Tuesday, September 16, 2014

ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು (666)

ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು |
ಪೊಡವಿಯನು ಪಾತಾಳ ಮುಟ್ಟಿ ಕೊರೆಯುವನು ||
ಕಡಲುಗಳ ಹಾಯುವನು ಉಡುಪಥವ ಸೀಳುವನು |
ದುಡುಕನೇ ಸೃಷ್ಟಿಯೆಡೆ - ಮರುಳ ಮುನಿಯ || (೬೬೬)

(ಬೆಟ್ಟಗಳನ್+ಇಡಿಯುವನು)

ಕಾಡುಗಳನ್ನು ಕಡಿದು ಭೂಮಿಯನ್ನು ಮಟ್ಟಸ ಮಾಡುವವನು, ಬೆಟ್ಟಗಳನ್ನು ಒಡೆದು ಅದರ ಕಲ್ಲುಬಂಡೆಗಳನ್ನು ಉಪಯೋಗಿಸುವವನು, ಭೂಮಿಯನ್ನು ಪೂರ್ತಿಯಾಗಿ ಕೊರೆದು ಪಾತಾಳದವರೆಗೂ ಹೋಗುವವನು, ಸಮುದ್ರಗಳನ್ನು ದಾಟುವವನು ಮತ್ತು ಆಕಾಶವನ್ನು ಸೀಳಿ ಪಯಣಿಸುವವನು, ಸೃಷ್ಟಿಯ ಸ್ಥಾನದಲ್ಲಿ ಮುಂದಾಲೋಚನೆ ಇಲ್ಲದೆಯೇ, ಒಂದು ಕ್ರಿಯೆಯನ್ನು ಮಾಡದಿರುತ್ತಾನೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He cuts and clears forests, he pounds mountains into dust
He drills into the earth to the depth of nether world,
He crosses all oceans and tears off the starry sky,
Wouldn’t he rush at Nature at haste? – Marula Muniya
(Translation from "Thus Sang Marula Muniya" by Sri. Narasimha Bhat)

Monday, September 15, 2014

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ (665)

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ |
ಕರ್ಮಗಳ್ ತನಗಾಗಿ ನೈಜದಿಂ ತಾನೆ ||
ಉಣ್ಣಿಪ್ಪವದು ಫಲವ ಶೇಷಮಂ ಭುಕಿಸಲ್ಕೆ |
ಜನ್ಮಾಂತರದ ವಿಧಿಯೊ - ಮರುಳ ಮುನಿಯ || (೬೬೫)

(ಕರ್ಮಗಳನ್+ಅನುಕ್ಷಣಮುಂ+ಎಸಗದೆ+ಇಹನ್+ಆರಯ್ಯ)(ಉಣ್ಣಿಪ್ಪ+ಅದು)

ನಾವು ಪ್ರತಿಯೊಂದು ಕ್ಷಣವೂ ಏನಾದರೂ ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಈ ರೀತಿಯಾಗಿ ಕರ್ಮಗಳನ್ನು ಮಾಡದಿರುವ ಮನುಷ್ಯರು ಯಾರೂ ಇಲ್ಲ. ಕರ್ಮಗಳು ಸಹಜವಾಗಿ ಅವುಗಳ ಫಲವನ್ನು ಮನುಷ್ಯನು ತಾನೇ ಉಣ್ಣುವಂತೆ ಮಾಡಿ, ಮಿಕ್ಕಿರುವುದನ್ನು ಅನುಭವಿಸಲು ಪುನಃ ಜನ್ಮಗಳನ್ನೆತ್ತುವಂತೆ ಮಾಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is there anyone who is not engaged in activity every moment?
The action done for one’s own sake would make him
Eat their fruits and the soul passes through rebirths,
To experience the balance of his Karma – Marula Muniya (665)
(Translation from "Thus Sang Marula Muniya" by Sri. Narasimha Bhat)

Friday, September 12, 2014

ಜನನಿ ತನಯನನೆತ್ತಿಕೊಂಡಿರಲ್ ಬಿಸಿಯೊತ್ತು (664)

ಜನನಿ ತನಯನನೆತ್ತಿಕೊಂಡಿರಲ್ ಬಿಸಿಯೊತ್ತು |
ತನುವೊಂದಕಿನ್ನೊಂದರಿಂ ಪರಿವ ತೆರದಿ ||
ಮನುಜನೊಳು ಹಸಿವನಾಗಿಸೆ ಸೃಷ್ಟಿಯವನವಳ |
ಋಣವುಂಡು ಬೆಳೆಯುವನೊ - ಮರುಳ ಮುನಿಯ || (೬೬೪)

(ತನಯನಂ+ಎತ್ತಿಕೊಂಡು+ಇರಲ್)(ತನು+ಒಂದಕೆ+ಇನ್ನೊಂದರಿಂ)(ಮನುಜನ+ಒಳು)(ಹಸಿವನ್+ಆಗಿಸೆ)(ಸೃಷ್ಟಿ+ಅವನ್+ಅವಳ)

ತಾಯಿಯು ತನ್ನ ಮಗನನ್ನ ಎತ್ತಿಕೊಂಡಿರುವಾಗ ಅವರಿಬ್ಬರ ದೇಹಗಳ ಶಾಖವು ಒಬ್ಬರಿಂದ ಇನ್ನೊಬ್ಬರಿಗೆ ಹರಿಯುವಂತೆ, ಸೃಷ್ಟಿಯು ಮನುಷ್ಯನಲ್ಲಿ ಹಸಿವನ್ನುಂಟುಮಾಡಲು ಅವನು ಆಕೆಯ ಋಣವನ್ನು ಸೇವಿಸಿ ಬೆಳೆಯುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When mother lift up and embraces her child,
The warmth of the one’s body flows into the other
Likewise when Nature kindles hunger in man and feeds him
He grows up feeding on indebtedness – Marula Muniya (664)
(Translation from "Thus Sang Marula Muniya" by Sri. Narasimha Bhat)

Wednesday, September 10, 2014

ಋಣವ ತೀರಿಸಬೇಕು ಋಣವ ತೀರಿಸಬೇಕು (663)

ಋಣವ ತೀರಿಸಬೇಕು ಋಣವ ತೀರಿಸಬೇಕು |
ಋಣವ ತೀರಿಸಿ ಜಗತ್ಪ್ರಕೃತಿ ಲೇಖ್ಯದಲಿ ||
ಋಣ ಮತ್ತೆ ಬೆಳೆಯದವೊಲಿರುತ್ತಲಿ ಪುರಾಕೃತದ |
ಹೆಣವ ಸಾಗಿಸಬೇಕೋ - ಮರುಳ ಮುನಿಯ || (೬೬೩)

(ಜಗತ್+ಪ್ರಕೃತಿ)(ಬೆಳೆಯದವೊಲ್+ಇರುತ್ತಲಿ)

ನಮ್ಮ ಪೂರ್ವಾಜಿತದ ಸಾಲಗಳನ್ನು ತೀರಿಸುವುದಕ್ಕೋಸ್ಕರ ನಾವು ಈ ಜಗತ್ತಿಗೆ ಬಂದಿದ್ದೇವೆ. ಆದುದ್ದರಿಂದ ಈ ಸಾಲಗಳನ್ನು ತೀರಿಸುವುದು ನಮ್ಮ ಆದ್ಯ ಕರ್ತವ್ಯ. ಈ ಜಗತ್ತಿನ ಲೇಖನ(ಲೇಖ್ಯ)ದಲ್ಲಿರುವ ಸಾಲಗಳನ್ನು ನಾವು ಈ ಸಾಲಗಳು ಪುನಃ ಬೆಳೆಯದಂತೆ ನಮ್ಮ ಪೂರ್ವಾಜಿತದ ಹೆಣವನ್ನು ಸಾಗಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Debts must be settled, debts must be settled and settling all debts,
We must see to it that debts don’t grow any longer
In the records of the world and nature and at the same time
We must carry the corpse of past Karma to its cremation ground – Marula Muniya (663)
(Translation from "Thus Sang Marula Muniya" by Sri. Narasimha Bhat)

Tuesday, September 9, 2014

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು (662)

ಪ್ರಾರಭ್ದವಾಸನಾ ಋಣ ಗುಣೋತ್ಕರಮೊಂದು |
ಪೌರುಷದ ಸಾಂಪ್ರತ ವಿವೇಕಮೊಂದಿಂತು ||
ಹೋರುತಿರೆ ನರನೆರಡು ಪಕ್ಷಗಳ್ ನ್ಯಾಯಮಂ |
ತೀರುಗೊಳಿಪಂ ಸ್ವಾಮಿ - ಮರುಳ ಮುನಿಯ || (೬೬೨)

(ಗುಣ+ಉತ್ಕರಂ+ಒಂದು)(ವಿವೇಕಂ+ಒಂದು+ಇಂತು)(ಹೋರುತ+ಇರೆ)(ನರನ್+ಎರಡು)

ಹಿಂದಿನ ಜನ್ಮಗಳ ಕರ್ಮಗಳಿಂದ(ಪ್ರಾರಬ್ಧ) ಹುಟ್ಟಿದ ಬಯಕೆಗಳ(ವಾಸನೆ) ಋಣಗಳನ್ನು ತೀರಿಸುವ ಸ್ವಭಾವಗಳ ರಾಶಿ(ಉತ್ಕರ) ಒಂದು ಕಡೆ. ಸದ್ಯ ಇರುವ ಪ್ರಪಂಚಕ್ಕೆ ಸಂಬಂಧಪಟ್ಟ ಉಚಿತವಾದ (ಸಾಂಪ್ರತ) ಪೌರುಷದ ವಿವೇಚನಾಶಕ್ತಿ ಇನ್ನೊಂದು ಕಡೆ. ಇವೆರಡು ಪಕ್ಷಗಳ ನಡುವೆ ಮನುಷ್ಯನು ಹೋರಾಡುತ್ತಿರಲಾಗಿ, ಪರಮಾತ್ಮನು ನ್ಯಾಯವನ್ನು ತೀರ್ಪುಗೊಳಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The debts of past Karma and instincts are on one side,
Your wisdom and manliness are on another side,
These two sides in man fight for justice,
The Lord would deliver His verdict in time – Marula Muniya
(Translation from "Thus Sang Marula Muniya" by Sri. Narasimha Bhat)

Monday, September 8, 2014

ಮುಗಿಲಿಂದಿಳಿದು ನೆಲವನಿನ್ನುಮಾನದಿಹ ಪನಿ (661)

ಮುಗಿಲಿಂದಿಳಿದು ನೆಲವನಿನ್ನುಮಾನದಿಹ ಪನಿ |
ಸೊಗ ಕುಡಿಯಲಿಕೆ ಕೆರೆಗಳೇತಕೆನ್ನುವನಾರ್? ||
ಅಗುಣ ಅಶರೀರ ಸತ್ತ್ವವ ನಿನಗೆ ಪಿಡಿದೀಯೆ |
ಸಗುಣಾಕೃತಿಯೆ ಘಟವೊ - ಮರುಳ ಮುನಿಯ || (೬೬೧)

(ಮುಗಿಲಿಂದ+ಇಳಿದು)(ನೆಲವಂ+ಇನ್ನುಂ+ಆನದೆ+ಇಹ)(ಕೆರೆಗಳ್+ಏತಕೆ+ಎನ್ನುವನ್+ಆರ್)(ಸಗುಣ+ಆಕೃತಿಯೆ)

ಮೋಡಲಿಂದಿದಿಳಿದು ಇನ್ನೂ ನೆಲವನ್ನು ಸೇರದಿರುವ ಮಳೆಯ ನೀರು ಅನುಭವಿಲಿಸಲಿಕ್ಕೆ ಸುಖವನ್ನುಂಟುಮಾಡುತ್ತದೆ. ಆ ನೀರನ್ನು ಕುಡಿಯಲು ಕೆರೆಗಳು ಏಕೆ ಬೇಕೆಂದು ಯಾರಾದರೂ ಹೇಳಿಯಾರೇನು? ಸ್ವಾಭಾವತೀತ ಮತ್ತು ಶರೀರವಿಲ್ಲದ ಪರಮಾತ್ಮನೆಂಬ ಸತ್ತ್ವವನ್ನು ನಿನಗೆ ಹಿಡಿದುಕೊಟ್ಟಿರಲು, ಸ್ವಭಾವಗಳಿಂದ ಕೂಡಿದ ಆಕೃತಿಯೇ ಈ ಮನುಷ್ಯ ಎಂಬ ಗಡಿಗೆ (ಘಟ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who would say the lakes aren’t necessary for one to drink
The drops from clouds that have not yet reached the earth?
The image with form is the most suitable pot
For you to hold the formless and attribute less
Divine Substance – Marula Muniya (661)
(Translation from "Thus Sang Marula Muniya" by Sri. Narasimha Bhat)

Friday, September 5, 2014

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ (660)

ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ |
ಗುಡಿಗದನು ಕೊಂಡೊಯ್ವೆನೆನ್ನುವನು ಭಕುತ ||
ಮಡದಿ ಮಕ್ಕಳ ಮುಡಿಗದೆನ್ನುವನು ಸಂಸಾರಿ |
ಸಡಲದೆದೆಯವನಾರು? - ಮರುಳ ಮುನಿಯ || (೬೬೦)

(ನಗುತಲ್+ಇರೆ)(ಗುಡಿಗೆ+ಅದನು)(ಕೊಂಡು+ಒಯ್ವೆನು+ಎನ್ನುವನು)(ಮುಡಿಗೆ+ಅದು+ಎನ್ನುವನು)(ಸಡಲದ+ಎದೆಯವನು+ಆರು)

ಪ್ರಕೃತಿಯ ಸೊಬಗನ್ನು ಕಂಡು ಸಂತೋಷಪಡುವವನು ಒಂದು ಗಿಡದಲ್ಲಿ ಹುಟ್ಟಿರುವ ಹೂವನ್ನು ಕೀಳದೆಯೇ ನೋಡಿ ನಲಿಯುತ್ತಾನೆ. ಈ ಹೂವನ್ನು ತೆಗೆದುಕೊಂಡು ಹೋಗಿ ದೇವಸ್ಥಾನದಲ್ಲಿರುವ ದೇವರಿಗೆ ಸಮರ್ಪಿಸುತ್ತೇನೆಂದು ಒಬ್ಬ ಭಕ್ತನು ಹೇಳುತ್ತಾನೆ. ಇದು ನನ್ನ ಹೆಂಡತಿ, ಮಕ್ಕಳ ಮುಡಿಗಾಗುತ್ತದೆನ್ನುವವನು ಸಂಸಾರಿ. ಈ ಮೂರೂ ವಿಧವಾದ ಅನುಭವವನ್ನು ಕಂಡು ತನ್ನ ಹೃದಯವನ್ನು ಸಡಿಲಿಸದಿರುವವನು ಯಾರಿದ್ದಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who can enjoy flowers smiling on a plant is really wise,
One who chooses to offer them to the temple deity is a devotee,
One who plucks them for his wife and children is a householder
Is there any one unmoved in such situation? – Marula Muniya (660)
(Translation from "Thus Sang Marula Muniya" by Sri. Narasimha Bhat)

Thursday, September 4, 2014

ಪಾಳು ಬಾವಿಗೆ ಬಿದ್ದು ಪುಲಿಯಂಜಿಕೆಯಿನೆಗರಿ (659)

ಪಾಳು ಬಾವಿಗೆ ಬಿದ್ದು ಪುಲಿಯಂಜಿಕೆಯಿನೆಗರಿ |
ವ್ಯಾಳಕೆಳಗಿರೆ ಬದಿಯತಬ್ಬಿ ನಡುಗುವವಂ ||
ಮೇಲಣಿಂದುದುರಿದರಲಿನ ರಸಕೆ ಬಾಯೊಡ್ಡೆ |
ಬಾಳರಿತ ಯೋಗಮದು - ಮರುಳ ಮುನಿಯ || (೬೫೯)

(ಪುಲಿ+ಅಂಜಿಕೆಯಿನ್+ಎಗರಿ)(ಮೇಲಣಿಂದ+ಉದುರಿದ+ಅರಲಿನ)(ಬಾಯ್+ಒಡ್ಡೆ)(ಯೋಗಂ+ಅದು)

ಒಬ್ಬ ಮನುಷ್ಯನನ್ನು ಒಂದು ಹುಲಿಯು ಅಟ್ಟಿಸಿಕೊಂಡು ಬಂದು, ಅವನು ಹೆದರಿಕೆಯಿಂದ ಓಡಿ ಹೋಗಿ ಹಾಳುಬಾವಿಯಲ್ಲಿ ಬಿದ್ದು, ಕೆಳಗೆ ನೋಡಿದರೆ ಒಂದು ಹಾವ(ವ್ಯಾಳ)ನ್ನು ಕಂಡು, ಅವನು ಪಕ್ಕದಲ್ಲಿರುವ ಬಾವಿಯ ಕಟ್ಟೆಯನ್ನು ತಬ್ಬಿಕೊಂಡಿರುವಾಗ, ಬಾವಿಯ ಮೇಲೆ ಇರುವ ಜೇನುಗೂಡಿನಿಂದ ಜೇನುತುಪ್ಪವು (ಅರಲ ರಸ) ಹನಿಹನಿಯಾಗಿ ಬೀಳುವುದನ್ನು ಕಂಡು, ಆ ಸಂಕಷ್ಟ ಸಮಯದಲ್ಲೂ, ಅವನ ಆಸೆಯು ಇಂಗದೆ, ಅವನು ತನ್ನ ಬಾಯನ್ನು ಆ ಜೇನುತುಪ್ಪದ ಹನಿಯನ್ನು ಕುಡಿಯಲು ತೆರೆಯುತ್ತಾನೆ. ಇದನ್ನು ಕಂಡು ಜೀವನವನ್ನು ಅರಿಯುವುದೇ ಒಂದು ಯೋಗ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Terrified by a chasing tiger one runs and falls into a dry well,
Down below he sees a cobra crawling and clings to the wall trembling,
From there itself he stretches his tongue to the dripping drops of honey,
That is the yoga practised by men well versed in life – Marula Muniya (659)
(Translation from "Thus Sang Marula Muniya" by Sri. Narasimha Bhat)

Wednesday, September 3, 2014

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ (658)

ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ |
ನಾಣ್ಯಸಂಚಿಕೆಗಂತು ತಣಿವಪ್ಪುದುಂಟೆ? ||
ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ |
ಸನ್ನೆಯದು ಕಲಿದೊರೆಗೆ - ಮರುಳ ಮುನಿಯ || (೬೫೮)

(ತೇಗುವುದು+ಒಡನೆ)(ನಾಣ್ಯಸಂಚಿಕೆಗೆ+ಅಂತು)(ತಣಿವು+ಅಪ್ಪುದು+ಉಂಟೆ)(ಪಣ್ಯ+ಆಗಿಸಿತು+ಎಲ್ಲ)(ಸನ್ನೆ+ಅದು)

ಊಟ ಮಾಡಿದ ನಂತರ ಹೊಟ್ಟೆ ತುಂಬಿ ತೃಪ್ತಿಯಿಂದ ತೇಗುತ್ತೇವೆ. ಆದರೆ ಎಷ್ಟು ಹಣವನ್ನು ಕೂಡಿಟ್ಟರೂ ತೃಪ್ತಿ ಏನಾದರೂ ಸಿಗುವುದೇ? ಹಣವೆನ್ನುವುದು ಮನುಷ್ಯ ಮನುಷ್ಯರ ಬಂಧುತ್ವವನ್ನು ಒಂದು ವ್ಯಾಪಾರ(ಪಣ್ಯ)ದ ವಸ್ತುವನ್ನಾಗಿ ಮಾಡಿದೆ. ಇದು ಕಲಿಯೆಂಬ ದೊರೆಯು ಜೀವನದಲ್ಲಿ ಕಾಲಿಡಲು ಚಿಹ್ನೆ (ಸನ್ನೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the stomach is full it sends out belches of satisfaction,
But would the money bag ever express such satisfaction?
Money has made all human relations quite commercial,
It is the symbol of Kali, the monarch of this age – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 2, 2014

ತಿನ್ನಲೊಳಿತೆನೆ ರಸನೆಯದು ಕುಕ್ಷಿಗೊಳಿತಹುದೆ? (657)

ತಿನ್ನಲೊಳಿತೆನೆ ರಸನೆಯದು ಕುಕ್ಷಿಗೊಳಿತಹುದೆ? |
ಕಣ್ಣೊಳಿತೆನುವುದೆಲ್ಲ ಹೃದಯಕೊಳಿತಹುದೇಂ? ||
ಅನ್ನಭೋಗಗಳಳಿಸದಾಶೆಯುಮದೊಂದಿಹುದು |
ನಿನ್ನೊಳರಹಸ್ಯವದು - ಮರುಳ ಮುನಿಯ || (೬೫೭)

(ತಿನ್ನಲ್+ಒಳಿತು+ಎನೆ)(ಕುಕ್ಷಿಗೆ+ಒಳಿತು+ಅಹುದೆ)(ಕಣ್ಣ್+ಒಳಿತು+ಎನುವುದೆಲ್ಲ)(ಹೃದಯಕೆ+ಒಳಿತು+ಅಹುದೇಂ)(ಅನ್ನಭೋಗಗಳ್+ಅಳಿಸದ+ಆಶೆಯುಂ+ಅದೊಂದು+ಇಹುದು)(ನಿನ್ನ+ಒಳರಹಸ್ಯ+ಅದು)

ನಾಲಿಗೆ(ರಸನೆಗೆ) ರುಚಿಕರವಾಗಿ ಕಂಡ ಪದಾರ್ಥಗಳೆಲ್ಲವೂ ಹೊಟ್ಟೆ(ಕುಕ್ಷಿ)ಗೆ ಸಹ ಒಳ್ಳೆಯದನ್ನು ಮಾಡುತ್ತದೋ? ಕಣ್ಣಿಗೆ ಸುಂದರವಾಗಿ ಕಂಡ ವಸ್ತುಗಳೆಲ್ಲವೂ ಹೃದಯಕ್ಕೆ ಹಿತಕಾರಿಯೇ? ತಿನಿಸುಗಳ ಸುಖಾನುಭವಗಳು ತೃಪ್ತಿಪಡಿಸದಂತಹ ಒಂದು ಬಯಕೆ ಇದೆ. ಅದು ನಿನ್ನೊಳಗಿರುವ ಗುಟ್ಟು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Delicious to eat’ the tongue may say, but is it good for stomach?
‘Beautiful it is’, the eyes may say, but is it good for heart?
There’s a desire which food and other enjoyments cannot satisfy
That is your inner secret – Marula Muniya (657)
(Translation from "Thus Sang Marula Muniya" by Sri. Narasimha Bhat)