ) ಇರುವ ಆಟವಿದು. ಇದು ಆ ಪರಮಾತ್ಮನ ಆಟ. ಇಲ್ಲಿರುವ ಜೀವಿಗಳ ಆಟ. ದುಃಖ ಮತ್ತು ಕಲಹಗಳು ಬೆರೆತಿರುವ ವಿಧಿಯು ಆಡುವ ಆಟ. ಗಲಭೆ ಮತ್ತು ಗಲಾಟೆಗಳು (ಕೋಲಾಹಲ) ಕೂಡಿಕೊಂಡಿರುವ ಆಟ.

Wednesday, November 23, 2011

ಜಗವೆಲ್ಲ ಲೀಲೆ ಶಿವಲೀಲೆ ಶಾಶ್ವತ ಲೀಲೆ (109)


ಜಗವೆಲ್ಲ ಲೀಲೆ ಶಿವಲೀಲೆ ಶಾಶ್ವತ ಲೀಲೆ |
ನಗುವಳುವು ಸೆಣಸು ಹುಚ್ಚಾಟವದು ಲೀಲೆ ||
ಹಗುರವನು ಹೊರೆಮಾಡಿ ತಿಣುಕಾಡುವುದು ಲೀಲೆ |
ರಗಳೆಯೇ ಲೀಲೆಯೆಲೊ - ಮರುಳ ಮುನಿಯ || (೧೦೯)

(ಜಗ+ಎಲ್ಲ)(ನಗು+ಅಳುವು)

ಈ ಜಗತ್ತೆಲ್ಲವೂ ಒಂದು ವಿನೋದವಾದ ಆಟ. ಅದು ಪರಮಾತ್ಮನ ಆಟ ಮತ್ತು ಯಾವಾಗಲೂ ಇರತಕ್ಕಂತಹ ಆಟ. ಇದು ನಗು, ಅಳು, ಹೋರಾಟ(ಸೆಣಸು) ಹುಚ್ಚಾಟ ಎಲ್ಲವನ್ನು ಕೂಡಿಕೊಂಡಿರುವ ಆಟ. ಭಾರವಾಗಿಲ್ಲದಿರುವುದನ್ನು ಭಾರವಾಗಿಸಿ ಒದ್ದಾಡುವಂತೆ ಮಾಡುವ ಆಟಗಳಿವು. ಈ ಆಟಗಳೆಲ್ಲವೂ ತೊಂದರೆ ಮತ್ತು ಬಗೆಹರಿಯಲಾರದ ಸಮಸ್ಯೆಗಳೇ ಹೌದು.

Tuesday, November 22, 2011

ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು (108)


ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು |
ಪರಿದೇಳ್ದು ಬಿದ್ದೇಳ್ವುದೋ ತೆರೆಯ ಬಾಳು ||
ಉರುಳಿದಲೆ ಮತ್ತೇಳುವುದು ತೊರೆಯ ಜೀವಾಳ |
ಹೊರಳಾಟವೇ ಲೀಲೆ - ಮರುಳ ಮುನಿಯ || (೧೦೮)

(ಪರಿದು+ಏಳ್ದು)(ಬಿದ್ದು+ಏಳ್ವುದೋ)(ಉರುಳಿದ+ಅಲೆ)(ಮತ್ತೆ+ಏಳುವುದು)

ಪರಮಾತ್ಮ ಒಂದು ನದಿ ಇದ್ದ ಹಾಗೆ. ವಿಧ ವಿಧವಾದ ಲೋಕಗಳು ಆ ನದಿಯ ಅಲೆಗಳ ಸಾಲುಗಳು. ಆ ಅಲೆಗಳ ಜೀವನವು ಹರಿದು ಏಳುವುದೋ ಅಥವಾ ಬಿದ್ದು ಏಳುವುದೋ ಯಾವುದೋ ಒಂದು ರೀತಿಯಲ್ಲಿ ಆಗಿರುತ್ತದೆ. ಉರುಳಿದ ಅಲೆಯು ನದಿಯ ಸತ್ತ್ವದಿಂದ ಪುನಃ ಮೇಲಕ್ಕೇಳುತ್ತದೆ. ನದಿಯ ಹರಿವಿನ ಚೆಂದ ಅದರ ಅಲೆಗಳ ಈ ಏಳುಬೀಳುಗಳಿಂದಲೇ ಆಗಿದೆ. ಈ ರೀತಿಯಾಗಿ ಲೋಕವು ಹೊರಳಾಡುತ್ತಿರುವುದೇ ಒಂದು ವಿನೋದವಾದ ಆಟವಾಗಿದೆ.

Monday, November 21, 2011

ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು (107)


ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು |
ವ್ಯತ್ಯಸಿತ ಲೋಕ ಗತಿಯವರವರ ನಡುವೆ ||
ಉತ್ತಮತೆಯನು (ಸೊಟ್ಟ) ಸೃಷ್ಟಿಯೊಳಗರಸಿಸುವ |
ಕೃತ್ರಿಮವೆ ಶಿವಲೀಲೆ - ಮರುಳ ಮುನಿಯ || (೧೦೭)

(ಗತಿ+ಅವರವರ)(ಸೃಷ್ಟಿಯೊಳಗೆ+ಅರಸಿಸುವ)

ಬ್ರಹ್ಮ (ಪರಮೇಷ್ಠಿ) ಮತ್ತು ಮನುಷ್ಯರ ನಡುವೆ ಪ್ರತಿನಿತ್ಯವೂ ಸ್ಪರ್ಧೆ ನಡೆಯುತ್ತಿರುತ್ತದೆ. ಅವರುಗಳ ಮಧ್ಯದಲ್ಲಿ ಪಲ್ಲಟಗೊಂಡಿರುವ ಜಗತ್ತಿನ ವ್ಯವಹಾರ ಸಾಗುತ್ತಿದೆ. ಸೊಟ್ಟಗಿರುವ ಈ ಸೃಷ್ಟಿಯಲ್ಲಿ ಶ್ರೇಷ್ಠವಾಗಿರುವುದನ್ನು ಹುಡುಕಿಸುವ (ಅರಸಿಸುವ) ಕಪಟ(ಕೃತ್ರಿಮ)ವೊ ಪರಮಾತ್ಮನ ಆಟ.

Friday, November 18, 2011

ಸುವಿಲಾಸ ಮೋಹಗಳ ಕುವಿಕಾರ ಭಾವಗಳ (106)


ಸುವಿಲಾಸ ಮೋಹಗಳ ಕುವಿಕಾರ ಭಾವಗಳ |
ಕವಿತೆ ಸಂಗೀತಗಳ ಕೋಪತಾಪಗಳ ||
ಅವಿವೇಕ ಘೋಷಗಳ ಸುವಿಚಾರ ಮೌನಗಳ |
ಹವಣೆಲ್ಲ ಶಿವಲೀಲೆ - ಮರುಳ ಮುನಿಯ || (೧೦೬)

ಸೊಗಸೆನಿಸುವ ಸೆಳೆತಗಳ, ದುಷ್ಟಭಾವದ ವಿಚಾರಗಳ, ಸುಂದರ ಕವಿತೆಗಳ, ಸುಶ್ರಾವ್ಯ ಸಂಗೀತದ, ಉಗ್ರ ಕೋಪದ, ಅಸಹನೀಯ ತಾಪದ ಮತ್ತು ಮೂರ್ಖತನದ ಹೇಳಿಕೆಗಳ ಎಲ್ಲ ವಿದ್ಯಮಾನಗಳು ಭಗವಂತನ ಲೀಲಾ ವಿನೋದಗಳಾಗಿವೆ.

Thursday, November 17, 2011

ಭುವನ ಜೀವನವೆಲ್ಲ ಶಿವನ ಲೀಲಾರಂಗ (105)


ಭುವನ ಜೀವನವೆಲ್ಲ ಶಿವನ ಲೀಲಾರಂಗ |
ಅವನು ಶಿವನಿವನು ಶಿವ ಶಿವ ನೀನು ನಾನು ||
ತವಕಪಡಿಸುವ ನಮ್ಮ ಕೆರಳಿಸುವ ಕುಣಿಯಿಸುವ |
ಭವವೆಲ್ಲ ಶಿವಲೀಲೆ - ಮರುಳ ಮುನಿಯ || (೧೦೫)

(ಜೀವನ+ಎಲ್ಲ)(ಶಿವನ್+ಇವನು)(ಭವ+ಎಲ್ಲ)

ಈ ಜಗತ್ತಿ(ಭುವನ)ನ ಜೀವನವೆಲ್ಲವೂ ಪರಮಾತ್ಮನ ವಿಹಾರದ ಸ್ಥಳ. ಅವನೂ ಪರಮಾತ್ಮ ಇವನೂ ಪರಮಾತ್ಮ. ನಾನು, ನೀನುಗಳೆಲ್ಲರೂ ಪರಮಾತ್ಮನೇ ಅಹುದು. ನಮ್ಮಗಳನ್ನು ಉತ್ಸಾಹಗೊಳಿಸುವ, ಕನಲಿಸುವ ಮತ್ತು ಕುಣಿಯಿಸುವ ಪ್ರಾಪಂಚಿಕ ವ್ಯವಹಾರ(ಭವ)ಗಳೆಲ್ಲವೂ ಆ ಪರಮಾತ್ಮನ ಆಟವೇ ಸರಿ.

Wednesday, November 16, 2011

ಶಾಶ್ವತಾಕಾಶದಲಿ ನಶ್ವರದ ನಕ್ಷತ್ರ (104)


ಶಾಶ್ವತಾಕಾಶದಲಿ ನಶ್ವರದ ನಕ್ಷತ್ರ |
ವಿಶ್ವಮೂಲಂ ಸತ್ಯ ಬಾಹ್ಯದೊಳು ಮಿಥ್ಯೆ ||
ಈಶ್ವರನ ನಿಜಸಾಮ್ಯ ಮಾನುಷ್ಯ ವೈಷಮ್ಯ |
ವಿಶ್ವಸಿತ ಲೀಲೆಯಿದು - ಮರುಳ ಮುನಿಯ || (೧೦೪)

(ಶಾಶ್ವತ+ಆಕಾಶದಲಿ)

ಎಂದೆಂದಿಗೂ ಇರುವ ಆಕಾಶದಲ್ಲಿ ನಾಶವಾಗತಕ್ಕಂತಹ ನಕ್ಷತ್ರಗಳಿವೆ. ಜಗತ್ತಿನ ಆದಿ ಮತ್ತು ಹುಟ್ಟುಗಳು ನಿಜ, ಹೊರಜಗತ್ತು ಸುಳ್ಳು (ಮಿಥ್ಯೆ). ಅಂತೆಯೇ ಪರಮಾತ್ಮನ ಸ್ವಂತ ಹೋಲಿಕೆ(ಸಾಮ್ಯ)ಗಳನ್ನು ಮನುಷ್ಯ ಜೀವಿಗಳ ವ್ಯತ್ಯಾಸಗಳಲ್ಲಿ ನಾವು ಕಾಣಬಹುದು.

Tuesday, November 15, 2011

ಲೀಲೆಯೋ ಜಗವೆಲ್ಲ ಲೋಕನಾಟಕ ಲೀಲೆ (103)


ಲೀಲೆಯೋ ಜಗವೆಲ್ಲ ಲೋಕನಾಟಕ ಲೀಲೆ |
ಕಾಲವಶವೆಲ್ಲಮುಂ ಕಾಲಮಾರುತನ ||
ಏಳಿಸುತ ಬೀಳಿಸುತ ಮನುಜಮಾನಸಗಳಲಿ |
ಚಾಲಿಪಂ ತ್ರಿಗುಣಗಳ - ಮರುಳ ಮುನಿಯ || (೧೦೪)

(ಕಾಲವಶ+ಎಲ್ಲಮುಂ)

ಈ ಪ್ರಪಂಚದ ಆಟಗಳೆಲ್ಲವೂ ಒಂದು ವಿನೊದ ನಾಟಕ. ಜಗತ್ತಿನಲ್ಲಿರುವ ಎಲ್ಲವೂ ಆ ಕಾಲನಿಗೆ ಅಧೀನವಾದರೂ, ಕಾಲನು ಮಾರುತನನ್ನು ಏಳಿಸುತ ಮತ್ತು ಬೀಳಿಸುತ ಮನುಷ್ಯರ ಮನಸ್ಸುಗಳಲ್ಲಿ ಸತ್ತ್ವ, ರಜ, ತಮಗಳೆಂಬ ಮೂರೂ ಸ್ವಭಾವಗಳನ್ನು ನಿರ್ವಹಿಸುತ್ತಾನೆ.

Monday, November 14, 2011

ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ (102)


ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ |
ಅಲುಗುತ್ತಲಲೆಯಿರಲ್ ಕಡಲಿನ ಮಹತ್ತ್ವ ||
ಜಲಧಿ (ವೀತತ) ರಂಗಮಿರೆ ನೋಳ್ಪರಾರ್ (ಅದನು) |
ಚಲನೆಯೇ ಲೀಲೆಯೆಲೊ - ಮರುಳ ಮುನಿಯ || (೧೦೨)

(ತ್ರಿಗುಣಂ+ಇರೆ)(ಅಲುಗುತ್ತಲ್+ಅಲೆಯಿರಲ್)

ಚಿಂತೆ ಮತ್ತು ಗಾಬರಿಗಳನ್ನುಂಟುಮಾಡುವ, ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಸ್ವಭಾವಗಳಿದ್ದರೆ ಈ ಪ್ರಪಂಚದ ಜೀವನದ ಆಟ ಆಡಲು ಚೆನ್ನಾಗಿರುತ್ತದೆ. ಸಮುದ್ರದ ತೆರೆಗಳು ಅಲುಗಾಡುತ್ತಿದ್ದರೆ ಮಾತ್ರ ಅದರ ಹಿರಿಮೆ. ಅಲೆಗಳಿಲ್ಲದಿದ್ದರೆ (ವೀತತರಂಗ) ಸಮುದ್ರವನ್ನು ನೋಡಲು ಯಾರೂ ಬರಲಾರರು. ಈ ರೀತಿಯಾಗಿ ಸದಾಕಾಲವೂ ಕ್ರಿಯಾಶಾಲಿತ್ವದಿಂದ ಕೂಡಿರುವುದೇ ಈ ಪ್ರಪಂಚದ ಆಟದ ಆಕರ್ಷಣೆಯಾಗಿದೆ.

Friday, November 11, 2011

ಜೀವಕಂ ಜೀವಕಂ ಸ್ನೇಹದಿನೊ ವೈರದಿನೊ (101)


ಜೀವಕಂ ಜೀವಕಂ ಸ್ನೇಹದಿನೊ ವೈರದಿನೊ |
ಭಾವರಜ್ಜುವ ಕಟ್ಟಿ ಜಾಲಗಳ ನೆಯ್ದು ||
ನೋವಿಂದೆ ಸಂತಸದಿ ಬಾಯ್ಬಿಡಿಸಿ ನೋಡುವಾ |
ದೈವದ ಮಹಾಲೀಲೆ - ಮರುಳ ಮುನಿಯ || (೧೦೧)

ಒಂದು ಜೀವಕ್ಕೂ ಮತ್ತು ಇನ್ನೊಂದು ಜೀವಕ್ಕೂ ಸ್ನೇಹ ಅಥವಾ ವೈರತ್ವದಿಂದ, ನಾನಾ ಭಾವನೆಗಳೆಂಬ ಹಗ್ಗ(ರಜ್ಜು)ಗಳನ್ನು ಕಟ್ಟಿ, ಬಲೆ(ಜಾಲ)ಗಳನ್ನು ಹೆಣೆದು, ನೋವು ಅಥವಾ ಸಂತೋಷದಿಂದ ಅವರುಗಳ ಬಾಯಿಗಳನ್ನು ಬಿಡಿಸಿ ನೋಡುವುದು, ಈ ದೈವದ ಬಹು ದೊಡ್ಡ ವಿನೋದ ಮತ್ತು ಆಟ.

Thursday, November 10, 2011

ಲೀಲೆಯದು ಬರಿಲೀಲೆ ಬರಿಬನದ ಬರಿಯಾಟ (100)


ಲೀಲೆಯದು ಬರಿಲೀಲೆ ಬರಿಬನದ ಬರಿಯಾಟ |
ಸೋಲಿಲ್ಲ ಗೆಲವಿಲ್ಲ ಚಿಂತೆಯೇನಿಲ್ಲ ||
ಮೂಲಕರ್ತನ ನೈಜ ವೈಭವದ ವಿಸ್ತಾರ |
ಜಾಲಶಕ್ತಿವಿಲಾಸ - ಮರುಳ ಮುನಿಯ || (೧೦೦)

(ಲೀಲೆ+ಅದು)(ಬರಿ+ಆಟ)(ಸೋಲ್+ಇಲ್ಲ)(ಗೆಲವು+ಇಲ್ಲ)(ಚಿಂತೆ+ಏನ್+ಇಲ್ಲ)

ಇವುಗಳೆಲ್ಲವೂ ಕೇವಲ ವಿನೋದ, ಚೆಲ್ಲಾಟ ಮತ್ತು ಆಟ. ಕೇವಲ ವನದಲ್ಲಿ ಆಡುವ ಆಟಗಳಿವು. ಇದರಲ್ಲಿ ಸೋಲು ಮತ್ತು ಗೆಲವುಗಳಿಲ್ಲ. ಯಾವ ವಿಧವಾದ ಕಳವಳಕ್ಕೂ ಇಲ್ಲಿ ಅವಕಾಶವಿಲ್ಲ. ಇವುಗಳಿಗೆ ಹುಟ್ಟು ಮತ್ತು ಕಾರಣಕರ್ತನಾಗಿರುವನ ಸಹಜವಾದ ವೈಭವದ ಹರಡುವಿಕೆಗಳಿವು. ಅವನು ಹಬ್ಬಿಸಿರುವ ಜಾಲದಲ್ಲಿ ಅವನ ಶಕ್ತಿ ತೋರುವ ವಿಲಾಸಗಳಿವು.

Wednesday, November 9, 2011

ಅವನಿವನ ನೀನವನ ನಾನಿವನ ನೀನೆನ್ನ (99)


ಅವನಿವನ ನೀನವನ ನಾನಿವನ ನೀನೆನ್ನ |
ಸವರಿ ಮೈಮರೆಸುತಿರೆ ತಿವಿದುರುಬಿಸುತಿರೆ ||
ಅವಗುಂಠಿತನದೊರ‍್ವನೀಕ್ಷಿಸುತೆ ನಗುತಿಹನು |
ಶಿವಲೀಲೆ ನಮ್ಮ ಬಾಳ್ - ಮರುಳ ಮುನಿಯ || (೯೯)

(ಅವನ್+ಇವನ)(ನೀನ್+ಅವನ)(ನಾನ್+ಇವನ)(ನೀನ್+ಎನ್ನ)(ಮೈಮರೆಸುತ+ಇರೆ)
(ತಿವಿದು+ಉರುಬಿಸುತ+ಇರೆ)(ಅವಗುಂಠಿತನ್+ಅದು+ಒರ‍್ವನ್+ಈಕ್ಷಿಸುತೆ)

ಅವನು ಇವನನ್ನು, ನೀನು ಅವನನ್ನು, ನಾನು ಇವನನ್ನು, ನೀನು ನನ್ನ, ಮೈಸವರಿ ಮೈಮರೆಸಿ, ಚುಚ್ಚಿ(ತಿವಿದು) ಒಬ್ಬರ ಮೇಲೊಬ್ಬರು ಬೀಳುವಂತೆ ಮಾಡಿಸುತ್ತಿರಲು (ಉರಿಬಿಸುತಿರೆ), ಮುಸುಕು ಹಾಕಿಕೊಂಡು (ಅವಗುಂಠಿತ) ನಮ್ಮ ಕಣ್ಣುಗಳಿಗೆ ಕಾಣಿಸಿಕೊಳ್ಳದಿರುವನೊಬ್ಬನು, ಇವುಗಳನ್ನು ಕಂಡು (ಈಕ್ಷಿಸುತೆ) ನಗುತ್ತಾ ಆನಂದದಿಂದಿದ್ದಾನೆ. ನಮ್ಮ ಜೀವನವೆಲ್ಲವೂ ಪರಮಾತ್ಮನ ಆಟವೇ ಹೌದು.

Tuesday, November 8, 2011

ಜಗವೆಲ್ಲ ಶಿವಲೀಲೆ ಭಗವದರ್ಥದ ಲೀಲೆ (98)


ಜಗವೆಲ್ಲ ಶಿವಲೀಲೆ ಭಗವದರ್ಥದ ಲೀಲೆ |
ಖಗಲೀಲೆ ಮೃಗಲೀಲೆ ಕ್ರಿಮಿಕೀಟಲೀಲೆ ||
ನಗ ನದೀ ನದ ಲೀಲೆ ಮೇಲೆ ಮನುಜರಲೀಲೆ |
ಅಗಣಿತದ ಲೀಲೆಯದು - ಮರುಳ ಮುನಿಯ || (೯೮)

(ಭಗವತ್+ಅರ್ಥದ)

ಈ ಪ್ರಪಂಚವೆಲ್ಲವೂ ಆ ಪರಮಾತ್ಮನ ಆಟ. ಭಗವಂತನ ಲೀಲಾ ವಿನೋದ ದೃಷ್ಟಿಯ ಆಟಗಳಿವು. ಹಕ್ಕಿ(ಖಗ)ಗಳ ಆಟ, ಪ್ರಾಣಿಗಳ ಆಟ, ಕೀಟಗಳ ಆಟ, ಬೆಟ್ಟ (ನಗ), ಗಂಡು ನದಿ (ನದ) ಮತ್ತು ಹೆಣ್ಣು ನದಿಗಳ ಆಟಗಳು. ಇವುಗಳೆಲ್ಲವೂ ಅಲ್ಲದೆ ಅದು ಮನುಷ್ಯರ ಆಟ. ಲೆಕ್ಕಕ್ಕೆ ಸಿಗಲಾರದಷ್ಟು (ಅಗಣಿತ) ಆಟಗಳಿವು.

Friday, November 4, 2011

ಖೇಲನ ವ್ಯಾಪಾರವೀ ಜಗದ್ವಿಸ್ತಾರ (97)


ಖೇಲನ ವ್ಯಾಪಾರವೀ ಜಗದ್ವಿಸ್ತಾರ |
ಮೂಲಕಾರಣನಿದಕೆ ಪೂರ್ಣಸ್ವತಂತ್ರಂ ||
ಲೀಲೆಗೆಂದೀ ಚಿತ್ರಮೋಹವೈರಾದಿಗಳ |
ಚಾಲವಂ ರಚಿಸಿಹಂ - ಮರುಳ ಮುನಿಯ || (೯೭)

(ಜಗತ್+ವಿಸ್ತಾರ)(ಮೂಲಕಾರಣನ್+ಇದಕೆ)(ಲೀಲೆಗೆ+ಎಂದು+ಈ)

ಈ ಜಗತ್ತಿನ ವೈಶಾಲ್ಯ, ಆ ಪರಮಾತ್ಮನ ಆಟ(ಖೇಲನ)ಮಾಡುವ ವ್ಯವಹಾರ. ಇದಕ್ಕೆ ಹುಟ್ಟು ಮತ್ತು ಕಾರಣಗಳಾಗಿರುವ ಅವನು ಸಂಪೂರ್ಣವಾಗಿ ತನ್ನಿಚ್ಛೆ ಬಂದಂತೆ ನಡೆಯಬಲ್ಲನು. ತನ್ನ ಆಟಪಾಟಗಳಿಗೋಸ್ಕರ ಅವನು ಈ ಚಿತ್ರ, ಅಜ್ಞಾನ, ಅಕ್ಕರೆ, ಪ್ರೀತಿ, ದ್ವೇಷ ಮತ್ತು ಹಗೆತನಗಳ ಆಕರ್ಷಣೆಯ ಬಲೆ(ಜಾಲ)ಗಳನ್ನು ನಿರ್ಮಿಸಿದ್ದಾರೆ.

Thursday, November 3, 2011

ಮೂಲಸತ್ತ್ವ ಬ್ರಹ್ಮವೇಕ ಬಹುವಾ ವೇಷ (96)


ಮೂಲಸತ್ತ್ವ ಬ್ರಹ್ಮವೇಕ ಬಹುವಾ ವೇಷ |
ಕಾಲದೇಶಂಗಳಿಂ ಬ್ರಹ್ಮವಾತ್ಮವಹ ವೇಷ ||
ತಾಳಿ ದೇಹವನಾತ್ಮ ಜೀವನೆನಿಪುದು ವೇಷ |
ಲೀಲೆ ವೇಷವೋ ವಿಶ್ವ - ಮರುಳ ಮುನಿಯ || (೯೬)

(ಬ್ರಹ್ಮ+ಏಕ)(ಬಹು+ಆ)(ಬ್ರಹ್ಮ+ಆತ್ಮವಹ)(ದೇಹವನ್+ಆತ್ಮ)(ಜೀವನ್+ಎನಿಪುದು)

ಮೊತ್ತಮೊದಲಿನ ಸಾರ ಬ್ರಹ್ಮ. ಅದು ಒಂದೇ ಒಂದು. ಆದರೆ ಅದು ಬಹು ವೇಷಗಳನ್ನು ತಾಳಿದೆ. ಸಮಯ ಮತ್ತು ಸ್ಥಳಗಳಿಂದ ಬ್ರಹ್ಮವು ಆತ್ಮನೆಂಬ ವೇಷವನ್ನು ತಳೆದು, ಆತ್ಮವು ದೇಹವನ್ನು ಸೇರಿ ಜೀವವೆಂದೆನ್ನಿಸಿಕೊಳ್ಳುವ ವೇಷವನ್ನು ಪಡೆಯುತ್ತದೆ. ಈ ಪ್ರಪಂಚವೆಲ್ಲವೂ ಈ ವೇಷಗಳ ಆಟವೇ ಸರಿ.

Wednesday, November 2, 2011

ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ (95)


ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ |
ಇರದೆ ತೋರುವುದೆಂತು ತೋರದಿರವೆಂತು ? ||
ಪರತತ್ತ್ವ ಲೋಕಂಗಳೆರಡುಮೊಂದೇ ವಸ್ತು |
ಮರದ ಬೇರೆಲೆಯವೊಲು - ಮರುಳ ಮುನಿಯ || (೯೫)

(ಇರುವುದು+ಒಂದು+ಎರೆಡು+ಎನಿಸಿ)(ತೋರುವುದು+ಎಂತು)(ತೋರದೆ+ಇರವು+ಎಂತು)(ಲೋಕಂಗಳ್+ಎರಡುಂ+ಒಂದೇ)(ಬೇರ್+ಎಲೆಯ+ವೊಲು)

ಇರುವ ವಸ್ತು ಒಂದೇ ಒಂದಾದರೂ ಸಹ ಅದು ಜನಗಳ ಕಣ್ಣುಗಳಿಗೆ ಎರಡೆಂದೆನ್ನಿಸುವಂತೆ ಕಾಣಿಸಿಕೊಳ್ಳುತ್ತದೆ. ಆ ವಸ್ತು ಇರದಿದ್ದರೆ ಅದು ಹೇಗೆ ತಾನೆ ಕಾಣಿಸಿಕೊಳ್ಳಬಲ್ಲುದು ಅಥವಾ ಅದು ಇದ್ದರೆ ಕಾಣಿಸಿಕೊಳ್ಳದೆ ಇರಲು ಹೇಗೆ ಸಾಧ್ಯ? ಪರತತ್ತ್ವ ಮತ್ತು ಇಹಲೋಕಗಳೆರಡೂ ಒಂದೇ ವಸ್ತು. ಅದು ಮರದ ಬೇರು ಮತ್ತು ಎಲೆಗಳಂತೆ.

Tuesday, November 1, 2011

ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ (94)


ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ |
ದಿನದಿನದಿ ಗಿಡಗಿಡದಿ ಹೊಸಹೊಸತು ಚಿಗುರು ||
ಕ್ಷಣವಿಕ್ಷಣಮುಮಂತು ಪರಸತ್ತ್ವಮೆತ್ತಲುಂ |
ಜನುಮ ತಾಳುತ್ತಿಹುದು - ಮರುಳ ಮುನಿಯ || (೯೪)

(ಕ್ಷಣ+ವಿಕ್ಷಣಮುಂ+ಅಂತು)(ಪರಸತ್ತ್ವಂ+ಎತ್ತಲುಂ)

ಒಂದು ಕಾಡಿನ ಮಧ್ಯದಲ್ಲಿ ನಿಂತುಕೊಂಡು ನೋಡಿದರೆ, ದಿಕ್ಕು ದಿಕ್ಕುಗಳಲ್ಲೂ ಪ್ರತಿನಿತ್ಯವೂ ಹೊಸ ಹೊಸದಾದ ಚಿಗುರುಗಳು ಗಿಡಮರಗಳಲ್ಲಿ ಬಿಡುವುದನ್ನು ಕಾಣುತ್ತೀಯೆ. ಈ ರೀತಿಯಾಗಿ ಈ ಪ್ರಪಂಚದಲ್ಲಿ ಪ್ರತಿಕ್ಷಣವೂ ಮತ್ತು ಕ್ಷಣದ ಅಂಶ(ವಿಕ್ಷಣ)ಗಳಲ್ಲೂ ಪರಮಾತ್ಮನ ಸಾರವು ಎಲ್ಲೆಲ್ಲಿಯೂ ಜನುಮವೆತ್ತುತ್ತಿರುತ್ತದೆ.