Tuesday, May 31, 2011

ಕನ್ನಡಿಯೆದುರು ನಿಂತು ಮಾನವನು ತನ್ನ ಲಾ- (16)

ಕನ್ನಡಿಯೆದುರು ನಿಂತು ಮಾನವನು ತನ್ನ ಲಾ-|
ವಣ್ಯಗಳ ನೋಡಿ ನೋಡುತ ಹಿಗ್ಗುವಂತೆ ||
ಚಿನ್ಮಯಂ ಸೃಷ್ಟಿ ಚಿತ್ರದಿ ತನ್ನ ವೀರ್ಯ ಸಂ-|
ಪನ್ನತೆಯನನುಭವಿಪ - ಮರುಳ ಮುನಿಯ || (೧೬)

  (ಸಂಪನ್ನತೆಯನು+ಅನುಭವಿಪ)

 ಮನುಷ್ಯನು ಕನ್ನಡಿಯ ಮುಂದೆ ನಿಂತುಕೊಂಡು ತನ್ನ ಸೊಗಸು ಮತ್ತು ಸೌಂದರ್ಯಗಳನ್ನು(ಲಾವಣ್ಯ) ನೋಡುತ್ತ ಸಂತೋಷಿಸುವಂತೆ (ಹಿಗ್ಗುವಂತೆ), ಪರಬ್ರಹ್ಮ (ಚಿನ್ಮಯ)ನೂ ಸಹ ಸೃಷ್ಟಿಯ ರಚನೆಯಲ್ಲಿ ತನ್ನ ಪರಾಕ್ರಮ (ವೀರ್ಯ) ಮತ್ತು ಸಿರಿಸಂಪತ್ತುಗಳನ್ನು (ಸಂಪನ್ನತೆಯನು) ಅನುಭವಿಸುತ್ತಾನೆ.

1 comment:

  1. ಇದೇ ಕಗ್ಗದ ಅರ್ಥಕ್ಕೆ ಹೊಂದುವಂತೆ ಡಿ.ವಿ.ಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳಿದ್ದಾರೆ.

    ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
    ಪರಕಿಸುತೆ ಮುಕುರದಲಿ ಸೊಗಸುಗಳ ಪರಿಯ ||
    ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |
    ಮೆರೆಯುವನು ಪರಬೊಮ್ಮ - ಮಂಕುತಿಮ್ಮ || (೭೮)

    ಈ ಕಗ್ಗಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದು ಶ್ರೀ. ಡಿ.ಆರ್.ವೆಂಕಟರಮಣನ್‌ರವರು ಹೀಗೆ ಹೇಳಿದ್ದಾರೆ: "ಸ್ವಶಕ್ತಿಯ ಪ್ರಭಾವವನ್ನು ನೋಡಿ ಬ್ರಹ್ಮವು ಲೀಲೆಯನ್ನಾಡುತ್ತದೆ. ಅನ್ಯಸ್ಮೃತಿಯಿಲ್ಲದ, ಅನ್ಯಸಹಾಯ ಬೇಡದ, ಅನ್ಯೋದ್ದಿಷ್ಟವಲ್ಲದ ಸ್ವಸಂತೋಷ ಕಾರ್ಯ ಇದು."

    ReplyDelete