Tuesday, October 11, 2011

ಇನ್ನೊಂದನೆಳಸಗೊಡದನ್ಯವನು ಮರೆಯಿಪುದು (83)


ಇನ್ನೊಂದನೆಳಸಗೊಡದನ್ಯವನು ಮರೆಯಿಪುದು |
ತನ್ನನೇ ತಾಂ ನೆನೆಯದಂತೆ ಕರಗಿಪುದು ||
ಪೂರ್ಣದೊಳ್ ಪ್ರೇಮಿಯಂ ಪ್ರಿಯದೊಳೊಂದಾಗಿಪುದು |
ಚೆನ್ನೆನುವುದದ್ವೈತ - ಮರುಳ ಮುನಿಯ || (೮೩)

(ಇನ್ನೊಂದನ್+ಎಳಸಗೊಡದೆ+ಅನ್ಯವನು)(ಪ್ರಿಯದೊಳ್+ಒಂದಾಗಿಪುದು)
(ಚೆನ್ನ್+ಎನುವುದು+ಅದ್ವೈತ)

ಇನ್ನೊಂದನ್ನು ಬಯಸದಂತೆ ತನ್ನದಲ್ಲದ ಬೇರೆ ಎಲ್ಲವನ್ನು ಮರೆಯುವಂತೆ ಮಾಡುವುದು. ಅನಂತರ ತನ್ನನ್ನು ತಾನೇ ಜ್ಞಾಪಕ ಇಟ್ಟುಕೊಳ್ಳದಂತೆ ಅದರಲ್ಲೇ ಪೂರ್ತಿಯಾಗಿ ಕರಗಿಸಿಬಿಡುವುದು. ಕೊನೆಯಲ್ಲಿ ಪ್ರೇಮಿಯನ್ನು ಪ್ರಿಯನ ಜೊತೆ ಸೇರಿಸುವುದು. ಈ ರೀತಿಯ ಐಕ್ಯವೇ ಒಳ್ಳೆಯದು ಮತ್ತು ಸೊಗಸು ಎನ್ನುತ್ತದೆ ಅದ್ವೈತ.

1 comment:

  1. ಹಿಂದಿನ ಕಗ್ಗದಲ್ಲಿ ಹೇಳಿದಂತೆ ಅಂತರಂಗದಲ್ಲಿ ಬೆಳಕನ್ನು ಕಂಡು ಪರಮಾತ್ಮಾನುಭವವನ್ನು ಪಡೆದವನು ಹೇಗಿರುತ್ತಾನೆ? ಅವನು ಬೇರೆ ಯಾವುದನ್ನೂ ಬೇಕೆಂದು ಬಯಸುವುದಿಲ್ಲ. ತನ್ನಲ್ಲಿರುವ ಆತ್ಮವನ್ನೇ ಎಲ್ಲ ಕಡೆಯೂ ಕಂಡಾಗ, ಹೊರಗಿನ ಪ್ರಪಂಚವನ್ನು ಆವರಿಸಿರುವ ತತ್ತ್ವವು ತನ್ನ ಆತ್ಮದಲ್ಲಿಯೇ ಕಂಡುಕೊಂಡಾಗ ಅವನಿಗೆ ಬೇರೇನೂ ಬೇಕೆನಿಸುವುದಿಲ್ಲ. ಅದು ಆತ್ಮ ಬೇರೆ, ಪರಮಾತ್ಮ ಬೇರೆಯೆಂದೆನಿಸುವುದಿಲ್ಲ. ನಾನು ಎಂಬ ಭಾವನೆ ಸಂಪೂರ್ಣವಾಗಿ ನಶಿಸಿಹೋಗುತ್ತದೆ. ಈ ಸಂಪೂರ್ಣವಾದ ಸ್ಥಿತಿಯಲ್ಲಿ ಪ್ರೇಮಿಯಾದವನು ತನ್ನ ಪ್ರಿಯಳೊಡನೆ ಬೆರೆತು ಹೋಗಿರುವಂತಿರುತ್ತದೆ. ಅಲ್ಲಿ ಬೇರೆ ಬೇರೆ ಎಂಬ ಭಾವನೆ ಇರುವುದಿಲ್ಲ. ಈ ರೀತಿಯಾದ ಒಂದು ಸ್ಥಿತಿಯನ್ನು ಅದ್ವೈತ, ಎರಡು ಇಲ್ಲದಿರುವಿಕೆ ಎಂದು ಕರೆಯುತ್ತಾರೆ. ಅದು ಸಂಪೂರ್ಣವಾದ ಸ್ಥಿತಿ. ಆದ್ದರಿಂದಲೇ ಅದನ್ನು ಚೆನ್ನು ಎಂದು ಕರೆಯುತ್ತಾರೆ. (ಮರುಳ ಮುನಿಯನ ಕಗ್ಗ-ಒಂದು ವಿವರಣೆ, ಶ್ರೀ ಡಿ.ಆರ್.ವೆಂಕಟರಮಣನ್)

    ReplyDelete