Friday, December 30, 2011

ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ (133)

ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ-|
ತಾನಪಾಲನೆಯ ಕರ್ತವ್ಯ ಭಾರವನು ||
ಬೋನಕಾಶಿಸಿ ದಾನಿಭಯದೆ ಹೊರುವವನೊರ‍್ವ |
ಸಾನುಕಂಪೆಯಿನೊರ‍್ವ - ಮರುಳ ಮುನಿಯ || (೧೩೩)
(ಬೋನಕೆ+ಆಶಿಸಿ)(ಹೊರುವವನ್+ಒರ‍್ವ)
ತಿಳಿದಂಥವನು ಹೊರುವಂತೆ ಮತ್ತು ಅವನಂತೆಯೇ ಸೃಷ್ಟಿಯ ಪೀಳಿಗೆಗಳ ರಕ್ಷಣೆಯ ಕರ್ತವ್ಯದ ಭಾರವನ್ನು, ಅನ್ನ (ಬೋನಕೆ) ಮತ್ತು ಆಹಾರಕ್ಕೆ ಆಶಿಸಿ, ದಾನಿಯ ಭಯದಿಂದ ಹೊರುವವನು ಒಬ್ಬನಾದರೆ ಸಹಾನುಭೂತಿ ಮತ್ತು ದಯೆಯಿಂದ ಮತ್ತೊಬ್ಬನು ಹೊರುತ್ತಾನೆ.

Thursday, December 29, 2011

ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ (132)

ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ |
ಜನಕಾರ್ಯ ಯಂತ್ರಗಳ ನಿರವಿಸುವ ಚತುರರ್ ||
ಮನುಜಹೃದಯೋದ್ವೇಗ ಶಕ್ತಿಯನು ಯಂತ್ರಕ್ಕೆ |
ವಿನಿಯೋಜಿಸರೇಕೆ - ಮರುಳ ಮುನಿಯ || (೧೩೨)

(ಹೃದಯ+ಉದ್ವೇಗ)(ವಿನಿಯೋಜಿಸರ್+ಏಕೆ)

ಬೀಸುವ ಗಾಳಿಯ ರಭಸ (ಅನಿಲಗತಿ), ನೀರಿನ ಪ್ರವಾಹ (ಜಲಧಾರೆ) ಮತ್ತು ಸೂರ್ಯನ(ದಿನಪ) ಕಿರಣ(ರಶ್ಮಿ)ಗಳಿಂದ ಜನಗಳಿಗೆ ಉಪಯುಕ್ತವಾಗುವ ಯಂತ್ರಗಳನ್ನು ನಿರ್ಮಿಸುವ ನಿಪುಣರು, ಮನುಷ್ಯರ ಹೃದಯಗಳ ಉದ್ರೇಕದ ಶಕ್ತಿಯನ್ನು ಯಂತ್ರ ನಿರ್ಮಾಣಕ್ಕೆ ಏಕೆ ಬಳಸಿಕೊಳ್ಳಲಾರರು (ವಿನಿಯೋಜಿಸು) ?

Wednesday, December 28, 2011

ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ (131)

ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ |
ಕರಣವಾತಂಗೆ ಸೂಕ್ಷ್ಮದ ಕಾಚಯಂತ್ರ ||
ವಿರಚಿಸಿಕೊ ನೀನಂತರಂಗಯಂತ್ರವನಂತು |
ಪರತತ್ತ್ವ ದರ್ಶನಕೆ - ಮರುಳ ಮುನಿಯ || (೧೨೧)

(ಕಣ್ಣಿಂದ+ಅಣುವ)(ಕರಣವು+ಆತಂಗೆ)(ನೀನ್+ಅಂತರಂಗಯಂತ್ರವಂ+ಅಂತು)

ಬರಿಯ ಕಣ್ಣಿನಿಂದ ಒಂದು ಅತಿ ಸೂಕ್ಷ್ಮವಾದ ವಸ್ತುವನ್ನು (ಅಣು) ವಿಜ್ಞಾನಿಯು ಪರೀಕ್ಷಿಸಲು ಸಾಧ್ಯವೇನು? ಸೂಕ್ಷ್ಮವಾದ ಗಾಜಿ(ಕಾಚ)ನ ಉಪಕರಣ ಅಣುವನ್ನು ಪರೀಕ್ಷಿಸಲು ಅವನಿಗೆ ಸಾಧನ. ನೀನೂ ಸಹ ನಿನ್ನ ಅಂತರಂಗಯಂತ್ರವನ್ನು ಆ ರೀತಿ ನಿರ್ಮಿಸಿಕೊಂಡಲ್ಲಿ ಪರಮಾತ್ಮನ ದರ್ಶನವನ್ನು ಮಾಡಲು ಸಾಧ್ಯ.

Tuesday, December 27, 2011

ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು (130)

ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು ? |
ಆಂದೋಳನವೆ ವಾಸ್ತುಶುದ್ಧಿ ನಿಶ್ಚಿತಕೆ ||
ಅಂಧವಿಶ್ವಾಸಕಾತನುಭವಿಪ್ರಶ್ನೆ ಬಳಿ |
ಸಂದಿಹುದು ಸತ್ಯಕ್ಕೆ - ಮರುಳ ಮುನಿಯ || (೧೩೦)

(ಪಕ್ವ+ಎಂತು+ಅಹುದು)(ಅಂಧವಿಶ್ವಾಸಕೆ+ಆತ+ಅನುಭವಿಪ್ರಶ್ನೆ)

ಅನುಮಾನವೆಂಬ ಬೆಂಕಿ (ಶಿಖಿ) ಇಲ್ಲದಿದ್ದರೆ ಬುದ್ಧಿಯು ಹೇಗೆ ತಾನೇ ಮಾಗುತ್ತದೆ ? ವಸ್ತುವಿನ ಸತ್ಯಾಸತ್ಯದ ದರ್ಶನಕ್ಕೆ (ವಾಸ್ತುಶುದ್ಧಿ) ತರ್ಕಿಸುವುದೇ (ಆಂದೋಳನವೆ) ದಾರಿ. ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಅನುಭವಿ ಪ್ರಶ್ನೆಗಳು ಅವನನ್ನು ಸತ್ಯದ ಸಮೀಪಕ್ಕೆ ತೆಗೆದುಕೊಂಡು ಹೋಗುತ್ತವೆ.

Thursday, December 22, 2011

ಸಂಶಯವೆ ಸಾಜವಲ ಕಣ್ಭೋಗದೆಡೆಗಳಲಿ (129)

ಸಂಶಯವೆ ಸಾಜವಲ ಕಣ್ಭೋಗದೆಡೆಗಳಲಿ |
ಅಂಶವನೆ ಪೂರ್ಣವೆಂದೆಣಿಸೆವೇನಲ್ಲಿ ||
ಭ್ರಂಶವಿಲ್ಲದ ನಿಶ್ಚಯಕೆ ಶೋಧನೆಯೆ ದಾರಿ |
ಸಂಶೋಧಕವೊ ಶಂಕೆ - ಮರುಳ ಮುನಿಯ || (೧೨೯)

(ಕಣ್+ಭೋಗದ+ಎಡೆಗಳಲಿ)(ಪೂರ್ಣ+ಎಂದು+ಎಣಿಸೆವೇಂ+ಅಲ್ಲಿ)(ಭ್ರಂಶ+ಇಲ್ಲದ)

ಕಣ್ಣುಗಳು ಸುಖವನ್ನು ಕಾಣುವ ಜಾಗಗಳಲ್ಲಿ, ಅನುಮಾನ (ಸಂಶಯ)ಗಳಿರುವುದು ಸಹಜವೇ(ಸಾಜ) ತಾನೆ. ಅಂತಹ ಕಡೆಗಳಲ್ಲಿ ಭಾಗಶಃ ಸತ್ಯವನ್ನೇ ಪೂರ್ಣಸತ್ಯವೆಂದು ತಿಳಿಯುತ್ತೇವೆ ಅಲ್ಲವೇ! ಅಂತಹ ಶಂಕೆಗಳೇ ನಿಶ್ಚಯ ಸತ್ಯದ ಅನ್ವೇಷಣೆಗೆ ದಾರಿ ಆಗುತ್ತದೆ. ಆದ ಕಾರಣ ಸಂದೇಹದಿಂದಲೇ ಸತ್ಯಾನ್ವೇಷಣೆ ಆಗಲು ಶಕ್ಯ.

Wednesday, December 21, 2011

ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ (128)

ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ |
ಮನುಜರನುದಿನದ ಸಂಸರ್ಗ ಸಂಸ್ಕೃತಿಯಿಂ ||
ಜನಿಸುವುವು ನೂತನ ಜ್ಞಾನ ನವಭಾವಗಳು |
ಅನುಪೂರ್ವರೀತಿಯಲಿ - ಮರುಳ ಮುನಿಯ || (೧೨೮)

(ಮತಿಗಳುಂ+ಅಂತೆ)(ಬೆಳೆವುವು+ಒಂದು)(ಮನುಜರ+ಅನುದಿನದ)

ಮನಸ್ಸು ಮತ್ತು ಬುದ್ಧಿಶಕ್ತಿಗಳು, ಹಾಗೆಯೇ, ಒಂದು ನಿಯಮ ಮತ್ತು ರೀತಿಯಲ್ಲಿ ಬೆಳೆಯುತ್ತವೆ. ಮನುಷ್ಯರ ಪ್ರತಿನಿತ್ಯದ ಸಂಪರ್ಕ (ಸಂಸರ್ಗ) ಮತ್ತು ಬೌದ್ಧಿ ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ ವಿಕಾಸದಿಂದ ಹೊಸ ತಿಳಿವು ಮತ್ತು ಅಭಿಪ್ರಾಯಗಳು ಒಂದು ಕ್ರಮದಲ್ಲಿ (ಅನುಪೂರ್ವ) ಹುಟ್ಟುತ್ತವೆ.

Tuesday, December 20, 2011

ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ (127)

ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ |
ವೇದನೆಗಳಂತುದಿಸಿ ಮಾಯೆ ತೂಂಕಿಡುವಾ ||
ಖೇದ ಮೋದಾಂದೋಲನಗಳಿನಾತ್ಮೋದ್ಬೋಧ |
ಬೋಧೆಯಿಂ ಭ್ರಾಂತಿಲಯ - ಮರುಳ ಮುನಿಯ || (೧೨೬)

(ವೇದನೆಗಳ+ಅಂತು+ಉದಿಸಿ)(ಮೋದ+ಆಂದೋಲನಗಳಿನ್+ಆತ್ಮ+ಉದ್+ಬೋಧ)

ಜಗತ್ತಿನಲ್ಲಿ ಜೀವಿಸುತ್ತಿರುವ ಜೀವಿಗಳಿಗೆ ಈ ಜಗತ್ತಿನ ಸಹವಾಸವೇ ಬೇರೆ ಮತ್ತು ತಾವೇ ಬೇರೆ ಎಂಬ ತಪ್ಪು ಗ್ರಹಿಕೆ ಇರುವಾಗ, ನೋವು (ವೇದನೆ)ಗಳನ್ನು ಹಾಗೆ ಹುಟ್ಟುವಂತೆ (ಉದಿಸಿ) ಮಾಡಿ, ಮಾಯೆಯು ಇಳಬಿಡುವ (ತೂಂಕಿಡುವ) ದುಃಖ ಮತ್ತು ಸಂತೋಷಗಳ ತೂಗಾಡುವಿಕೆ(ಆಂದೋಲನ)ಯಿಂದ ಆತ್ಮ ಜಾಗೃತಗೊಳ್ಳುತ್ತದೆ. ಈ ಜಾಗೃತಿಯಿಂದ ತಪ್ಪುಗ್ರಹಿಕೆ (ಭ್ರಾಂತಿ)ಯ ನಾಶ(ಲಯ)ವಾಗುತ್ತದೆ.

Monday, December 19, 2011

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ (126)

ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ |
ಸಿರಿದೇವಿಯಂಗಡಿಯನರಸಿ ತಟವಟಿಸಿ ||
ಹೊರ ಹೊಳಪಿನಾಸೆಯಿಂದೊಳಮಬ್ಬನಪ್ಪುವನು |
ಕುರುಡನೇ ಕಂಡವನೊ - ಮರುಳ ಮುನಿಯ || (೧೨೬)

(ಸಿರಿದೇವಿಯ+ಅಂಗಡಿಯನ್+ಅರಸಿ)(ಹೊಳಪಿನ+ಆಸೆಯಿಂದ+ಒಳಮಬ್ಬನ್+ಅಪ್ಪುವನು)

ಸರಸ್ವತಿದೇವಿಯ ಛತ್ರ ತನ್ನ ಹತ್ರದಲ್ಲೇ ಇದ್ದರೂ ಸಹ, ಅದನ್ನು ಬಿಟ್ಟು ದೂರದಲ್ಲಿರುವ ಲಕ್ಷ್ಮಿದೇವಿಯ ಅಂಗಡಿಯನ್ನು ಹುಡುಕಿಕೊಂಡುಹೋಗಿ, ಮೋಸಹೋಗಿ, ಹೊರಗಿನ ಕಾಂತಿಯ (ಹೊಳಪು) ಆಸೆಯಿಂದ ತನ್ನ ಒಳಗಡೆ ಕತ್ತಲೆ(ಮಬ್ಬು)ಯನ್ನು ಹೊಂದುತ್ತಾನೆ. ಅವನು ಒಬ್ಬ ಕುರುಡನೇ ಎಂದು ತಿಳಿ.

Friday, December 16, 2011

ನರ್ತನಾವೇಶನದ ವಿಶ್ವಮೂರ್ತಿಯ ದೇಹ (125)

ನರ್ತನಾವೇಶನದ ವಿಶ್ವಮೂರ್ತಿಯ ದೇಹ |
ವರ್ತನೆಯ ಪರಿಕಿಪ್ಪೆನೆನುತೆ ನಿಜ ನಯನ ||
ವರ್ತ್ಮವನು ವಿಜ್ಞಾನಿ ತೆರೆವನಿತ್ತರೊಳು ಪರಾ |
ವರ್ತಿತವೊ ನಟ ಭಂಗಿ - ಮರುಳ ಮುನಿಯ || (೧೨೫)

(ನರ್ತನ+ಆವೇಶನದ)(ಪರಿಕಿಪ್ಪೆನ್+ಎನುತೆ)(ತೆರೆವ+ಅನಿತ್ತರೊಳು)

ಭಾವಾವೇಶದಿಂದ (ಆವೇಶನ) ನರ್ತಿಸುತ್ತಿರುವ ಪರಮಾತ್ಮನ ದೇಹದ ಚಲನೆಯನ್ನು ಪರೀಕ್ಷಿಸುವೆನೆನ್ನುತ್ತ (ಪರಿಕಿಪ್ಪೆನ್+ಎನುತ) ತನ್ನ ಕಣ್ಣುಗಳ ಎವೆಯನ್ನು (ವರ್ತ್ಮವನು) ವಿಜ್ಞಾನಿಯು ತೆರೆದು ಅತ್ತಕಡೆ ನೋಡುವಷ್ಟರಲ್ಲಿ, ಪರಮಾತ್ಮನ ನಾಟ್ಯದ ನಿಲುವು ಬದಲಾವಣೆಯಾಗಿರುತ್ತದೆ (ಪರಾವರ್ತಿತ).

Thursday, December 15, 2011

ಏನೇನೊ ನಡೆದಿಹುವು ಮಾನುಷ್ಯ ಸಿದ್ಧಿಯಲಿ (124)

ಏನೇನೊ ನಡೆದಿಹುವು ಮಾನುಷ್ಯ ಸಿದ್ಧಿಯಲಿ |
ಯಾನಗಳು ಯಂತ್ರಗಳು ರಸ ನಿರ್ಮಿತಿಗಳು ||
ಭಾನುಗೋಲಕ್ಕೇಣಿಕಟ್ಟಲೆಳಸುವ ನರನು |
ತಾನಿಳಿಯುತಿಹನೇಕೊ - ಮರುಳ ಮುನಿಯ || (೧೨೪)

(ನಡೆದು+ಇಹುವು)(ಭಾನುಗೋಲಕ್ಕೆ+ಏಣಿಕಟ್ಟಲ್+ಎಳಸುವ)(ತಾನ್+ಇಳಿಯುತ+ಇಹನು+ಏಕೊ)

ಮನುಷ್ಯನು, ಪಯಣಿಸುವ ವಾಹನಗಳ ವಿಚಾರದಲ್ಲಿ (ರೈಲು, ಕಾರು, ವಿಮಾನ, ಹಡಗು, ರಾಕೆಟ್), ನಿರ್ಮಿಸಿರುವ ಯಂತ್ರ ಮತ್ತು ರಸಗಳ ಉತ್ಪಾದನೆಯಲ್ಲಿ, ಸಾಕಷ್ಟು ಕಾರ್ಯಗಳನ್ನು ಸಾಧಿಸಿದ್ದಾನೆ. ಸೂರ್ಯಮಂಡಲ(ಭಾನುಗೋಲ)ಕ್ಕೇ ಏಣಿ ಹಾಕಲು ಬಯಸುತ್ತಿರುವ (ಎಳಸುವ) ಮನುಷ್ಯನು, ತಾನು ಮಾತ್ರ ತನ್ನ ವಿಚಾರ ಮತ್ತು ಬಾಂಧವ್ಯಗಳಲ್ಲಿ ಏಕೆ ಕೆಳಕ್ಕೆ ಇಳಿಯುತ್ತಿದ್ದಾನೆಯೋ ಅರ್ಥವಾಗುತ್ತಿಲ್ಲ.

Wednesday, December 14, 2011

ಏನೇನೊ ನಡೆದಿಹುದು ವಿಜ್ಞಾನ ಸಂಧಾನ (123)

ಏನೇನೊ ನಡೆದಿಹುದು ವಿಜ್ಞಾನ ಸಂಧಾನ |
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ||
ತಾನೊಡರ‍್ಚಿದ ಹೊನ್ನರಸವೆ ಕೊರಳ್ಗೆ |
ನೇಣಾಗಿಹುದು ನೋಡು - ಮರುಳ ಮುನಿಯ || (೧೨೩)

(ನಡೆದು+ಇಹುದು)(ಮುರಿದು+ಇಹುದು)(ತಾನ್+ಒಡರ‍್ಚಿದ)(ನೇಣ್+ಆಗಿಹುದು)

ವಿಜ್ಞಾನದ ಹೊಂದಾಣಿಕೆಯಲ್ಲಿ ಮನುಷ್ಯನು ಸಾಕಷ್ಟು ಸಾಧಿಸಿದ್ದಾನೆ. ಇನ್ನೂ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನ ಸಂಬಂಧಗಳು ಮಾತ್ರ ಮುರಿದುಹೋಗುತ್ತಿವೆ. ತಾನು ನಿರ್ಮಿಸಿದ (ಒಡರ‍್ಚಿದ) ಬಂಗಾರದ ರಸವೇ (ಇದು ಹೊನ್ನರಸ, ಬಂಗಾರದ ಸರ ಎಂದಿರಬಹುದೇ?) ಮನುಷ್ಯನ ಕುತ್ತಿಗೆಗೆ ನೇಣುಹಗ್ಗವಾಗಿರುವುದನ್ನು ನೋಡು.

Tuesday, December 13, 2011

ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು (122)

ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು |
ಮುಗಿಲು ಶೃಂಗೇರಿಗಭಿಷೇಕವನೆ ಮಾಳ್ಕುಂ ||
ದುಗುಡ ಸೊಗಗಳಿಗೊಂದು ನಂಟುಂಟು ನಯವುಂಟು |
ಮುಗಿಲಹುದೆ ಧಗೆಯಿರದೆ - ಮರುಳ ಮುನಿಯ || (೧೨೨)

(ಬೇಸಿಗೆಯೊಳು+ಅಂದು)(ಶೃಂಗೇರಿಗೆ+ಅಭಿಷೇಕವನೆ)(ಸೊಗಗಳಿಗೆ+ಒಂದು)(ಮುಗಿಲು+ಅಹುದೆ)

ಬೇಸಿಗೆಯ ಬಿಸಿಲಿನ ಝಳದಿಂದ ಉತ್ತರದ ದೆಹಲಿಯು ಬಾಡಿಹೋಗಿರುವಾಗ, ಮೋಡಗಳು ದಕ್ಷಿಣದ ಶೃಂಗೇರಿಗೆ ಅಭಿಷೇಕವನ್ನು ಮಾಡುತ್ತವೆ (ಮಾಳ್ಕುಂ). ಈ ರೀತಿಯಾಗಿ ದುಃಖ (ದುಗುಡ) ಮತ್ತು ಸುಖ (ಸೊಗ)ಗಳಿಗೆ ಒಂದು ವಿಧವಾದ ಸಂಬಂಧ ಮತ್ತು ರೀತಿ ನೀತಿಗಳಿವೆ. ಬಿಸಿಲಿನ ತಾಪ ಮತ್ತು ಝಳಗಳಿರದೆ ಮೋಡವಾಗಲು ಸಾಧ್ಯವಿಲ್ಲ.

Monday, December 12, 2011

ಭೇದ್ಯವಲ್ಲದ ನಾಭಿ ನೇಮಿಗಳು ಚಕ್ರಕ್ಕೆ (121)

ಭೇದ್ಯವಲ್ಲದ ನಾಭಿ ನೇಮಿಗಳು ಚಕ್ರಕ್ಕೆ |
ಮಧ್ಯದರಗಳು ಮಾತ್ರ ತಾಂ ಬೇರೆ ಬೇರೆ ||
ಎದ್ದು ಕಾಣುವುವಂತು ಜೀವಿಗಳು ಜಗದಿ ತ-|
ಮ್ಮಾದ್ಯಂತಗಳ ಮರೆತು- ಮರುಳ ಮುನಿಯ || (೧೨೧)

(ಭೇದ್ಯ+ಅಲ್ಲದ)(ಮಧ್ಯದ+ಅರಗಳು)(ಕಾಣುವುವು+ಅಂತು)(ತಮ್ಮ+ಆದಿ+ಅಂತಗಳ)

ಒಡೆಯಲಿಕ್ಕೆ ಸಾಧ್ಯವಾಗದಂತಹ ಬಂಡಿಯ ಗಾಲಿಗಳ ನಡುವೆ ಗುಂಬ (ನಾಭಿ) ಮತ್ತು ಅದರ ಸುತ್ತುಪಟ್ಟಿಗಳು (ನೇಮಿ). ಆದರೆ ಅವುಗಳ ಮಧ್ಯದಲ್ಲಿರುವ ಅರೆಕಾಲುಗಳು(ಅರೆ) ಮಾತ್ರ ಬೇರೆಬೇರೆಯಾಗಿರುತ್ತವೆ. ಇದೇ ರೀತಿಯಾಗಿ ಪ್ರಪಂಚದಲ್ಲಿ ಜೀವಿಗಳೂ ಸಹ ತಮ್ಮ ಮೂಲ (ಆದಿ) ಮತ್ತು ಜೊನೆ(ಅಂತ)ಗಳನ್ನು ಮರೆತು ತಾವೇ ಬೇರೆ ಬೇರೆಯಾಗಿ ಎದ್ದು ಕಾಣುತ್ತವೆ ಮತ್ತು ಮೆರೆಯುತ್ತವೆ.

Friday, December 9, 2011

ಪುನರುಕ್ತಿ ಬಾರದೆಂದು ಪ್ರಕೃತಿ ಕಂಠದಿಂ (120)

ಪುನರುಕ್ತಿ ಬಾರದೆಂದುಂ ಪ್ರಕೃತಿ ಕಂಠದಿಂ  |
ದಿನದಂತೆ ದಿನವಿರದದೊರ‍್ವನಿನನಿರೆಯುಂ ||
ಇನನೆ ತಾಂ ಕ್ಷಣದಿಂ ಮರುಕ್ಷಣಕೆ ಸವೆಯುವನು |
ಅನಿತರತೆ ಮೇಲ್ತೋರ‍್ಕೆ - ಮರುಳ ಮುನಿಯ || (೧೨೦)

(ದಿನ+ಇರದು+ಅದು+ಒರ‍್ವನ್+ಇನನ್+ಇರೆಯುಂ)

ಪ್ರಕೃತಿಯ ಕೊರಳಿನಿಂದ ಎಂದೆಂದಿಗೂ ಅದೇ ಮಾತು ಬರಲಾರದು. ಸೂರ್ಯ(ಇನ)ನೊಬ್ಬನೆ ಆದರೂ ಒಂದು ದಿನದಂತೆ ಇನ್ನೊಂದು ದಿನವಿರುವುದಿಲ್ಲ. ಸೂರ್ಯನೂ ಸಹ ಕ್ಷಣದಿಂದ ಕ್ಷಣಕ್ಕೂ ಕ್ಷೀಣಿಸುತ್ತಿರುತ್ತಾನೆ. ಅದು ಸವೆಯದಂತಿರುವುದು ಮೇಲ್ನೋಟಕ್ಕೆ ಮಾತ್ರ ಕಾಣುತ್ತದೆ.

Thursday, December 8, 2011

ತಾರಂಗ ನೃತ್ಯಗತಿ ವಿಶ್ವಜೀವನ ವಿವೃತಿ (119)

ತಾರಂಗ ನೃತ್ಯಗತಿ ವಿಶ್ವಜೀವನ ವಿತಿ |
ಆರೋಹವವರೋಹವೊಂದಾಗಲೊಂದು ||
ಸಾರೂಪ್ಯಸಮ ಜವತೆಯೆರಡು ತೆರೆಗಳ್ಗಿರದು |
ಬೇರೆತನದಿನೆ ಸೊಗಸು - ಮರುಳ ಮುನಿಯ || (೧೧೯)

(ಆರೋಹವು+ಅವರೋಹವು+ಒಂದಾಗಲೊಂದು)(ತೆರೆಗಳ್ಗೆ+ಇರದು)

ಈ ಪ್ರಪಂಚದ ವಿವರಣೆ(ವಿವೃತಿ) ತೆರೆಗಳ (ತಾರಂಗ) ಕುಣಿತದ ನಡೆಯಂತಿದೆ. ಏರುವುದು (ಆರೋಹ) ಮತ್ತು ಇಳಿಯುವುದು (ಅವರೋಹ), ಇವೆರಡೂ ಒಂದೇ ಆದರೂ, ಒಂದೇ ಸಮನಾದ ಆಕಾರ (ಸಾರೂಪ) ಮತ್ತು ಒಂದೇ ವೇಗ (ಸಮ ಜವತೆ) ಎರಡು ಅಲೆಗಳಿಗಿರಲು ಸಾಧ್ಯವಿಲ್ಲ. ಈ ರೀತಿ ಬೇರೆ ಬೇರೆಯಾಗಿರುವ ವಿವಿಧತೆಯಲ್ಲಿಯೇ ನಾವು ಚೆಲುವು ಮತ್ತು ಸುಖವನ್ನು ಕಾಣುತ್ತೇವೆ.

Wednesday, December 7, 2011

ನರಕುಲದಿ, ಕಿಂಪುರುಷರರ್ಧ ಕಿನ್ನರರರ್ಧ (118)


ನರಕುಲದಿ, ಕಿಂಪುರುಷರರ್ಧ ಕಿನ್ನರರರ್ಧ |
ಪರಿರಂಭವಶ್ವತನುಗೆಂತು ನರಮುಖದಿ? ||
ತುರಗ ಮುಖಕೆಂತು ಚುಂಬನ ಪುರುಷತನುವಿರಲ್ |
ಕರುಬೆ ಪಾಡಿರ‍್ವರಿಗೆ - ಮರುಳ ಮುನಿಯ || (೧೧೮)

(ಕಿಂಪುರುಷರ್+ಅರ್ಧ)(ಕಿನ್ನರರ್+ಅರ್ಧ)(ಪರಿರಂಭವು+ಅಶ್ವತನುಗೆ+ಎಂತು)
(ಮುಖಕೆ+ಎಂತು)(ಪುರುಷತನು+ಇರಲ್)(ಪಾಡು+ಇರ‍್ವರಿಗೆ)

ಮನುಷ್ಯ ವಂಶದಲ್ಲಿ ಅರ್ಧದಷ್ಟು ಮನುಷ್ಯರು ಕುದುರೆಯ ಮುಖವನ್ನು ಮತ್ತು ಮನುಷ್ಯ ದೇಹವನ್ನೂ ಹೊಂದಿರುವರಾದರೆ(ಕಿಂಪುರುಷ), ಇನ್ನರ್ಧದಷ್ಟು ಮನುಷ್ಯರು, ಮನುಷ್ಯರ ಮುಖವನ್ನೂ ಮತ್ತೂ ಕುದುರೆಯ ದೇಹವನ್ನು (ಕಿನ್ನರ) ಹೊಂದಿರುತ್ತಾರೆ. ಕುದುರೆಯ ದೇಹವು ಮನುಷ್ಯನ ಮುಖವನ್ನು ಹೇಗೆ ಆಲಂಗಿಸಲು ಶಕ್ಯ (ಪರಿರಂಭ)? ಕುದುರೆ(ತುರುಗ)ಯ ಮುಖವಿರುವವನು ಮನುಷ್ಯನ ದೇಹ(ತನು)ವಿರುವವನನ್ನು ಹೇಗೆ ಚುಂಬಿಸಲಾದೀತು? ಇಬ್ಬರೂ ಹೊಟ್ಟೆಕಿಚ್ಚಿನ (ಕರುಬೆ) ಸ್ಥಿತಿಯಲ್ಲೇ ಇರುತ್ತಾರೆ.

Tuesday, December 6, 2011

ಮೆಣಸು ಹುಣಿಸೆಗಳ ಸವಿಗಳು ಬೇರೆಯಿಹುದಿರಲಿ (117)


ಮೆಣಸು ಹುಣಿಸೆಗಳ ಸವಿಗಳು ಬೇರೆಯಿಹುದಿರಲಿ |
ಹುಣಿಸೆಯಿಂ ನಿಂಬೆ ಮಾವುಗಳ ಹುಳಿ ಬೇರೆ ||
ಮನುಜನುಳಿದ ಪ್ರಾಣಿಯಿಂ ಬೇರೆ ತಾಂ ಬೇರೆ |
ಗುಣದೊಳೋರೊರ‍್ವನುಂ - ಮರುಳ ಮುನಿಯ || (೧೧೭)

(ಬೇರೆ+ಇಹುದು+ಇರಲಿ)(ಮನುಜನ್+ಉಳಿದ)(ಗುಣದ+ಒಳ್+ಓರೊರ‍್ವನುಂ)

ಮೆಣಸು, ಹುಣಿಸೆಹಣ್ಣು ಇತ್ಯಾದಿ ವಸ್ತುಗಳ ರುಚಿಯು ಬೇರೆ ಬೇರೆಯಾಗಿರುತ್ತವೆ. ಅದು ಹಾಗೇ ಇರಲಿ ಮತ್ತು ಅವು ಹಾಗಿದ್ದರೇ ಚೆನ್ನವೂ ಹೌದು. ಆದರೆ ಹುಳಿಯು ಒಂದೇ ಆದರೂ ಹುಣಿಸೆಹಣ್ಣು, ನಿಂಬೆಹಣ್ಣು ಮತ್ತು ಮಾವಿನಕಾಯಿಗಳ ಹುಳಿಯ ರುಚಿಗಳು ಬೇರೆ ಬೇರೆಯಾಗಿರುತ್ತವೆ. ಹಾಗೆಯೇ ಈ ಮನುಷ್ಯನೂ ಸಹ ಪ್ರಪಂಚದಲ್ಲಿ ಒಂದು ಜೀವಿಯಾದರೂ ಇವನು ಇತರ ಪ್ರಾಣಿಗಳಿಂದ ಬೇರೆಯಾಗಿ ಕಾಣಿಸಿಕೊಳ್ಳುತ್ತಾನೆ. ಅದೂ ಅಲ್ಲದೆ ಬೇರೆ ಬೇರೆ ಹುಳಿಗಳ ರುಚಿಯಂತೆ ಒಬ್ಬೊಬ್ಬ ಮನುಷ್ಯನೂ ಬೇರೆ ಬೇರೆ ಸ್ವಭಾವಗಳನ್ನು ಹೊಂದಿರುತ್ತಾನೆ.

Monday, December 5, 2011

ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ (116)


ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ |
ಹಸಿವ ತೀರಿಪ್ಪುದಾರತೆಯಿಲ್ಲ ಜಗದಿ ||
ವಿಷಮವಿರದೊಡೆ ಧಾತುಗಳ್ ಜಗದಿ ಸೃಷ್ಟಿಯಾ |
ಕಸಬು ಸಾಗುವುದೆಂತೊ - ಮರುಳ ಮುನಿಯ || (೧೧೬)

(ಕೆರಳಿಪ+ಅನಿತು+ಉಂಟು)(ತೀರಿಪ್ಪ+ಉದಾರತೆಯಿಲ್ಲ)(ವಿಷಮ+ಇರದೊಡೆ)

ಪ್ರಪಂಚದಲ್ಲಿರುವ ಬಗೆಬಗೆಯಾದ ರುಚಿಗಳು ನಿನ್ನ ನಾಲಿಗೆಯನ್ನು ಕೆರಳಿಸಿದರೂ, ನಿನ್ನ ಹಸಿವನ್ನು ಪರಿಹರಿಸುವಂತಹ ಉದಾರತೆ ಈ ಜಗತ್ತಿಗಿಲ್ಲ. ಅದನ್ನು ನೀನೇ ಪೂರೈಸಿಕೊಳ್ಳಬೇಕು. ಪ್ರಪಂಚದಲ್ಲಿ ಸೃಷ್ಟಿಸಲ್ಪಟ್ಟಿರುವ ಮೂಲವಸ್ತುಗಳೆಲ್ಲವೂ ಅಸಮವಾಗಿರದಿದ್ದಲ್ಲಿ, ಎಂದರೆ ಎಲ್ಲವೂ ಸಮವಾಗಿದ್ದರೆ ಬ್ರಹ್ಮಸೃಷ್ಟಿಯ ಜಗತ್ತಿನಲ್ಲಿ ಯಾವ ವಿಧವಾದ ಕೆಲಸಗಳೂ ಸಾಧ್ಯವಿಲ್ಲ.

Friday, December 2, 2011

ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ (115)


ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ |
ಧೀವಪುವಿಕಾಸದಲಿ ಗುಣವೃತ್ತಿಗಳಲಿ ||
ಜೀವಧರ್ಮದಲಿ ನಾನಾತ್ವವಾತ್ಮಧ್ಯಾನ |
ಕೈವಲ್ಯದಲಿ ಸಾಮ್ಯ - ಮರುಳ ಮುನಿಯ || (೧೧೫)

(ಲೋಕ+ಐಕ್ಯದಿಂ)(ನಾನಾತ್ವ+ಆತ್ಮಧ್ಯಾನ)

ವಿವಿಧತೆಯಿಂದ ಜಗತ್ತು. ಐಕ್ಯದಿಂದ ನಿರ್ಲೋಕ. ಬುದ್ಧಿಶಕ್ತಿ (ಧೀ) ಮತ್ತು ದೇಹ (ವಪು)ಗಳ ಅರಳುವಿಕೆ, ಸ್ವಭಾವ ಮತ್ತು ಉದ್ಯೋಗದಲ್ಲಿ, ಜೀವನವನ್ನು ನಡೆಸುವ ನ್ಯಾಯ, ನೀತಿಗಳಲ್ಲಿ ವಿಧವಿಧವಾದ ಆಕಾರಗಳಲ್ಲಿರುವ ಆತ್ಮದ ಬಗ್ಗೆ ಚಿಂತಿಸುವುದು. ಇವೆಲ್ಲವೂ ಮೋಕ್ಷ ಗಳಿಸುವಲ್ಲಿ ಸಮಾನ ಧರ್ಮದವೇ ಆಗಿರುತ್ತದೆ.

Thursday, December 1, 2011

ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು (114)


ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು |
ಇವನ ಕಣ್ಗವನಿರವುನೋಟಗಳು ಬೆಪ್ಪು ||
ಅವನವನಿಗವನವನ ಹುಚ್ಚಾಟದಲಿ ನಚ್ಚು |
ಶಿವನಿಗೆಲ್ಲವು ಮೆಚ್ಚು - ಮರುಳ ಮುನಿಯ || (೧೧೪)

(ಕಣ್ಗೆ+ಇವನ)(ಬಾಳ್+ಕುಣಿದಾಟಗಳು)(ಕಣ್ಗೆ+ಅವನ+ಇರವು+ನೋಟಗಳು)(ಅವನವನಿಗೆ+ಅವನವನ)

ಒಬ್ಬನ ಕಣ್ಣುಗಳಿಗೆ ಇನ್ನೊಬ್ಬನ ಜೀವನ ಮತ್ತು ಹಾರಾಟಗಳು ತಪ್ಪಾಗಿ ಕಾಣುತ್ತವೆ. ಇನ್ನೊಬ್ಬನ ಕಣ್ಣುಗಳಿಗಾದರೋ ಇವನ ಸ್ಥಿತಿ (ಇರುವು) ಮತ್ತು ಪ್ರದರ್ಶನಗಳು ತಿಳಿಗೇಡಿತನ ಮತ್ತು ದಿಗ್ಭ್ರಮೆಗಳಾಗಿ ಕಾಣುತ್ತವೆ. ಅವರವರಿಗೆ ಅವರವರ ಮನಬಂದಂತೆ ನಡೆಯುವ ಪ್ರವೃತ್ತಿಗಳಲ್ಲಿ ಅಪಾರ ನಂಬಿಕೆ (ನಚ್ಚು). ತಾನು ಮಾಡುತ್ತಿರುವುದೇ ಸರಿ ಎಂಬ ವಿಶ್ವಾಸ. ಆದರೆ ಪರಮಾತ್ಮನಿಗಾದರೋ ಇವರೆಲ್ಲರ ಭಾವನೆ ಮತ್ತು ವರ್ತನೆಗಳಲ್ಲಿ ಸಮ್ಮತಿ ಮತ್ತು ಸಂತೋಷವುಂಟು.

Tuesday, November 29, 2011

ತೇಲಾಡುತಿಹುದು ಗಾಳಿಯ ಪಟದವೊಲು ಲೋಕ (113)

ತೇಲಾಡುತಿಹುದು ಗಾಳಿಯ ಪಟದವೊಲು ಲೋಕ |
ಕಾಲವದಕಾಕಾಶ ನೋಳ್ಪಮತಿಯೆ ಧರೆ ||
ನೂಲು ಕಾಯಕ, ನಿಯತಿ ಗಾಳಿ, ಮಾನಸ ವಿಕೃತಿ |
ಲೀಲೆ, ಶಿವಸಂತೋಷ - ಮರುಳ ಮುನಿಯ || (೧೧೩)

(ತೇಲಾಡುತ+ಇಹುದು)(ಕಾಲ+ಅದಕೆ+ಆಕಾಶ)

ಗಾಳಿಪಟದಂತೆ ಜಗತ್ತು ಹಾರಾಡುತ್ತಾ ಇದೆ. ಆಕಾಶವೇ ಅದಕ್ಕೆ ಸಮಯ. ನೋಡುತ್ತಿರುವ (ನೋಳ್ಪ) ಬುದ್ಧಿಶಕ್ತಿಯೇ ಭೂಮಿ (ಧರೆ). ಆ ಗಾಳಿಪಟವನ್ನು ಹಿಡಿದಿರುವ ದಾರವೇ ದುಡಿಮೆ (ಕಾಯಕ). ಪ್ರಕೃತಿಯಲ್ಲಿರುವ ಗಾಳಿಯೇ ವಿಧಿ, ದೈವ, ನಿಯಮ ಮತ್ತು ಅದೃಷ್ಟ. ಏಕೆಂದರೆ ಗಾಳಿ ಹೊಡೆದುಕೊಂಡ ಕಡೆಯೇ ಗಾಳಿಪಟ ಹೋಗಬೇಕು. ಅದು ಒಂದು ಕಟ್ಟುಪಾಡಿಗೆ ಒಳಪಟ್ಟದ್ದು. ಮನುಷ್ಯನ ಮನಸ್ಸು ಚಂಚಲವಾಗಿದ್ದು ಇದನ್ನು ಬದಲಾಯಿಸುತ್ತದೆ. ಇವೆಲ್ಲವೂ ಪರಮಾತ್ಮನ ಆನಂದಕ್ಕಾಗಿ ನಡೆಯುವ ಗಾಳಿಪಟದಾಟವಾಗಿದೆ.

Monday, November 28, 2011

ಲೀಲೆಯಿಂ ಪಾರಾಗು ಲೀಲೆಯಿಂ ಮೇಲಾಗು (112)

ಲೀಲೆಯಿಂ ಪಾರಾಗು ಲೀಲೆಯಿಂ ಮೇಲಾಗು |
ಲೀಲೆಯೊಳಗೋಲಾಡು ಲೀಲೆಯಂ ನೋಡು ||
ಲೀಲೆಯೊಳಚಾಲಕನು ಪಾಲಕನು ನೀನಾಗಿ |
ಮೂಲೋಕದಾನಂದಿ - ಮರುಳ ಮುನಿಯ || (೧೧೨)

(ಪಾರ್+ಆಗು)(ಮೇಲ್+ಆಗು)(ಲೀಲೆಯೊಳಗೆ+ಓಲಾಡು)(ಲೀಲೆಯ+ಒಳಚಾಲಕನು)(ನೀನ್+ಆಗಿ)(ಮೂಲೋಕದ+ಆನಂದಿ)

ಈ ಆಟದಿಂದ ತಪ್ಪಿಸಿಕೊಂಡು ಪಾರಾಗು, ಈ ಆಟದಿಂದ ಇನ್ನೂ ಮೇಲುಗಡೆಗೆ ಹೋಗು, ಈ ಆಟದಲ್ಲಿ ಸಂತೋಷದಿಂದ ಪಾಲುಗೊಳ್ಳು. ಈ ಆಟವನ್ನು ವೀಕ್ಷಿಸು. ಈ ಆಟವನ್ನು ನಡೆಯಿಸುವನಾಗಿ ಮತ್ತು ಅದರ ರಕ್ಷಕ(ಪಾಲಕ)ನೂ ಆಗಿ ಮೂರೂ (ಮೂ) ಲೋಕಗಳಲ್ಲೂ ಸಂತೋಷಪಟ್ಟು ಸುಖಿಸುವಂತವನಾಗು.

Friday, November 25, 2011

ಚೈತನ್ಯ ಲೀಲೆಯೊಳಗೇನುಂಟದೇನಿಲ್ಲ (111)

ಚೈತನ್ಯ ಲೀಲೆಯೊಳಗೇನುಂಟದೇನಿಲ್ಲ |
ಜ್ಞಾತಮಜ್ಞಾತಂಗಳೂಹ್ಯಮದನೂಹ್ಯಂ ||
ದ್ವೈತಮದ್ವೈತಂ ವಿಶಿಷ್ಟಾದ್ವೈತ ಭೇದಂಗ-|
ಳಾತನೊಳಗೈಕ್ಯವೆಲೊ - ಮರುಳ ಮುನಿಯ || (೧೧೧)

(ಲೀಲೆಯೊಳಗೆ+ಏನುಂಟು+ಅದೇನಿಲ್ಲ)(ಜ್ಞಾತಂ+ಅಜ್ಞಾತಂಗಳ್+ಊಹ್ಯಂ+ಅದು+ಅನೂಹ್ಯಂ)(ದ್ವೈತಂ+ಅದ್ವೈತಂ)(ಭೇದಂಗಳ್+ಆತನೊಳಗೆ+ಐಕ್ಯವೆಲೊ)

ಈ ಪರಮಾತ್ಮನ ಚೇತನದ ಆಟಗಳಲ್ಲಿ ಏನಿದೆ ಮತ್ತು ಏನಿಲ್ಲ? ಅದರಲ್ಲಿ ಎಲ್ಲವೂ ಇವೆ. ತಿಳಿದಿರುವಂತಹು (ಜ್ಞಾತ) ತಿಳಿಯದಿರುವಂತಹುವು (ಅಜ್ಞಾತ). ಊಹೆಗೆ ದೊರಕುವಂತಹವು (ಊಹ್ಯಂ), ಊಹಿಸಲಸಾಧ್ಯವಾದಂತಹವು (ಅನೂಹ್ಯಂ). ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತಗಳ ವ್ಯತ್ಯಾಸಗಳೆಲ್ಲವೂ ಪರಮಾತ್ಮನಲ್ಲಿ ಸೇರಿ ಒಂದಾಗಿಹೋಗಿವೆ.

Thursday, November 24, 2011

ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು (110)

ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು |
ಮೂಲಕರ್ತನ ಲೀಲೆ ಜೀವಿಗಳ ಲೀಲೆ ||
ಗೋಳುಗುದ್ದಾಟಗಳ ಬೆರೆತಪ್ಪ ವಿಧಿಲೀಲೆ |
ಕೋಲಾಹಲದ ಲೀಲೆ - ಮರುಳ ಮುನಿಯ || (೧೧೦)

ಇದು ಕೇವಲ ಒಂದು ವಿನೋದವಾದ ಆಟ. ಎಲ್ಲೆಲ್ಲಿಯೂ ಎಲ್ಲಾ ಕಡೆಗಳಲ್ಲಿಯೂ (ಸರ್ವತೋ) ಇರುವ ಆಟವಿದು. ಇದು ಆ ಪರಮಾತ್ಮನ ಆಟ. ಇಲ್ಲಿರುವ ಜೀವಿಗಳ ಆಟ. ದುಃಖ ಮತ್ತು ಕಲಹಗಳು ಬೆರೆತಿರುವ ವಿಧಿಯು ಆಡುವ ಆಟ. ಗಲಭೆ ಮತ್ತು ಗಲಾಟೆಗಳು (ಕೋಲಾಹಲ) ಕೂಡಿಕೊಂಡಿರುವ ಆಟ.

Wednesday, November 23, 2011

ಜಗವೆಲ್ಲ ಲೀಲೆ ಶಿವಲೀಲೆ ಶಾಶ್ವತ ಲೀಲೆ (109)


ಜಗವೆಲ್ಲ ಲೀಲೆ ಶಿವಲೀಲೆ ಶಾಶ್ವತ ಲೀಲೆ |
ನಗುವಳುವು ಸೆಣಸು ಹುಚ್ಚಾಟವದು ಲೀಲೆ ||
ಹಗುರವನು ಹೊರೆಮಾಡಿ ತಿಣುಕಾಡುವುದು ಲೀಲೆ |
ರಗಳೆಯೇ ಲೀಲೆಯೆಲೊ - ಮರುಳ ಮುನಿಯ || (೧೦೯)

(ಜಗ+ಎಲ್ಲ)(ನಗು+ಅಳುವು)

ಈ ಜಗತ್ತೆಲ್ಲವೂ ಒಂದು ವಿನೋದವಾದ ಆಟ. ಅದು ಪರಮಾತ್ಮನ ಆಟ ಮತ್ತು ಯಾವಾಗಲೂ ಇರತಕ್ಕಂತಹ ಆಟ. ಇದು ನಗು, ಅಳು, ಹೋರಾಟ(ಸೆಣಸು) ಹುಚ್ಚಾಟ ಎಲ್ಲವನ್ನು ಕೂಡಿಕೊಂಡಿರುವ ಆಟ. ಭಾರವಾಗಿಲ್ಲದಿರುವುದನ್ನು ಭಾರವಾಗಿಸಿ ಒದ್ದಾಡುವಂತೆ ಮಾಡುವ ಆಟಗಳಿವು. ಈ ಆಟಗಳೆಲ್ಲವೂ ತೊಂದರೆ ಮತ್ತು ಬಗೆಹರಿಯಲಾರದ ಸಮಸ್ಯೆಗಳೇ ಹೌದು.

Tuesday, November 22, 2011

ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು (108)


ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು |
ಪರಿದೇಳ್ದು ಬಿದ್ದೇಳ್ವುದೋ ತೆರೆಯ ಬಾಳು ||
ಉರುಳಿದಲೆ ಮತ್ತೇಳುವುದು ತೊರೆಯ ಜೀವಾಳ |
ಹೊರಳಾಟವೇ ಲೀಲೆ - ಮರುಳ ಮುನಿಯ || (೧೦೮)

(ಪರಿದು+ಏಳ್ದು)(ಬಿದ್ದು+ಏಳ್ವುದೋ)(ಉರುಳಿದ+ಅಲೆ)(ಮತ್ತೆ+ಏಳುವುದು)

ಪರಮಾತ್ಮ ಒಂದು ನದಿ ಇದ್ದ ಹಾಗೆ. ವಿಧ ವಿಧವಾದ ಲೋಕಗಳು ಆ ನದಿಯ ಅಲೆಗಳ ಸಾಲುಗಳು. ಆ ಅಲೆಗಳ ಜೀವನವು ಹರಿದು ಏಳುವುದೋ ಅಥವಾ ಬಿದ್ದು ಏಳುವುದೋ ಯಾವುದೋ ಒಂದು ರೀತಿಯಲ್ಲಿ ಆಗಿರುತ್ತದೆ. ಉರುಳಿದ ಅಲೆಯು ನದಿಯ ಸತ್ತ್ವದಿಂದ ಪುನಃ ಮೇಲಕ್ಕೇಳುತ್ತದೆ. ನದಿಯ ಹರಿವಿನ ಚೆಂದ ಅದರ ಅಲೆಗಳ ಈ ಏಳುಬೀಳುಗಳಿಂದಲೇ ಆಗಿದೆ. ಈ ರೀತಿಯಾಗಿ ಲೋಕವು ಹೊರಳಾಡುತ್ತಿರುವುದೇ ಒಂದು ವಿನೋದವಾದ ಆಟವಾಗಿದೆ.

Monday, November 21, 2011

ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು (107)


ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು |
ವ್ಯತ್ಯಸಿತ ಲೋಕ ಗತಿಯವರವರ ನಡುವೆ ||
ಉತ್ತಮತೆಯನು (ಸೊಟ್ಟ) ಸೃಷ್ಟಿಯೊಳಗರಸಿಸುವ |
ಕೃತ್ರಿಮವೆ ಶಿವಲೀಲೆ - ಮರುಳ ಮುನಿಯ || (೧೦೭)

(ಗತಿ+ಅವರವರ)(ಸೃಷ್ಟಿಯೊಳಗೆ+ಅರಸಿಸುವ)

ಬ್ರಹ್ಮ (ಪರಮೇಷ್ಠಿ) ಮತ್ತು ಮನುಷ್ಯರ ನಡುವೆ ಪ್ರತಿನಿತ್ಯವೂ ಸ್ಪರ್ಧೆ ನಡೆಯುತ್ತಿರುತ್ತದೆ. ಅವರುಗಳ ಮಧ್ಯದಲ್ಲಿ ಪಲ್ಲಟಗೊಂಡಿರುವ ಜಗತ್ತಿನ ವ್ಯವಹಾರ ಸಾಗುತ್ತಿದೆ. ಸೊಟ್ಟಗಿರುವ ಈ ಸೃಷ್ಟಿಯಲ್ಲಿ ಶ್ರೇಷ್ಠವಾಗಿರುವುದನ್ನು ಹುಡುಕಿಸುವ (ಅರಸಿಸುವ) ಕಪಟ(ಕೃತ್ರಿಮ)ವೊ ಪರಮಾತ್ಮನ ಆಟ.

Friday, November 18, 2011

ಸುವಿಲಾಸ ಮೋಹಗಳ ಕುವಿಕಾರ ಭಾವಗಳ (106)


ಸುವಿಲಾಸ ಮೋಹಗಳ ಕುವಿಕಾರ ಭಾವಗಳ |
ಕವಿತೆ ಸಂಗೀತಗಳ ಕೋಪತಾಪಗಳ ||
ಅವಿವೇಕ ಘೋಷಗಳ ಸುವಿಚಾರ ಮೌನಗಳ |
ಹವಣೆಲ್ಲ ಶಿವಲೀಲೆ - ಮರುಳ ಮುನಿಯ || (೧೦೬)

ಸೊಗಸೆನಿಸುವ ಸೆಳೆತಗಳ, ದುಷ್ಟಭಾವದ ವಿಚಾರಗಳ, ಸುಂದರ ಕವಿತೆಗಳ, ಸುಶ್ರಾವ್ಯ ಸಂಗೀತದ, ಉಗ್ರ ಕೋಪದ, ಅಸಹನೀಯ ತಾಪದ ಮತ್ತು ಮೂರ್ಖತನದ ಹೇಳಿಕೆಗಳ ಎಲ್ಲ ವಿದ್ಯಮಾನಗಳು ಭಗವಂತನ ಲೀಲಾ ವಿನೋದಗಳಾಗಿವೆ.

Thursday, November 17, 2011

ಭುವನ ಜೀವನವೆಲ್ಲ ಶಿವನ ಲೀಲಾರಂಗ (105)


ಭುವನ ಜೀವನವೆಲ್ಲ ಶಿವನ ಲೀಲಾರಂಗ |
ಅವನು ಶಿವನಿವನು ಶಿವ ಶಿವ ನೀನು ನಾನು ||
ತವಕಪಡಿಸುವ ನಮ್ಮ ಕೆರಳಿಸುವ ಕುಣಿಯಿಸುವ |
ಭವವೆಲ್ಲ ಶಿವಲೀಲೆ - ಮರುಳ ಮುನಿಯ || (೧೦೫)

(ಜೀವನ+ಎಲ್ಲ)(ಶಿವನ್+ಇವನು)(ಭವ+ಎಲ್ಲ)

ಈ ಜಗತ್ತಿ(ಭುವನ)ನ ಜೀವನವೆಲ್ಲವೂ ಪರಮಾತ್ಮನ ವಿಹಾರದ ಸ್ಥಳ. ಅವನೂ ಪರಮಾತ್ಮ ಇವನೂ ಪರಮಾತ್ಮ. ನಾನು, ನೀನುಗಳೆಲ್ಲರೂ ಪರಮಾತ್ಮನೇ ಅಹುದು. ನಮ್ಮಗಳನ್ನು ಉತ್ಸಾಹಗೊಳಿಸುವ, ಕನಲಿಸುವ ಮತ್ತು ಕುಣಿಯಿಸುವ ಪ್ರಾಪಂಚಿಕ ವ್ಯವಹಾರ(ಭವ)ಗಳೆಲ್ಲವೂ ಆ ಪರಮಾತ್ಮನ ಆಟವೇ ಸರಿ.

Wednesday, November 16, 2011

ಶಾಶ್ವತಾಕಾಶದಲಿ ನಶ್ವರದ ನಕ್ಷತ್ರ (104)


ಶಾಶ್ವತಾಕಾಶದಲಿ ನಶ್ವರದ ನಕ್ಷತ್ರ |
ವಿಶ್ವಮೂಲಂ ಸತ್ಯ ಬಾಹ್ಯದೊಳು ಮಿಥ್ಯೆ ||
ಈಶ್ವರನ ನಿಜಸಾಮ್ಯ ಮಾನುಷ್ಯ ವೈಷಮ್ಯ |
ವಿಶ್ವಸಿತ ಲೀಲೆಯಿದು - ಮರುಳ ಮುನಿಯ || (೧೦೪)

(ಶಾಶ್ವತ+ಆಕಾಶದಲಿ)

ಎಂದೆಂದಿಗೂ ಇರುವ ಆಕಾಶದಲ್ಲಿ ನಾಶವಾಗತಕ್ಕಂತಹ ನಕ್ಷತ್ರಗಳಿವೆ. ಜಗತ್ತಿನ ಆದಿ ಮತ್ತು ಹುಟ್ಟುಗಳು ನಿಜ, ಹೊರಜಗತ್ತು ಸುಳ್ಳು (ಮಿಥ್ಯೆ). ಅಂತೆಯೇ ಪರಮಾತ್ಮನ ಸ್ವಂತ ಹೋಲಿಕೆ(ಸಾಮ್ಯ)ಗಳನ್ನು ಮನುಷ್ಯ ಜೀವಿಗಳ ವ್ಯತ್ಯಾಸಗಳಲ್ಲಿ ನಾವು ಕಾಣಬಹುದು.

Tuesday, November 15, 2011

ಲೀಲೆಯೋ ಜಗವೆಲ್ಲ ಲೋಕನಾಟಕ ಲೀಲೆ (103)


ಲೀಲೆಯೋ ಜಗವೆಲ್ಲ ಲೋಕನಾಟಕ ಲೀಲೆ |
ಕಾಲವಶವೆಲ್ಲಮುಂ ಕಾಲಮಾರುತನ ||
ಏಳಿಸುತ ಬೀಳಿಸುತ ಮನುಜಮಾನಸಗಳಲಿ |
ಚಾಲಿಪಂ ತ್ರಿಗುಣಗಳ - ಮರುಳ ಮುನಿಯ || (೧೦೪)

(ಕಾಲವಶ+ಎಲ್ಲಮುಂ)

ಈ ಪ್ರಪಂಚದ ಆಟಗಳೆಲ್ಲವೂ ಒಂದು ವಿನೊದ ನಾಟಕ. ಜಗತ್ತಿನಲ್ಲಿರುವ ಎಲ್ಲವೂ ಆ ಕಾಲನಿಗೆ ಅಧೀನವಾದರೂ, ಕಾಲನು ಮಾರುತನನ್ನು ಏಳಿಸುತ ಮತ್ತು ಬೀಳಿಸುತ ಮನುಷ್ಯರ ಮನಸ್ಸುಗಳಲ್ಲಿ ಸತ್ತ್ವ, ರಜ, ತಮಗಳೆಂಬ ಮೂರೂ ಸ್ವಭಾವಗಳನ್ನು ನಿರ್ವಹಿಸುತ್ತಾನೆ.

Monday, November 14, 2011

ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ (102)


ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ |
ಅಲುಗುತ್ತಲಲೆಯಿರಲ್ ಕಡಲಿನ ಮಹತ್ತ್ವ ||
ಜಲಧಿ (ವೀತತ) ರಂಗಮಿರೆ ನೋಳ್ಪರಾರ್ (ಅದನು) |
ಚಲನೆಯೇ ಲೀಲೆಯೆಲೊ - ಮರುಳ ಮುನಿಯ || (೧೦೨)

(ತ್ರಿಗುಣಂ+ಇರೆ)(ಅಲುಗುತ್ತಲ್+ಅಲೆಯಿರಲ್)

ಚಿಂತೆ ಮತ್ತು ಗಾಬರಿಗಳನ್ನುಂಟುಮಾಡುವ, ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಸ್ವಭಾವಗಳಿದ್ದರೆ ಈ ಪ್ರಪಂಚದ ಜೀವನದ ಆಟ ಆಡಲು ಚೆನ್ನಾಗಿರುತ್ತದೆ. ಸಮುದ್ರದ ತೆರೆಗಳು ಅಲುಗಾಡುತ್ತಿದ್ದರೆ ಮಾತ್ರ ಅದರ ಹಿರಿಮೆ. ಅಲೆಗಳಿಲ್ಲದಿದ್ದರೆ (ವೀತತರಂಗ) ಸಮುದ್ರವನ್ನು ನೋಡಲು ಯಾರೂ ಬರಲಾರರು. ಈ ರೀತಿಯಾಗಿ ಸದಾಕಾಲವೂ ಕ್ರಿಯಾಶಾಲಿತ್ವದಿಂದ ಕೂಡಿರುವುದೇ ಈ ಪ್ರಪಂಚದ ಆಟದ ಆಕರ್ಷಣೆಯಾಗಿದೆ.

Friday, November 11, 2011

ಜೀವಕಂ ಜೀವಕಂ ಸ್ನೇಹದಿನೊ ವೈರದಿನೊ (101)


ಜೀವಕಂ ಜೀವಕಂ ಸ್ನೇಹದಿನೊ ವೈರದಿನೊ |
ಭಾವರಜ್ಜುವ ಕಟ್ಟಿ ಜಾಲಗಳ ನೆಯ್ದು ||
ನೋವಿಂದೆ ಸಂತಸದಿ ಬಾಯ್ಬಿಡಿಸಿ ನೋಡುವಾ |
ದೈವದ ಮಹಾಲೀಲೆ - ಮರುಳ ಮುನಿಯ || (೧೦೧)

ಒಂದು ಜೀವಕ್ಕೂ ಮತ್ತು ಇನ್ನೊಂದು ಜೀವಕ್ಕೂ ಸ್ನೇಹ ಅಥವಾ ವೈರತ್ವದಿಂದ, ನಾನಾ ಭಾವನೆಗಳೆಂಬ ಹಗ್ಗ(ರಜ್ಜು)ಗಳನ್ನು ಕಟ್ಟಿ, ಬಲೆ(ಜಾಲ)ಗಳನ್ನು ಹೆಣೆದು, ನೋವು ಅಥವಾ ಸಂತೋಷದಿಂದ ಅವರುಗಳ ಬಾಯಿಗಳನ್ನು ಬಿಡಿಸಿ ನೋಡುವುದು, ಈ ದೈವದ ಬಹು ದೊಡ್ಡ ವಿನೋದ ಮತ್ತು ಆಟ.

Thursday, November 10, 2011

ಲೀಲೆಯದು ಬರಿಲೀಲೆ ಬರಿಬನದ ಬರಿಯಾಟ (100)


ಲೀಲೆಯದು ಬರಿಲೀಲೆ ಬರಿಬನದ ಬರಿಯಾಟ |
ಸೋಲಿಲ್ಲ ಗೆಲವಿಲ್ಲ ಚಿಂತೆಯೇನಿಲ್ಲ ||
ಮೂಲಕರ್ತನ ನೈಜ ವೈಭವದ ವಿಸ್ತಾರ |
ಜಾಲಶಕ್ತಿವಿಲಾಸ - ಮರುಳ ಮುನಿಯ || (೧೦೦)

(ಲೀಲೆ+ಅದು)(ಬರಿ+ಆಟ)(ಸೋಲ್+ಇಲ್ಲ)(ಗೆಲವು+ಇಲ್ಲ)(ಚಿಂತೆ+ಏನ್+ಇಲ್ಲ)

ಇವುಗಳೆಲ್ಲವೂ ಕೇವಲ ವಿನೋದ, ಚೆಲ್ಲಾಟ ಮತ್ತು ಆಟ. ಕೇವಲ ವನದಲ್ಲಿ ಆಡುವ ಆಟಗಳಿವು. ಇದರಲ್ಲಿ ಸೋಲು ಮತ್ತು ಗೆಲವುಗಳಿಲ್ಲ. ಯಾವ ವಿಧವಾದ ಕಳವಳಕ್ಕೂ ಇಲ್ಲಿ ಅವಕಾಶವಿಲ್ಲ. ಇವುಗಳಿಗೆ ಹುಟ್ಟು ಮತ್ತು ಕಾರಣಕರ್ತನಾಗಿರುವನ ಸಹಜವಾದ ವೈಭವದ ಹರಡುವಿಕೆಗಳಿವು. ಅವನು ಹಬ್ಬಿಸಿರುವ ಜಾಲದಲ್ಲಿ ಅವನ ಶಕ್ತಿ ತೋರುವ ವಿಲಾಸಗಳಿವು.

Wednesday, November 9, 2011

ಅವನಿವನ ನೀನವನ ನಾನಿವನ ನೀನೆನ್ನ (99)


ಅವನಿವನ ನೀನವನ ನಾನಿವನ ನೀನೆನ್ನ |
ಸವರಿ ಮೈಮರೆಸುತಿರೆ ತಿವಿದುರುಬಿಸುತಿರೆ ||
ಅವಗುಂಠಿತನದೊರ‍್ವನೀಕ್ಷಿಸುತೆ ನಗುತಿಹನು |
ಶಿವಲೀಲೆ ನಮ್ಮ ಬಾಳ್ - ಮರುಳ ಮುನಿಯ || (೯೯)

(ಅವನ್+ಇವನ)(ನೀನ್+ಅವನ)(ನಾನ್+ಇವನ)(ನೀನ್+ಎನ್ನ)(ಮೈಮರೆಸುತ+ಇರೆ)
(ತಿವಿದು+ಉರುಬಿಸುತ+ಇರೆ)(ಅವಗುಂಠಿತನ್+ಅದು+ಒರ‍್ವನ್+ಈಕ್ಷಿಸುತೆ)

ಅವನು ಇವನನ್ನು, ನೀನು ಅವನನ್ನು, ನಾನು ಇವನನ್ನು, ನೀನು ನನ್ನ, ಮೈಸವರಿ ಮೈಮರೆಸಿ, ಚುಚ್ಚಿ(ತಿವಿದು) ಒಬ್ಬರ ಮೇಲೊಬ್ಬರು ಬೀಳುವಂತೆ ಮಾಡಿಸುತ್ತಿರಲು (ಉರಿಬಿಸುತಿರೆ), ಮುಸುಕು ಹಾಕಿಕೊಂಡು (ಅವಗುಂಠಿತ) ನಮ್ಮ ಕಣ್ಣುಗಳಿಗೆ ಕಾಣಿಸಿಕೊಳ್ಳದಿರುವನೊಬ್ಬನು, ಇವುಗಳನ್ನು ಕಂಡು (ಈಕ್ಷಿಸುತೆ) ನಗುತ್ತಾ ಆನಂದದಿಂದಿದ್ದಾನೆ. ನಮ್ಮ ಜೀವನವೆಲ್ಲವೂ ಪರಮಾತ್ಮನ ಆಟವೇ ಹೌದು.

Tuesday, November 8, 2011

ಜಗವೆಲ್ಲ ಶಿವಲೀಲೆ ಭಗವದರ್ಥದ ಲೀಲೆ (98)


ಜಗವೆಲ್ಲ ಶಿವಲೀಲೆ ಭಗವದರ್ಥದ ಲೀಲೆ |
ಖಗಲೀಲೆ ಮೃಗಲೀಲೆ ಕ್ರಿಮಿಕೀಟಲೀಲೆ ||
ನಗ ನದೀ ನದ ಲೀಲೆ ಮೇಲೆ ಮನುಜರಲೀಲೆ |
ಅಗಣಿತದ ಲೀಲೆಯದು - ಮರುಳ ಮುನಿಯ || (೯೮)

(ಭಗವತ್+ಅರ್ಥದ)

ಈ ಪ್ರಪಂಚವೆಲ್ಲವೂ ಆ ಪರಮಾತ್ಮನ ಆಟ. ಭಗವಂತನ ಲೀಲಾ ವಿನೋದ ದೃಷ್ಟಿಯ ಆಟಗಳಿವು. ಹಕ್ಕಿ(ಖಗ)ಗಳ ಆಟ, ಪ್ರಾಣಿಗಳ ಆಟ, ಕೀಟಗಳ ಆಟ, ಬೆಟ್ಟ (ನಗ), ಗಂಡು ನದಿ (ನದ) ಮತ್ತು ಹೆಣ್ಣು ನದಿಗಳ ಆಟಗಳು. ಇವುಗಳೆಲ್ಲವೂ ಅಲ್ಲದೆ ಅದು ಮನುಷ್ಯರ ಆಟ. ಲೆಕ್ಕಕ್ಕೆ ಸಿಗಲಾರದಷ್ಟು (ಅಗಣಿತ) ಆಟಗಳಿವು.

Friday, November 4, 2011

ಖೇಲನ ವ್ಯಾಪಾರವೀ ಜಗದ್ವಿಸ್ತಾರ (97)


ಖೇಲನ ವ್ಯಾಪಾರವೀ ಜಗದ್ವಿಸ್ತಾರ |
ಮೂಲಕಾರಣನಿದಕೆ ಪೂರ್ಣಸ್ವತಂತ್ರಂ ||
ಲೀಲೆಗೆಂದೀ ಚಿತ್ರಮೋಹವೈರಾದಿಗಳ |
ಚಾಲವಂ ರಚಿಸಿಹಂ - ಮರುಳ ಮುನಿಯ || (೯೭)

(ಜಗತ್+ವಿಸ್ತಾರ)(ಮೂಲಕಾರಣನ್+ಇದಕೆ)(ಲೀಲೆಗೆ+ಎಂದು+ಈ)

ಈ ಜಗತ್ತಿನ ವೈಶಾಲ್ಯ, ಆ ಪರಮಾತ್ಮನ ಆಟ(ಖೇಲನ)ಮಾಡುವ ವ್ಯವಹಾರ. ಇದಕ್ಕೆ ಹುಟ್ಟು ಮತ್ತು ಕಾರಣಗಳಾಗಿರುವ ಅವನು ಸಂಪೂರ್ಣವಾಗಿ ತನ್ನಿಚ್ಛೆ ಬಂದಂತೆ ನಡೆಯಬಲ್ಲನು. ತನ್ನ ಆಟಪಾಟಗಳಿಗೋಸ್ಕರ ಅವನು ಈ ಚಿತ್ರ, ಅಜ್ಞಾನ, ಅಕ್ಕರೆ, ಪ್ರೀತಿ, ದ್ವೇಷ ಮತ್ತು ಹಗೆತನಗಳ ಆಕರ್ಷಣೆಯ ಬಲೆ(ಜಾಲ)ಗಳನ್ನು ನಿರ್ಮಿಸಿದ್ದಾರೆ.

Thursday, November 3, 2011

ಮೂಲಸತ್ತ್ವ ಬ್ರಹ್ಮವೇಕ ಬಹುವಾ ವೇಷ (96)


ಮೂಲಸತ್ತ್ವ ಬ್ರಹ್ಮವೇಕ ಬಹುವಾ ವೇಷ |
ಕಾಲದೇಶಂಗಳಿಂ ಬ್ರಹ್ಮವಾತ್ಮವಹ ವೇಷ ||
ತಾಳಿ ದೇಹವನಾತ್ಮ ಜೀವನೆನಿಪುದು ವೇಷ |
ಲೀಲೆ ವೇಷವೋ ವಿಶ್ವ - ಮರುಳ ಮುನಿಯ || (೯೬)

(ಬ್ರಹ್ಮ+ಏಕ)(ಬಹು+ಆ)(ಬ್ರಹ್ಮ+ಆತ್ಮವಹ)(ದೇಹವನ್+ಆತ್ಮ)(ಜೀವನ್+ಎನಿಪುದು)

ಮೊತ್ತಮೊದಲಿನ ಸಾರ ಬ್ರಹ್ಮ. ಅದು ಒಂದೇ ಒಂದು. ಆದರೆ ಅದು ಬಹು ವೇಷಗಳನ್ನು ತಾಳಿದೆ. ಸಮಯ ಮತ್ತು ಸ್ಥಳಗಳಿಂದ ಬ್ರಹ್ಮವು ಆತ್ಮನೆಂಬ ವೇಷವನ್ನು ತಳೆದು, ಆತ್ಮವು ದೇಹವನ್ನು ಸೇರಿ ಜೀವವೆಂದೆನ್ನಿಸಿಕೊಳ್ಳುವ ವೇಷವನ್ನು ಪಡೆಯುತ್ತದೆ. ಈ ಪ್ರಪಂಚವೆಲ್ಲವೂ ಈ ವೇಷಗಳ ಆಟವೇ ಸರಿ.

Wednesday, November 2, 2011

ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ (95)


ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ |
ಇರದೆ ತೋರುವುದೆಂತು ತೋರದಿರವೆಂತು ? ||
ಪರತತ್ತ್ವ ಲೋಕಂಗಳೆರಡುಮೊಂದೇ ವಸ್ತು |
ಮರದ ಬೇರೆಲೆಯವೊಲು - ಮರುಳ ಮುನಿಯ || (೯೫)

(ಇರುವುದು+ಒಂದು+ಎರೆಡು+ಎನಿಸಿ)(ತೋರುವುದು+ಎಂತು)(ತೋರದೆ+ಇರವು+ಎಂತು)(ಲೋಕಂಗಳ್+ಎರಡುಂ+ಒಂದೇ)(ಬೇರ್+ಎಲೆಯ+ವೊಲು)

ಇರುವ ವಸ್ತು ಒಂದೇ ಒಂದಾದರೂ ಸಹ ಅದು ಜನಗಳ ಕಣ್ಣುಗಳಿಗೆ ಎರಡೆಂದೆನ್ನಿಸುವಂತೆ ಕಾಣಿಸಿಕೊಳ್ಳುತ್ತದೆ. ಆ ವಸ್ತು ಇರದಿದ್ದರೆ ಅದು ಹೇಗೆ ತಾನೆ ಕಾಣಿಸಿಕೊಳ್ಳಬಲ್ಲುದು ಅಥವಾ ಅದು ಇದ್ದರೆ ಕಾಣಿಸಿಕೊಳ್ಳದೆ ಇರಲು ಹೇಗೆ ಸಾಧ್ಯ? ಪರತತ್ತ್ವ ಮತ್ತು ಇಹಲೋಕಗಳೆರಡೂ ಒಂದೇ ವಸ್ತು. ಅದು ಮರದ ಬೇರು ಮತ್ತು ಎಲೆಗಳಂತೆ.

Tuesday, November 1, 2011

ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ (94)


ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ |
ದಿನದಿನದಿ ಗಿಡಗಿಡದಿ ಹೊಸಹೊಸತು ಚಿಗುರು ||
ಕ್ಷಣವಿಕ್ಷಣಮುಮಂತು ಪರಸತ್ತ್ವಮೆತ್ತಲುಂ |
ಜನುಮ ತಾಳುತ್ತಿಹುದು - ಮರುಳ ಮುನಿಯ || (೯೪)

(ಕ್ಷಣ+ವಿಕ್ಷಣಮುಂ+ಅಂತು)(ಪರಸತ್ತ್ವಂ+ಎತ್ತಲುಂ)

ಒಂದು ಕಾಡಿನ ಮಧ್ಯದಲ್ಲಿ ನಿಂತುಕೊಂಡು ನೋಡಿದರೆ, ದಿಕ್ಕು ದಿಕ್ಕುಗಳಲ್ಲೂ ಪ್ರತಿನಿತ್ಯವೂ ಹೊಸ ಹೊಸದಾದ ಚಿಗುರುಗಳು ಗಿಡಮರಗಳಲ್ಲಿ ಬಿಡುವುದನ್ನು ಕಾಣುತ್ತೀಯೆ. ಈ ರೀತಿಯಾಗಿ ಈ ಪ್ರಪಂಚದಲ್ಲಿ ಪ್ರತಿಕ್ಷಣವೂ ಮತ್ತು ಕ್ಷಣದ ಅಂಶ(ವಿಕ್ಷಣ)ಗಳಲ್ಲೂ ಪರಮಾತ್ಮನ ಸಾರವು ಎಲ್ಲೆಲ್ಲಿಯೂ ಜನುಮವೆತ್ತುತ್ತಿರುತ್ತದೆ.

Monday, October 31, 2011

ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ (93)

ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ-|
ಳಾಪಾತ ನಿಯತಂಗಳಾಳವರಿತವರಾರ್ ||
ಮಾಪನಾತೀತನಿತ್ಯಸ್ವೈರಸೂತ್ರದಿಂ |
ವ್ಯಾಪಿತಂ ಜಗವೆಲ್ಲ - ಮರುಳ ಮುನಿಯ || (೯೩)


(ಕ್ರಮಗಳ್+ಅಪಾತ)(ನಿಯತಂಗಳ+ಆಳವ+ಅರಿತವರಾರ್)(ಮಾಪನ+ಅತೀತನಿತ್ಯ+ಸ್ವೈರಸೂತ್ರದಿಂ)


ಜಗತ್ತಿನ ಚಕ್ರದ ಸುತ್ತುವಿಕೆಯ ಕ್ರಮಗಳ ಆಗುವಿಕೆ(ಆಘಾತ)ಯ ನಿಯಮ(ನಿಯತ)ಗಳ ಆಳವನ್ನು ತಿಳಿಯದವರು ಯಾರಾದರೂ ಇರುವರೇನು ? ಅಳತೆ(ಮಾಪನ)ಗೆ ಸಿಗದಿರುವ (ಅತೀತ) ಸದಾಕಾಲವೂ ಇರುವ ಸ್ವತಂತ್ರ (ಸ್ವೈರ) ನಿಯಮಗಳಿಂದ ಈ ಜಗತ್ತು ಹಬ್ಬಿಕೊಂಡಿದೆ (ವ್ಯಾಪಕಂ).

Monday, October 24, 2011

ನಾನೆನುವುದೊಂದೊ ಅಥವಾ ನೀನೆನುವುದೊಂದೊ (92)


ನಾನೆನುವುದೊಂದೊ ಅಥವಾ ನೀನೆನುವುದೊಂದೊ |
ನಾನು ನೀನುಗಳಿರದ ಅದು ಎನುವುದೊಂದೋ ||
ಏನೊ ಎಂತಾನುಮೊಂದೇ ಎಲ್ಲ; ಆ ಒಂದನ್ |
ಆನು ನೀನೇಗಳುಂ - ಮರುಳ ಮುನಿಯ || (೯೩)

(ನಾನ್+ಎನುವುದು+ಒಂದೊ)(ನೀನ್+ಎನುವುದು+ಒಂದೊ)(ಎಂತಾನುಂ+ಒಂದೇ)
(ನೀನ್+ಏಗಳುಂ)

ನಾನು ಎನ್ನುದುದು ಒಂದೋ ಅಥವಾ ನೀನು ಎನ್ನುವುದು ಒಂದೋ. ಇಲ್ಲ, ನಾನು ಮತ್ತು ನೀನು ಎವುಗಳೆರಡೂ ಇರದ ಇನ್ನೊಂದು ಎನ್ನುವುದೋ? ಇದು ಹೇಗಾದರೂ ಇರಲಿ ಅವುಗಳೆಲ್ಲವೂ ಒಂದೇ. ಅದನ್ನು ನೀನು ಎಂದೆಂದಿಗೂ (ಏಗಳುಂ) ಅವಲಂಬಿಸು (ಆನು).

Friday, October 21, 2011

ಶಿಲೆಯೊ ಮೃತ್ತಿಕೆಯೊ ಸೌಧವೊ ಕಾಲುಕಸ ಧೂಳೊ (91)


ಶಿಲೆಯೊ ಮೃತ್ತಿಕೆಯೊ ಸೌಧವೊ ಕಾಲುಕಸ ಧೂಳೊ |
ಬಳುಕು ಲತೆಯೋ ಮರನೊ ಒಣ ಸೌದೆ ತುಂಡೋ ||
ಲಲಿತ ಸುಂದರಿಯೊ ಸಾಧುವೋ ವೀರಸಾಹಸಿಯೊ |
ಚಲವೊ ಜಡವೋ (ಶಿವನೆ)- ಮರುಳ ಮುನಿಯ || (೯೧)

ಕಲ್ಲೋ(ಶಿಲೆ), ಮಣ್ಣೋ (ಮೃತ್ತಿಕೆ), ಒಂದು ಬೃಹತ್ ಸೌಧವೋ, ಕಾಲಿನ ಕಸದ ಧೂಳೋ, ಬಳುಕುವ ಬಳ್ಳಿಯೋ, ಮರವೋ, ಒಣಗಿದ ಸೌದೆಯ ತುಂಡೋ, ಮನೋಹರವಾದ ಸುಂದರಿಯೋ, ಸಾಧು ಸಂತನೋ, ವೀರ ಸಾಹಸಿಯೋ, ಚಲಿಸುವ ವಸ್ತುವೋ ಅಥವಾ ಜಡರೂಪಗಳೋ, ಯಾವುದೇ ಇರಲಿ ಇವುಗಳೆಲ್ಲವೂ ಪರಮಾತ್ಮನ ವಿವಿಧ ರೂಪಗಳಷ್ಟೆ.

Thursday, October 20, 2011

ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು (90)


ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು |
ಸಿಕ್ಕಿರ‍್ಪುದರೊಳವನ ಕಾಣದಿಹರೇಕೆ ? ||
ಲೆಕ್ಕಿಲ್ಲದ ವೊಡಲ ಪೊತ್ತನನು ಕಂಡುದರೊಳ್ |
ಪೊಕ್ಕು ನೋಡದರೇಕೆ? - ಮರುಳ ಮುನಿಯ || (೯೦)

(ಸಿಕ್ಕಿಲ್ಲ+ಅವನ್+ಎಮ್ಮ)(ಕಣ್ಣಿಗೆ+ಎಂಬವರು)(ಸಿಕ್ಕಿ+ಇರ‍್ಪುದರೊಳ್+ಅವನ)
(ಕಾಣದಿಹರ್+ಏಕೆ)(ಲೆಕ್ಕ+ಇಲ್ಲದ)(ಕಂಡು+ಅದರೊಳ್)(ನೋಡದರ್+ಅದೇಕೆ)

ಮರಮಾತ್ಮನು ನಮ್ಮ ಕೈ ಮತ್ತು ಕಣ್ಣುಗಳಿಗೆ ಸಿಕ್ಕಿಲ್ಲವೆನ್ನುವವರು, ತಮಗೆ ಸಿಕ್ಕಿರುವುದರೊಳಗೇ ಅವನನ್ನು ಏಕೆ ಕಾಣಲಾರರು ? ಲೆಕ್ಕಕ್ಕೆ ಸಿಗದಷ್ಟು ದೇಹ(ಒಡಲು)ಗಳನ್ನು ಧರಿಸಿಕೊಂಡಿರುವವನನ್ನು ನೋಡಿ ಅದರೊಳಗೆ ಹೊಕ್ಕು (ಪೊಕ್ಕು) ಅವನನ್ನು ಕಾಣಲಾರರೇಕೆ?

Wednesday, October 19, 2011

ಎವೆಯಿಡದೆ ನೋಡು, ಮರ ಮರವು ಕರೆವುದು ನಿನ್ನ (89)


ಎವೆಯಿಡದೆ ನೋಡು, ಮರ ಮರವು ಕರೆವುದು ನಿನ್ನ |
ಕಿವಿಯನಾನಿಸು, ಕಲ್ಲು ಕಲ್ಲೊಳಂ ಸೊಲ್ಲು ||
ಅವಧರಿಸು ಜೀವ ಜೀವವುಮುಲಿವುದೊಂದುಲಿಯ |
ಭುವನವೇ ಶಿವವಾರ್ತೆ - ಮರುಳ ಮುನಿಯ || (೮೯)

(ಕಿವಿಯನ್+ಆನಿಸು)(ಜೀವವು+ಉಲಿವುದು+ಒಂದು+ಉಲಿಯ)

ಕಣ್ಣುಗಳ ರೆಪ್ಪೆಗಳನ್ನು (ಎವೆ) ಮಿಟುಕಿಸದೆ ನೋಡು, ಪ್ರಪಂಚದಲ್ಲಿರುವ ಮರ ಮರಗಳೂ ನಿನ್ನನ್ನು ಕರೆಯುತ್ತಿವೆ. ಕಿವಿಗೊಟ್ಟು ಕೇಳು, ಪ್ರಪಂಚದಲ್ಲಿರುವ ಕಲ್ಲು ಕಲ್ಲುಗಳಲ್ಲೂ ಧ್ವನಿ(ಸೊಲ್ಲು)ಗಳನ್ನು ಕೇಳುತ್ತೀಯೆ. ಮನಸ್ಸಿಟ್ಟು ಕೇಳು (ಅವಧರಿಸು) ಪ್ರತಿಯೊಂದು ಜೀವಿಯೂ ಒಂದೊಂದು ಮಾತು(ಉಲಿ)ಗಳನ್ನು ಹೇಳುತ್ತಿದೆ. ಈ ಪ್ರಪಂಚವೆಲ್ಲವೂ ಪರಮಾತ್ಮನ ಸಮಾಚಾರವೇ ಹೌದು.

Tuesday, October 18, 2011

ಇರುವುದೇ ಸತ್ಯವದು ವಿವಿಧವಪ್ಪುದೆ ಲೋಕ (88)


ಇರುವುದೇ ಸತ್ಯವದು ವಿವಿಧವಪ್ಪುದೆ ಲೋಕ-|
ವದನರಿವುದೇ ಆತ್ಮನೆಲ್ಲವನು ಧರಿಪ ||
ಪರವಸ್ತುವೇ ಬ್ರಹ್ಮವದ ಸ್ಮರಿಸಿ ಬದುಕಲಾ |
ಪರಮಪದವಿರುವಿಕೆಯೆ - ಮರುಳ ಮುನಿಯ || (೮೮)

(ವಿವಿಧ+ಅಪ್ಪುದೆ)(ಲೋಕ+ಅದನ್+ಅರಿವುದೇ)(ಆತ್ಮನ್+ಎಲ್ಲವನು)
(ಬದುಕಲ್+ಆ+ಪರಮಪದ+ಇರುವಿಕೆಯೆ)

ಇರುವುದೇ ನಿಜವಾದದ್ದು. ಅದು ನಾನಾ ಬಗೆಯಲ್ಲಿ ಕಾಣಿಸಿಕೊಳ್ಳುವುದೇ ಪ್ರಪಂಚ. ಅದನ್ನು ತಿಳಿದುಕೊಂಡಿರುವುದೇ ಆತ್ಮ. ಈ ಎಲ್ಲವನ್ನೂ ಹೊತ್ತಿರುವ (ಧರಿಪ) ಪರವಸ್ತುವೇ ಬ್ರಹ್ಮ. ಅದನ್ನು ಸದಾಕಾಲದಲ್ಲೂ ಜ್ಞಾಪಕದಲ್ಲಿಟ್ಟುಕೊಂಡು ನಮ್ಮ ನಮ್ಮ ಜೀವನವನ್ನು ನಡೆಸಿದ್ದಲ್ಲಿ ಮೋಕ್ಷದ ಅನುಭವವನ್ನು ಹೊಂದುತ್ತೇವೆ.

Monday, October 17, 2011

ಶ್ರೊತಾರ್ಥಮೇ ಹೃದನುಭೂತಾರ್ಥಮಾದಂದು (87)


ಶ್ರೊತಾರ್ಥಮೇ ಹೃದನುಭೂತಾರ್ಥಮಾದಂದು |
ಮಾತಿಗೆಟುಕದ ಸತ್ಯದರ್ಶನಂ ನಿನಗೆ ||
ಜ್ಯೋತಿ ನಿನ್ನೊಳಗೆ ಹೃದಯಾಂತರಾಳದೊಳಿಹುದು |
ಆತುಮದ ತೇಜವದು - ಮರುಳ ಮುನಿಯ || (೮೭)

(ಹೃತ್+ಅನುಭೂತ+ಅರ್ಥಂ+ಆದ+ಅಂದು)(ಮಾತಿಗೆ+ಎಟುಕದ)
(ಹೃದಯಾಂತರಾಳದ+ಒಳ್+ಇಹುದು)

ವೇದಗಳ ಅರ್ಥವೇ (ಶ್ರೊತಾರ್ಥಮೇ) ಹೃದಯವು ಅನುಭವಿಸಿದ (ಅನುಭೂತ) ಅರ್ಥ ಆದಾಗ, ಮಾತಿಗೆ ನಿಲುಕದಂತಹ ಸತ್ಯದ ದರ್ಶನ ನಿನಗಾಗುತ್ತದೆ. ಏಕೆಂದರೆ ಬೆಳಕು ನಿನ್ನೊಳಗೆ ನಿನ್ನ ಹೃದಯದ ಅಂತರಾಳದಲ್ಲಿ ಇದೆ. ಆತ್ಮದ ತೇಜಸ್ಸು ಅದು.

Friday, October 14, 2011

ಸಾಧಕಪದಂ ದ್ವೈತ ಸಿದ್ಧಪದಮದ್ವೈತ (86)


ಸಾಧಕಪದಂ ದ್ವೈತ ಸಿದ್ಧಪದಮದ್ವೈತ |
ರೋಧಗಳ ನಡುವೆ ನದಿ ಮುಂಬರಿಯಲುದಧಿ ||
ದ್ವೈಧವಿರೆ ವಿರಹ ಪ್ರಿಯೈಕ್ಯತಾನದ್ವೈಧ |
ಭೇದ ಬರಿ ಭಾವ ದಶೆ - ಮರುಳ ಮುನಿಯ || (೮೬)

(ಸಿದ್ಧಪದಂ+ಅದ್ವೈತ)(ಮುಂಬರಿಯಲ್+ಉದಧಿ)(ದ್ವೈಧ+ಇರೆ)
(ಪ್ರಿಯ+ಐಕ್ಯ+ತಾನ್+ಅದ್ವೈಧ)

ಸಾಧಕನ ದಾರಿ ದ್ವೈತ, ಸಾಧಿಸಿದ ಪದವಿ ಅದ್ವೈತ. ಎರಡು ದಡ(ರೋಧ)ಗಳ ಮಧ್ಯೆ ನದಿಯು ಮುಂದೆ ಸಾಗುತ್ತಿರಲು ಸಮುದ್ರವನ್ನು ಅದು ಸೇರಿದಾಗ ದ್ವೈತ(ದ್ವೈಧ) ಸ್ಥಿತಿಯಲ್ಲಿ ಅದು ಬೇರೆಯಾಗಿ ಉಳಿದುಹೋಗುತ್ತದೆ. ಆದರೆ ಅದ್ವೈತ(ಅದ್ವೈಧ) ಸ್ಥಿತಿಯಲ್ಲಿ ಅದು ಪ್ರಿಯದಲ್ಲಿ ಒಂದಾಗಿ (ಐಕ್ಯ) ಹೋಗುತ್ತದೆ. ವ್ಯತ್ಯಾಸ(ಭೇದ)ವು ಕೇವಲ ಯೋಚಿಸುವ ಸ್ಥಿತಿ(ದಶೆ)ಯಲ್ಲಿ ಮಾತ್ರ ಇರುತ್ತದೆ.

Thursday, October 13, 2011

ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ (85)


ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ |
ಮರಲ ತಳೆವುದು ಚಿಗುರಿ ಕಾಷ್ಠತೆಯ ದಾಟಿ ||
ನರನಂತು ದೇಹಿತೆಯ ಮೃಚ್ಛಿಲಾಂಶವ ಮೀರೆ |
ಪರಮಾರ್ಥಸುಮದೆ ಕೃತಿ - ಮರುಳ ಮುನಿಯ || (೮೫)

(ನರನ್+ಅಂತು)(ಮೃತ್+ಶಿಲಾ+ಅಂಶ)

ಮರವು ಕಾಂಡ ಮತ್ತು ಬುಡದಲ್ಲಿ ಗಟ್ಟಿಯಾಗಿರುತ್ತದೆ. ಕೊಂಬೆಗಳ ಮೇಲೆ ಅದು ಮರದ ಕಟ್ಟಿಗೆ(ಕಾಷ್ಠ)ತನವನ್ನು ಮೀರಿ, ಚಿಗುರಿ, ಹೂವನ್ನು (ಮರಲ) ಬಿಡುತ್ತದೆ. ಅದೇ ರೀತಿ ಮನುಷ್ಯನೂ ಸಹ ಅವನ ದೇಹದ ಮಣ್ಣು (ಮೃತ್) ಮತ್ತು ಕಲ್ಲು(ಶಿಲಾ)ಗಳ ಭಾಗಗಳನ್ನು ದಾಟಿಹೋದರೆ ಮೋಕ್ಷವೆಂಬ ಹೂವನ್ನು(ಸುಮ) ದೊರಕಿಸಿಕೊಂಡು ಧನ್ಯ(ಕೃತಿ)ನಾಗುತ್ತಾನೆ.

Wednesday, October 12, 2011

ಸೋಹಮನುಭವಿಯಾಗು ದುರ್ಲಭವದೆನ್ನೆ ದಾ- (84)



ಸೋಹಮನುಭವಿಯಾಗು ದುರ್ಲಭವದೆನ್ನೆ ದಾ-|
ಸೋಹಮನುಭವಿಯಾಗು ವಿಭು ವಿಶ್ವಗಳೊಳು ||
ಮೋಹ ಪರಿಯುವುದಂತೊ ಇಂತೊ ಎಂತಾದೊಡೇಂ |
ರಾಹು ಬಿಡೆ ರವಿ ಪೂರ್ಣ - ಮರುಳ ಮುನಿಯ || (೮೪)

(ಸೋಹ+ಅನುಭವಿ+ಆಗು)(ದುರ್ಲಭವು+ಅದು+ಎನ್ನೆ)(ದಾಸೋಹಂ+ಅನುಭವಿ+ಆಗು)
(ವಿಶ್ವಗಳ+ಒಳು)(ಪರಿಯುವುದು+ಅಂತೊ)

ಪರಮಾತ್ಮನೇ ನಾನು (ಸೋಹಂ) ಎಂದು ಭಾವಿಸು. ಅದು ಸಾಧ್ಯವಾಗದೆನ್ನುವುದಾದರೆ ಪರಮಾತ್ಮನು ಸೃಷ್ಟಿಸಿದ ಈ ಪ್ರಪಂಚದಲ್ಲಿ ನಾನು ಪರಮಾತ್ಮನ ಸೇವಕ(ದಾಸೋಹಂ)ನೆಂದು ಭಾವಿಸಿ ಅನುಭವಿಸು. ರಾಹು ಬಿಟ್ಟ ತಕ್ಷಣ ಸೂರ್ಯನು ಪೂರ್ತಿಯಾಗಿ ಬೆಳಗುವಂತೆ, ಈ ಪ್ರಕಾರದ ಅನುಭವಿಕೆಯಿಂದ ಇಷ್ಟೋ ಅಷ್ಟೋ ಎಷ್ಟಾದರೂ ಅಕ್ಕರೆ, ಪ್ರೇಮ ಮತ್ತು ಅಜ್ಞಾನಗಳ ನಿವಾರಣೆಯಾಗುತ್ತದೆ.

Tuesday, October 11, 2011

ಇನ್ನೊಂದನೆಳಸಗೊಡದನ್ಯವನು ಮರೆಯಿಪುದು (83)


ಇನ್ನೊಂದನೆಳಸಗೊಡದನ್ಯವನು ಮರೆಯಿಪುದು |
ತನ್ನನೇ ತಾಂ ನೆನೆಯದಂತೆ ಕರಗಿಪುದು ||
ಪೂರ್ಣದೊಳ್ ಪ್ರೇಮಿಯಂ ಪ್ರಿಯದೊಳೊಂದಾಗಿಪುದು |
ಚೆನ್ನೆನುವುದದ್ವೈತ - ಮರುಳ ಮುನಿಯ || (೮೩)

(ಇನ್ನೊಂದನ್+ಎಳಸಗೊಡದೆ+ಅನ್ಯವನು)(ಪ್ರಿಯದೊಳ್+ಒಂದಾಗಿಪುದು)
(ಚೆನ್ನ್+ಎನುವುದು+ಅದ್ವೈತ)

ಇನ್ನೊಂದನ್ನು ಬಯಸದಂತೆ ತನ್ನದಲ್ಲದ ಬೇರೆ ಎಲ್ಲವನ್ನು ಮರೆಯುವಂತೆ ಮಾಡುವುದು. ಅನಂತರ ತನ್ನನ್ನು ತಾನೇ ಜ್ಞಾಪಕ ಇಟ್ಟುಕೊಳ್ಳದಂತೆ ಅದರಲ್ಲೇ ಪೂರ್ತಿಯಾಗಿ ಕರಗಿಸಿಬಿಡುವುದು. ಕೊನೆಯಲ್ಲಿ ಪ್ರೇಮಿಯನ್ನು ಪ್ರಿಯನ ಜೊತೆ ಸೇರಿಸುವುದು. ಈ ರೀತಿಯ ಐಕ್ಯವೇ ಒಳ್ಳೆಯದು ಮತ್ತು ಸೊಗಸು ಎನ್ನುತ್ತದೆ ಅದ್ವೈತ.

Monday, October 10, 2011

ಹೃದಯವೊಂದರಿನಲ್ತು ಮೇಧೆಯೊಂದರಿನಲ್ತು (82)


ಹೃದಯವೊಂದರಿನಲ್ತು ಮೇಧೆಯೊಂದರಿನಲ್ತು |
ವಿದಿತವಪ್ಪುದು ನಿನಗೆ ತಾರಕದ ತತ್ತ್ವಂ ||
ಹದದಿನಾ ಸಾಧನೆಗಳೆರಡುಮೊಂದಾಗೆ ಬೆಳ-|
ಕುದಿಸುವುದು ನಿನ್ನೊಳಗೆ - ಮರುಳ ಮುನಿಯ || (೮೨)

(ಹೃದಯ+ಒಂದರಿನ್+ಅಲ್ತು)(ಮೇಧೆ+ಒಂದರಿನ್+ಅಲ್ತು)(ವಿದಿತ+ಅಪ್ಪುದು)
(ಹದದಿನ್+ಆ)(ಸಾಧನೆಗಳು+ಎರಡುಂ+ಒಂದಾಗೆ)(ಬೆಳಕು+ಉದಿಸುವುದು)
(ನಿನ್ನ+ಒಳಗೆ)

ಕೇವಲ ಹೃದಯದಿಂದ ಮಾತ್ರ ಅಥವಾ ಬುದ್ಧಿ(ಮೇಧೆ) ಶಕ್ತಿಯಿಂದ ಮಾತ್ರವಲ್ಲ ನಿನಗೆ ಪಾರಾಗುವ (ತಾರಕ) ಸಿದ್ಧಾಂತವು ತಿಳಿಯುವುದು (ವಿಧಿತ). ಒಂದು ಪಕ್ವತೆ ಮತ್ತು ಕ್ರಮದಿಂದ ಈ ಎರಡೂ ಉಪಕರಣ (ಸಾಧನೆ)ಗಳೂ ಒಂದಾದಾಗ ನಿನ್ನೊಳಗೆ ಬೆಳಕು ಹುಟ್ಟುತ್ತದೆ(ಉದಿಸುವುದು).

Friday, October 7, 2011

ಒಮ್ಮೊಮ್ಮೆ ಸತಿಪತಿಯರಿರ‍್ವರಾಚರಿತದಲಿ (81)



ಒಮ್ಮೊಮ್ಮೆ ಸತಿಪತಿಯರಿರ‍್ವರಾಚರಿತದಲಿ |
ಒಮ್ಮೊಮ್ಮೆಯವರೇಕಮಿರ‍್ತನವನುಳಿದು ||
ಬ್ರಹ್ಮ ಜೀವರ‍್ಕಳಂತಿರರೆ ವೈಕಲ್ಯದಲಿ |
ಮರ್ಮವನುಭವವೇದ್ಯ - ಮರುಳ ಮುನಿಯ || (೮೧)

(ಸತಿಪತಿಯರ್+ಇರ‍್ವರ್+ಆಚರಿತದಲಿ)(ಒಮ್ಮೊಮ್ಮೆ+ಅವರ್+ಏಕಂ+ಇರ‍್ತನವನ್+ಉಳಿದು)
(ಜೀವರ‍್ಕಳ್+ಅಂತು+ಇರರೆ)

ಒಂದೊಂದು ಸಲ ಪತಿ ಪತ್ನಿಯರಿಬ್ಬರ ವರ್ತನೆ(ಆಚರಿತ)ಗಳಲ್ಲಿ, ಒಂದೊಂದು ಸಲ ಅವರಿಬ್ಬರಾಗಿರುವುದನ್ನು (ಇರ‍್ತನವನ್) ಬಿಟ್ಟು ಒಂದೇ ಆಗಿ, ಅವರ ಕುಂದು, ಕೊರತೆ ಮತ್ತು ಚಿಂತೆಗಳ ನಡುವೆಯೂ, ಇಬ್ಬರೂ ಬ್ರಹ್ಮನು ಸೃಷ್ಟಿಸಿದ ಜೀವಗಳೇ ಎಂಬಂತೆ ನಡೆದುಕೊಳ್ಳುವುದಿಲ್ಲವೇನು? ಈ ರಹಸ್ಯ(ಮರ್ಮ)ವನ್ನು ಅನುಭವದಿಂದ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ (ವೇದ್ಯ).

ಈ ಸಂಬಂಧದಲ್ಲಿ ನಾವು ಬೇರೆ ಬೇರೆ ಎಂಬ ಭಾವನೆ ಅಳಿಸಿಹೋಗುತ್ತದೆ. ಗಂಡನ ಮಾತೇ ಹೆಂಗಸಿನ ಇಂಗಿತ, ಹೆಂಗಸಿನ ಇಂಗಿತವೇ ಗಂಡನ ಆಚರಣೆ, ಹಾಗೆ ಬ್ರಹ್ಮವಸ್ತು ಬೇರೆ; ನಾನು ಬೇರೆ; ಜೀವ ಬೇರೆ ಎಂಬ ಭಾವನೆ ಅಳಿಸಿಹೋಗಬೇಕಾದರೆ ನಾನು, ನಾನು ಎಂದು ಹೇಳಿಕೊಳ್ಳುವ ಭಾವನೆ ಮರೆಯಾಗಬೇಕು. ಆಗ ಪರಮಾತ್ಮಾನುಭವದ ಕಡೆ ಒಂದು ಹೆಜ್ಜೆಹಾಕಿದಂತಾಗುತ್ತದೆ.

Wednesday, October 5, 2011

ಅನುಭವವದೇನು ? ನಿನ್ನುದ್ದಿಷ್ಟವಸ್ತುವನು (80)


ಅನುಭವವದೇನು ? ನಿನ್ನುದ್ದಿಷ್ಟವಸ್ತುವನು |
ಮನವಪ್ಪಿಕೊಂಡಿಹುದು ಹೊರಗೊಳಗೆ ಸರ್ವಂ ||
ತನುವೊಳಿಹ ರಕ್ತಮಾಂಸಗಳ ತೊಗಲಿನವೋಲು |
ಮನ ಪಿಡಿಯಲನುಭವವೊ - ಮರುಳ ಮುನಿಯ || (೮೦)

(ಅನುಭವವು+ಅದು+ಏನು)(ನಿನ್ನ+ಉದ್ದಿಷ್ಟ+ವಸ್ತುವನು)(ಮನವು+ಅಪ್ಪಿಕೊಂಡು+ಇಹುದು)
(ಹೊರಗೆ+ಒಳಗೆ)(ತನುವೊಳು+ಇಹ)(ಪಿಡಿಯಲ್+ಅನುಭವವೊ)

ಅನುಭವವೆಂದರೇನು ಎನ್ನುವುದರ ವಿವರಣೆ ಇಲ್ಲಿದೆ. ನೀನು ಪಡೆಯಬೇಕೆಂದು ಉದ್ದೇಶಿಸಿದ (ಉದ್ದಿಷ್ಟ) ವಸ್ತುವನ್ನು, ನಿನ್ನ ಮನಸ್ಸು, ಹೊರಗೆ, ಒಳಗೆ ಮತ್ತು ಎಲ್ಲೆಲ್ಲೂ ಪೂರ್ತಿಯಾಗಿ ಆವರಿಸಿಕೊಂಡಿರುವುದು. ದೇಹ(ತನು)ದಲ್ಲಿರುವ ರಕ್ತ ಮಾಂಸ ಮತ್ತು ಚರ್ಮಗಳಂತೆ ಮನಸ್ಸೂ ಸಹ ಆ ವಸ್ತುವನ್ನು ಹಿಡಿದುಕೊಂಡಿದ್ದರೆ ನಿನಗೆ ಅನುಭವದ ಅರಿವುಂಟಾಗುತ್ತದೆ.

Tuesday, October 4, 2011

ಬಾನೊಳೆಲರಾಟಕ್ಕೆ ಸಿಕ್ಕಿರ್ಪ ಧೂಳುಕಣ (79)


ಬಾನೊಳೆಲರಾಟಕ್ಕೆ ಸಿಕ್ಕಿರ್ಪ ಧೂಳುಕಣ |
ಭಾನುವಿಂಗೆಷ್ಟು ಸನಿಹವದೆಷ್ಟು ದೂರ ||
ಅನುಭಾವದ ಮಾತು ಊಹೆ ತರ್ಕಗಳಲ್ಲ |
ಸ್ವಾನುಭೂತಿಯೆ ಸತ್ಯ - ಮರುಳ ಮುನಿಯ || (೭೯)

(ಬಾನೊಳ್+ಎಲರ್+ಆಟಕ್ಕೆ)(ಭಾನುವಿಂಗೆ+ಎಷ್ಟು)(ಸನಿಹ+ಅದು+ಎಷ್ಟು)

ಆಕಾಶದಲ್ಲಿ (ಬಾನೊಳ್) ಗಾಳಿಯ (ಎಲರ್) ಆಟಕ್ಕೆ ಸಿಕ್ಕಿಹಾಕಿಕೊಂಡಿರುವ ಒಂದು ಧೂಳಿನ ಕಣವು, ಸೂರ್ಯ (ಭಾನು)ನಿಗೆಷ್ಟು ಹತ್ತಿರ (ಸನಿಹ) ಅಥವಾ ಅದು ಅವನಿಂದೆಷ್ಟು ದೂರ ಇದೆಯೆಂದು ಯಾರಾದರೂ ನಿಖರವಾಗಿ ಹೇಳಬಲ್ಲರೇನು? ಇದೇ ರೀತಿ ಅನುಭವದಿಂದ ಸಿದ್ಧಿಯಾದ ಮಾತುಗಳು ಊಹೆ ಮತ್ತು ತರ್ಕಕ್ಕೆ ಸಿಗುವುದಿಲ್ಲ. ಸ್ವಂತ ಅನುಭವದಿಂದ ಬಂದಿರುವ ತಿಳುವಳಿಕೆಯೇ (ಸ್ವಾನುಭೂತಿ) ಸತ್ಯ.

Monday, October 3, 2011

ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ (78)


ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ |
ಎತ್ತೆತ್ತಲ್ ಎಂದೆಂದುಂ ಇರುವುದದು ಸತ್ಯ ||
ಗೊತ್ತಿಲ್ಲ ಗುರಿಯಿಲ್ಲ ಗುರುತು ಗೆಯ್ಮೆಗಳಿಲ್ಲ |
ಸತ್ ಒಳ್ಮೆಯೊಳ್ಳಿತದು - ಮರುಳ ಮುನಿಯ || (೭೮)

(ಇರುವಿಕೆಯದ+ಅಸ್ತಿತ್ವ)(ಇರುವುದು+ಅದು)(ಒಳ್ಮೆಯ+ಒಳ್ಳಿತು+ಅದು)

ಶ್ರೇಷ್ಠವಾಗಿರುವ ವಸ್ತು ಎನ್ನುವುದರ ಇರುವಿಕೆ ಬರಿಯ ಇರುವಿಕೆಯೇ ಹೌದು. ಎಲ್ಲೆಲ್ಲಿಯೂ ಎಂದೆಂದಿಗೂ ಇರುವುದು ಸತ್ಯ. ಅದಕ್ಕೆ ಒಂದು ಗೊತ್ತು, ಗುರಿ, ಗುರುತು ಮತ್ತು ಕಾರ್ಯ(ಗೆಯ್ಮೆ)ಗಳಿಲ್ಲ. ಅದು ಒಳ್ಳೆಯದರಲ್ಲಿ ಒಳ್ಳೆಯದು. ಶ್ರೇಷ್ಠವಾಗಿರುವುದರಲ್ಲಿ ಶ್ರೇಷ್ಠವಾದುದು.

Friday, September 30, 2011

ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ (77)


ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ |
ನಿತ್ಯ ನಿಶ್ಚಲಮಿರ‍್ಪ ಸತ್ತ್ವವದು ಸತ್ಯ ||
ಸತ್ಯ ಸೌಂದರ್ಯಗಳ್ ಬ್ರಹ್ಮಮಾಯೆಗಳೊಡಲು |
ಪ್ರತ್ಯೇಕಮವರಿರರೊ - ಮರುಳ ಮುನಿಯ || (೭೭)

(ಸತ್ತ್ವ+ಅದು)(ನಿಶ್ಚಲಂ+ಇರ‍್ಪ)(ಬ್ರಹ್ಮಮಾಯೆಗಳ್+ಒಡಲು)(ಪ್ರತ್ಯೇಕಂ+ಅವರ್+ಇರರೊ)

ನಾಟ್ಯದ ಆಟವನ್ನು ತೋರಿಸುವ ಸಾರವೇ ಸೌಂದರ್ಯ. ಯಾವಾಗಲೂ ಅಚಲವಾಗಿರುವ ಸಾರವನ್ನೇ ಸತ್ಯ ಎನ್ನುವುದು. ಸತ್ಯ ಮತ್ತು ಸೌಂದರ್ಯಗಳು ಬ್ರಹ್ಮ ಮಾಯೆಯ ದೇಹ. ಇವು ಬೇರೆ ಬೇರೆಯಾಗಿ ಇರಲಾರವು.

Thursday, September 29, 2011

ಬರಗಾಲದವಸರದಿ ದೊರೆತನ್ನವುಂಡೊಡೆಯು (76)



ಬರಗಾಲದವಸರದಿ ದೊರೆತನ್ನವುಂಡೊಡೆಯು-|
ಮರಸುತಿಹೆಯಲ್ತೆ ನೀ ಮೇಲುಣಿಸ ನೆನೆದು ||
ಅರಿವಿಗೆಟುಗಿದ ಮತವನೇಣಿಯಾಗಿಸುತೇರಿ |
ಪರಮ ಸತ್ಯವನಡರೊ - ಮರುಳ ಮುನಿಯ || (೭೬)

(ಬರಗಾಲದ+ಅವಸರದಿ)(ದೊರೆತ+ಅನ್ನವ+ಉಂಡೊಡೆಯುಂ+ಅರಸುತಿಹೆ+ಅಲ್ತೆ)(ಅರಿವಿಗೆ+ಎಟುಗಿದ)
(ಮತವನ್+ಏಣಿಯಾಗಿಸುತ+ಏರಿ)(ಸತ್ಯವನ್+ಅಡರೊ)

ಕ್ಷಾಮ (ಬರಗಾಲ) ಕಾಲದಲ್ಲಿ ನಿನಗೆ ಸಿಕ್ಕಿದ ಉಣಿಸನ್ನು ತಿಂದು ಜೀವಿಸಿದರೂ ಸಹ, ನೀನು ಬೇರೆ ಬೇರೆ ರುಚಿಯಾದ ಪದಾರ್ಥಗಳನ್ನು ಹುಡುಕುತ್ತಾ ಹೋಗುವೆ ತಾನೆ ? ಹಾಗೆಯೇ ನಿನ್ನ ತಿಳಿವಳಿಕೆಗೆ ದೊರಕಿದ ವಿಚಾರವನ್ನು ಏಣಿಯಾಗಿಟ್ಟುಕೊಂಡು ಶ್ರೇಷ್ಠವಾದ(ಪರಮ) ಸತ್ಯದ ನೆಲೆಯನ್ನು ಸೇರು (ಅಡರು).

Wednesday, September 28, 2011

ಜಯದ ಫಲ ನಿಜದಿ ನಿನ್ನೊಳಗೆ ಹೊರಗೇನಲ್ಲ (75)


ಜಯದ ಫಲ ನಿಜದಿ ನಿನ್ನೊಳಗೆ ಹೊರಗೇನಲ್ಲ |
ನಿಯಮದಿಂ ಪಾಲಿಸಿದ ಸತ್ಯ ಧರ್ಮಗಳಿಂ ||
ಲಯವಾಗೆ ಮಮತೆಯಾತ್ಮಂ ಬಲಿಯೆ ಸರ್ವತ-|
ನ್ಮಯತೆಯನುಭವವೆ - ಮರುಳ ಮುನಿಯ || (೭೫)

(ಮಮತೆ+ಆತ್ಮಂ)(ಸರ್ವ+ತನ್ಮಯತೆಯ+ಅನುಭವವೆ)

ಗೆಲುವು ಎಂದರೇನು? ಗೆಲುವಿನ ಪರಿಣಾಮವು ಸ್ವತಃ ನಿನ್ನೊಳಗೆ ಆಗುತ್ತದೆಯೇ ಹೊರತು ಅದು ಹೊರಗೆ ಕಾಣಿಸುವಂತಹುದಲ್ಲ. ಅದು ಕಟ್ಟುಪಾಡಿನಿಂದ ಅನುಸರಿಸಿದ ಸತ್ಯ ಮತ್ತು ಧರ್ಮಗಳಿಂದ ಸ್ವಾರ್ಥ ಮತ್ತು ಮೋಹಗಳು ನಾಶವಾಗಿ (ಲಯವಾಗೆ) ಆತ್ಮವು ಬಲಿಷ್ಠವಾಗಿ ನೀನು ಎಲ್ಲದರಲ್ಲೂ ತಲ್ಲೀನನಾಗಿರುವ ಅನುಭವವೇ ಗೆಲುವು.

Tuesday, September 27, 2011

ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ (74)


ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ |
ನಿತ್ಯವೆದೆಯಿರಲಿ ತಾಳಲಿಕೆ - ತಳ್ಳಲಿಕೆ ||
ಸತ್ಯ ನಿನಗಂತರಾತ್ಮಜ್ಯೋತಿ ಬೆಳಗಿರಲಿ |
ಸತ್ಯ ಜಯ ಧರ್ಮ ಜಯ - ಮರುಳ ಮುನಿಯ || (೭೪)

(ಮಂಗಳ+ಇರಲಿ)(ಸಂತಸ+ಇರಲಿ)(ಸತ್ಯ+ಎದೆ+ಇರಲಿ)(ನಿನಗೆ+ಅಂತರಾತ್ಮ)

ಪ್ರತಿದಿನವೂ ನಿನಗೆ ಶುಭ ಮತ್ತು ಒಳಿತಾಗಲಿ. ಪ್ರತಿದಿನವೂ ಸಂತೋಷವಿರಲಿ. ಈ ಜಗತ್ತಿನ ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಸಹಿಸಲು ಮತ್ತು ಅವುಗಳನ್ನು ಮಾಡನ್ನು ನಿನಗೆ ಗಟ್ಟಿ ಎದೆ ಇರಲಿ. ನಿನ್ನ ಅಂತರಾತ್ಮದ ಬೆಳಕು ಪರಮಾತ್ಮನ ತತ್ತ್ವದಿಂದ ಹೊಳೆಯುತ್ತಿರಲಿ. ಸತ್ಯ ಮತ್ತು ಧರ್ಮಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ.

Monday, September 26, 2011

ಹಿಂದಿನ ವಿವೇಕಾಚಾರವಿಂದಿಗಪ್ರಕೃತವೆನ (73)


ಹಿಂದಿನ ವಿವೇಕಾಚಾರವಿಂದಿಗಪ್ರಕೃತವೆನ- |
ಲಿಂದಿನ ವಿವೇಕಾಚಾರ ಮುಂದಿಗೆಂತಹುವು ? ||
ಎಂದೆಂದಿಗುಂ (ಸಂದ) ತತ್ತ್ವವೊಂದಲ್ತೆ ಅದ-|
ರಿಂದೆಲ್ಲವನು ನೋಡು - ಮರುಳ ಮುನಿಯ || (೭೩)

(ವಿವೇಕ+ಆಚಾರ+ಇಂದಿಗೆ+ಅಪ್ರಕೃತ+ಎನಲ್+ಇಂದಿನ)(ಮುಂದಿಗೆ+ಎಂತು+ಅಹುವು)
(ತತ್ತ್ವ+ಒಂದಲ್ತೆ)(ಅದರಿಂದ+ಎಲ್ಲವನು)

ಹಿಂದಿನ ಕಾಲದ ಯುಕ್ತಾಯುಕ್ತ ವಿಚಾರಗಳು ಮತ್ತು ಒಳ್ಳೆಯ ನಡತೆಯ ನಿಯಮಗಳು ಇಂದಿನ ಕಾಲಕ್ಕೆ ಅನ್ವಯಿಸಲಾರವೆಂದರೆ, ಇಂದಿನ ವಿಚಾರ ಮತ್ತು ಸಂಪ್ರದಾಯಗಳನ್ನು ಮುಂಬರುವ ಕಾಲಗಳಿಗೆ ಒಪ್ಪಲಾಗುವುದೇನು? ಯಾವತ್ತಿಗೂ ಒಪ್ಪತಕ್ಕತಂಹ ಒಂದು ಸಿದ್ಧಂತವಿರುವುದು ತಾನೆ? ಅಂಥಾ ಸಿದ್ಧಾಂತದ ಹಿನ್ನಲೆಯಲ್ಲಿ ಎಲ್ಲ ಯುಕ್ತಾಯುಕ್ತ ವಿಚಾರ ಮತ್ತು ಸಂಪ್ರದಾಯಗಳನ್ನು ನೋಡು.

Friday, September 23, 2011

ಕರಣ ಕಾರಕ ಮಿಶ್ರವೆಲ್ಲ ವಿಶ್ವಪದಾರ್ಥ (72)


ಕರಣ ಕಾರಕ ಮಿಶ್ರವೆಲ್ಲ ವಿಶ್ವಪದಾರ್ಥ |
ಕ್ಷರದೇಹವೊಂದು ಅಕ್ಷರಸತ್ತ್ವವೊಂದು ||
ಪರಿಮೇಯ ಯಂತ್ರಾಂಶ ಚೇತನಾಂಶವಮೇಯ |
ಹರವೆರಡಕೆರಡು ತೆರ - ಮರುಳ ಮುನಿಯ || (೭೨)

(ಯಂತ್ರ+ಅಂಶ)(ಚೇತನ+ಅಂಶವು+ಅಮೇಯ)(ಹರವು+ಎರಡಕೆ+ಎರಡು)

ಈ ಪ್ರಪಂಚದಲ್ಲಿರುವ ಪದಾರ್ಥಗಳೆಲ್ಲವೂ ಕ್ರಿಯಾಸಾಧನ (ಕರಣ) ಮತ್ತು ಕರ್ತೃವಿನ (ಕಾರಕ) ಮಿಶ್ರಣದಿಂದ ಆಗಿವೆ. ಒಂದು ನಾಶ(ಕ್ಷರ)ವಾಗುವ ದೇಹ ಮತ್ತು ಮತ್ತೊಂದು ನಾಶವಾಗದಿರುವ (ಅಕ್ಷರ) ಸಾರ. ಈ ಯಂತ್ರಗಳ ಭಾಗಗಳು ನಮ್ಮ ಅಳತೆಗೆ ಸಿಕ್ಕುತ್ತವೆ (ಪರಿಮೇಯ). ಆದರೆ ಈ ಚೈತನ್ಯದ ಭಾಗವು ನಮ್ಮ ಅಳತೆಗೆ ಸಿಗಲಾರದು (ಅಮೇಯ). ಇವೆರಡೂ, ಎರಡು ಬೇರೆ ಬೇರೆ ರೀತಿಯಲ್ಲಿ ವ್ಯಾಪಿಸಿಕೊಂಡಿವೆ.

Thursday, September 22, 2011

ತರುಣಿಯಾ ಕೊರಳ ಮಣಿಯೆರಡು ಕಾಣ್ಬುದು ಕಣ್ಗೆ (71)



ತರುಣಿಯಾ ಕೊರಳ ಮಣಿಯೆರಡು ಕಾಣ್ಬುದು ಕಣ್ಗೆ |
ಸೆರಗು ಮುಚ್ಚಿರುವ ಸರ ದೊರೆವುದೂಹನೆಗೆ ||
ಪರವಸ್ತು ಮಹಿಮೆಯಂತರೆ ತೋರುವುದು ಕಣ್ಗೆ |
ಪರಿಪೂರ್ಣವದು ಮನಕೆ - ಮರುಳ ಮುನಿಯ || (೭೧)

(ಮಣಿ+ಎರಡು)(ದೊರೆವುದು+ಊಹನೆಗೆ)(ಮಹಿಮೆ+ಅಂತು+ಅರೆ)(ಪರಿಪೂರ್ಣ+ಅದು)

ಒಬ್ಬ ಯುವತಿಯು ತನ್ನ ಕೊರಳಿನಲ್ಲಿ ಹಾಕಿಕೊಂಡಿರುವ ಸರದ ಎರಡು ಮಣಿಗಳು ಮಾತ್ರ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಏಕೆಂದರೆ ಸರದ ಮಿಕ್ಕಿದ್ದ ಭಾಗವನ್ನು ಆಕೆಯ ಸೆರಗು ಮುಚ್ಚಿಕೊಂಡು, ಅವು ನಮ್ಮ ಕಣ್ಣಿಗೆ ಕಾಣಿಸದಂತೆ ಮಾಡುತ್ತದೆ. ಆದರೆ ಆ ಸರವು ಹೇಗಿರಬಹುದೆಂಬುದು ನಮ್ಮ ಊಹಾಶಕ್ತಿಗೆ ದೊರಕುತ್ತದೆ. ಪರಮಾತ್ಮನ ಮಹಿಮೆಯೂ ಸಹ ಇದೇ ರೀತಿ ಈ ಪ್ರಪಂಚದ ವಸ್ತುಗಳ ಮಧ್ಯದಲ್ಲಿ ಸ್ವಲ್ಪಭಾಗ ಮಾತ್ರ ನಮ್ಮ ಕಣ್ಣುಗಳಿಗೆ ಗೋಚರಿಸುತ್ತವೆ. ಆದರೆ ನಮ್ಮ ಮನಸ್ಸಿಗಾದರೂ ಅವು ಸಂಪೂರ್ಣವಾಗಿ ದೊರಕುಬಲ್ಲುದಾಗಿವೆ.

Wednesday, September 21, 2011

ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ (70)


ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ |
ಸೋಕಲೊಂದಿನ್ನೊಂದ ನವರಚನೆಯಾಗಿ ||
ಸ್ತೋಕಾಣುವೊಂದರಂಶ ಪರಂಪರೆಯ ಘರ್ಷ |
ವೈಕೃತಂಗಳೆ ಸೃಷ್ಟಿ - ಮರುಳ ಮುನಿಯ || (೭೦)

(ದ್ವಿಕ+ಆಗಿ)(ಶತ+ಆಗಿ)(ಸೋಕಲ್+ಒಂದು+ಇನ್ನೊಂದ)(ನವರಚನೆ+ಆಗಿ)
(ಸ್ತೋಕ+ಅಣು+ಒಂದರ+ಅಂಶ)

ಒಂದು ಎರಡಾಗಿ, ಎರಡು ಹತ್ತಾಗಿ, ಹತ್ತು ನೂರಾಗಿ, ಒಂದನ್ನೊಂದು ಸ್ಪರ್ಶಿಸಲು ಹೊಸ ನಿರ್ಮಾಣವಾಗಿ, ಅವುಗಳ ಸಣ್ಣ ಅಣುವಿನ (ಸ್ತೋಕಾಣು) ಒಂದು ಭಾಗದ ಕಾಲಾನುಗತವಾಗಿ ಇಳಿದುಬಂದ (ಪರಪಂರೆ) ತಿಕ್ಕಾಡುವಿಕೆ ಮತ್ತು ರೂಪಾಂತರಗಳೇ (ವೈಕೃತಂಗಳೆ) ಸೃಷ್ಟಿ.

Tuesday, September 20, 2011

ವಸ್ತುವಿರುವದದೊಂದು ಕಣ್ಗೆರಡೆನಿಪ್ಪುದದು (69)


ವಸ್ತುವಿರುವದದೊಂದು ಕಣ್ಗೆರಡೆನಿಪ್ಪುದದು |
ವ್ಯಕ್ತ ಪ್ರಪಂಚವೊಂದವ್ಯಕ್ತಮೊಂದು ||
ನಿತ್ಯಮಾಯೆರಡು ವೊಂದೆಂಬಂತೆ ಬಾಳ್ವವನು |
ತತ್ತ್ವ ಪರಿಪೂರ್ಣನೆಲೊ- ಮರುಳ ಮುನಿಯ || (೬೯)

(ವಸ್ತು+ಇರುವದು+ಅದು+ಒಂದು)(ಕಣ್ಗೆ+ಎರಡು+ಎನಿಪ್ಪುದು+ಅದು)(ಪ್ರಪಂಚ+ಒಂದು+ಅವ್ಯಕ್ತಂ+ಒಂದು)
(ನಿತ್ಯಂ+ಆ+ಎರಡು)(ಒಂದು+ಎಂಬಂತೆ)(ಪರಿಪೂರ್ಣನ್+ಎಲೊ)

ಇರುವುದು ಒಂದೇ ಒಂದು ವಸ್ತುವಾದರೂ, ಅದು ನಮ್ಮ ಕಣ್ಣುಗಳಿಗೆ ಎರಡರಂತೆ ಎನ್ನಿಸುತ್ತದೆ. ಪ್ರಕಟ(ವ್ಯಕ್ತ)ವಾಗಿರುವ ಪ್ರಪಂಚವೊಂದು ಮತ್ತು ಕಾಣದ (ಅವ್ಯಕ್ತ) ಪ್ರಪಂಚ ಇನ್ನೊಂದು. ಪ್ರತಿದಿನವೂ ಇವೆರಡೂ ಒಂದೇ ಎನ್ನುವಂತೆ ಜೀವನವನ್ನು ನಡೆಸುವವನು, ಸಂಪೂರ್ಣವಾದ ಸತ್ಯವನ್ನು ಅರಿತವನು.

Monday, September 19, 2011

ನಾನಾ ಸುಮ ಸ್ತೋಮದೊಳಡಂಗಿ ಮಲ್ಲಿಗೆಯು (68)


ನಾನಾ ಸುಮ ಸ್ತೋಮದೊಳಡಂಗಿ ಮಲ್ಲಿಗೆಯು |
ಕಾಣಬಾರದೆ ಕಣ್ಗೆ ಸೂಕ್ಷ್ಮ ನೋಡುವನಾ-|
ಘ್ರಾಣನಕ್ಕಪ್ಪಂತೆ ಲೀನನುಂ ವಿಶದನುಂ |
ನೀನಿರಿಳೆಬಾಳಿನೊಳು - ಮರುಳ ಮುನಿಯ || (೬೮)

(ಸ್ತೋಮದೊಳು+ಅಡಂಗಿ)(ನೋಡುವನ+ಆಘ್ರಾಣನಕ್ಕೆ+ಅಪ್ಪಂತೆ)(ನೀನ್+ಇರು+ಇಳೆ+ಬಾಳಿನೊಳು)

ವಿಧ ವಿಧವಾದ ಹೂವು(ಸುಮ)ಗಳ ರಾಶಿ(ಸ್ತೋಮ)ಯೊಳಗೆ, ನೋಡುವವನ ಸಾಮಾನ್ಯ ದೃಷ್ಟಿಗೆ ಕಾಣಿಸದೆ ಮರೆಯಾಗಿರುವ ಮಲ್ಲಿಗೆಯ ಹೂವು, ಚುರುಕು ದೃಷ್ಟಿಯಿರುವವನ ವಾಸನೆಗೆ (ಅಘ್ರಾಣ) ನಿಲುಕುವಂತೆ, ಈ ಪ್ರಪಂಚದಲ್ಲಿ ಕೆಲವು ವಸ್ತುಗಳು ಬೆರೆತಿರುವಂತಿದ್ದರೂ ಸ್ಪಷ್ಟ(ವಿಶದ)ವಾಗಿರುತ್ತದೆ. ನಿನ್ನ ಜೀವನವು ಸುಖಮಯವಾಗಿರಬೇಕೆಂದರೆ ನೀನೂ ಸಹ ಇದೇ ರೀತಿ ಈ ಭೂಮಿ(ಇಳೆ)ಯಲ್ಲಿ ಜೀವನವನ್ನು ನಡೆಸು. ಹೂವಿನ ರಾಶಿಯಲ್ಲಿಯ ಮಲ್ಲಿಗೆಯ ಹೂವಾಗಿ ಸುಗಂಧವನ್ನು ಹರಡು. ಆದರೆ ಅದು ರಾಶಿಯಲ್ಲಿ ಮರೆಯಾಗಿ ಕಣ್ಣಿಗೆ ಗೋಚರಿಸದಿರುವಂತೆ ನೀನೂ ನಿನ್ನ ಇರುವಿಕೆಯನ್ನು ಇತರರ ಕಣ್ಣಿಗೆ ಬೀಳಿಸದೆ ಸುಗಂಧವನ್ನು ಮಾತ್ರ ಹರಡು.

Friday, September 16, 2011

ಜಗವಖಿಲವಿದನಾದಿ ಜೀವ ಜೀವವನಾದಿ (67)


ಜಗವಖಿಲವಿದನಾದಿ ಜೀವ ಜೀವವನಾದಿ |
ಯುಗ-ಯುಗಕೆ ಭೇದವಂ ನಾಮರೂಪಗಳು ||
ಬಗೆಬಗೆಯ ಗುಣ ನೀತಿ ನಯ ಸಂಪ್ರದಾಯಗಳ್ |
ಮಿಗುವ ವಸ್ತುವದೊಂದೆ -ಮರುಳ ಮುನಿಯ || (೬೭)

(ಜಗವು+ಅಖಿಲ+ಇದು+ಅನಾದಿ)(ಜೀವವು+ಅನಾದಿ)(ವಸ್ತುವೌ+ಅದು+ಒಂದೆ)

ಈ ಪ್ರಪಂಚವು ಪೂರ್ತಿ ಇಡಿಯಾಗಿ(ಅಖಿಲ) ಇದೆ. ಇದು ಬಹಳ ಸಮಯದಿಂದಲೂ ಇದೆ (ಅನಾದಿ). ಅಂತೆಯೇ ಜೀವ ಜೀವಗಳು ಸಹ ಬಹುಕಾಲದಿಂದ ಇವೆ. ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಹೆಸರು ಮತ್ತು ಆಕಾರಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತದೆ. ಅದಕ್ಕೆ ತಕ್ಕಂತೆ ವಿಧವಿಧವಾದ ಸ್ವಭಾವಗಳು, ಬೆಲೆಗಳು, ಒಳ್ಳೆಯ ನಡತೆಗಳ ನಿಯಮಗಳು, ನ್ಯಾಯ, ಧರ್ಮಗಳು ಮತ್ತು ಪರಂಪರೆಗಳು ಸಹ ಹುಟ್ಟಿಕೊಳ್ಳುತ್ತವೆ. ಇವುಗಳೆಲ್ಲವನ್ನೂ ನೋಡಿದನಂತರ ನಮಗೆ ಸಿಗುವ ವಸ್ತುವಾದರೋ ಅದು ಒಂದೇ ಒಂದು. ಇವೆಲ್ಲದರ ಹಿಂದೆ ಇರುವ ಪರಮಾತ್ಮನೆಂಬ ವಸ್ತು.

Thursday, September 15, 2011

ನರಗಣ್ಯ ಭೇದಗಳ ಕಾಲ ದಿಗ್ದೇಶಗಳ (66)


ನರಗಣ್ಯ ಭೇದಗಳ ಕಾಲ ದಿಗ್ದೇಶಗಳ |
ಜರೆರುಜೆಗಳೆಲ್ಲ ವಿಕೃತಿಗಳ ಪಾರಿಸುತೆ ||
ದೊರಕಿಪುದು ಜಗದ ನಾನಾತ್ವದೊಳಗೈಕ್ಯವಂ |
ಸ್ಮರಣೆ ಚಿನ್ಮಹಿಮೆಯದು - ಮರುಳ ಮುನಿಯ || (೬೬)

(ದಿಕ್+ದೇಶಗಳ)(ನಾನಾತ್ವದೊಳಗೆ+ಐಕ್ಯವಂ)(ಚಿತ್+ಮಹಿಮೆ+ಅದು)

ಮನುಷ್ಯರ ತಾರತಮ್ಯ ಭೇದಗಳನ್ನು (ನರಗಣ್ಯ ಭೇದಗಳ), ಕಾಲ, ದಿಕ್ಕು ಮತ್ತು ಪ್ರದೇಶಗಳ, ಮುಪ್ಪು (ಜರೆ) ಮತ್ತು ರೋಗ (ರುಜೆ)ಗಳ ಎಲ್ಲಾ ಬದಲಾವಣೆಗಳನ್ನು ನೋಡಿದರೆ (ಪಾರಿಸುತೆ) ನಮಗೆ ಜಗತ್ತಿನ ನಾನಾ ಆಕಾರಗಳಲ್ಲಿ ಒಂದು ಏಕರೂಪತೆಯು ಕಾಣಬರುತ್ತದೆ. ಇದು ನಮಗೆ ಪರಮಾತ್ಮನ ಮಹಿಮೆಯನ್ನು ಜ್ಞಾಪಕಕ್ಕೆ ತರುತ್ತದೆ.

Wednesday, September 14, 2011

ತನುವಿಕಾರಗಳ ನಡುವಣ ಜೀವದೇಕತೆಯ (65)


ತನುವಿಕಾರಗಳ ನಡುವಣ ಜೀವದೇಕತೆಯ |
ಹೊನಲಿನೇಕತೆಯನಲೆಸಾಲುಗಳ ನಡುವೆ ||
ಇನಚಂದ್ರ ಪರಿವರ್ತನೆಗಳೊಳವರೇಕತೆಯ |
ಮನಗಾಣಿಪುದು ಚಿತ್ತು - ಮರುಳ ಮುನಿಯ || (೬೫)

(ಜೀವದ+ಏಕತೆಯ)(ಹೊನಲಿನ್+ಏಕತೆಯನ್+ಅಲೆಸಾಲುಗಳ)(ಪರಿವರ್ತನೆಗಳೊಳ್+ಅವರ+ಏಕತೆಯ)

ದೇಹವು (ತನು) ರೂಪಾಂತರಗೊಳ್ಳುವುದರ (ವಿಕಾರಗಳ) ಮಧ್ಯೆ ಜೀವದ ಏಕತೆಯನ್ನು, ಅಲೆಗಳ ಸಾಲುಗಳ ಮಧ್ಯೆ ಹೊಳೆಯ (ಹೊನಲಿನ) ಏಕತೆಯನ್ನು ಮತ್ತು ಸೂರ್ಯ (ಇನ) ಚಂದ್ರರ ಸುತ್ತುವಿಕೆಯಲ್ಲಿ ಅವರ ಏಕತೆಯನ್ನು ನಮಗೆ ತಿಳಿಯಪಡಿಸುವುದು, ಜ್ಞಾನ (ಚಿತ್ತು).

Tuesday, September 13, 2011

ಏಕದೊಳನೇಕವನನೇಕದೊಳಗೇಕವವ- (64)


ಏಕದೊಳನೇಕವನನೇಕದೊಳಗೇಕವವ- |
ಲೋಕಿಪಂ ಪರಮ ತತ್ತ್ವಂ ಕಂಡನಾತಂ ||
ಶೋಕಮವನಂ ಸೋಕದವನಿಗಿಲ್ಲಂ ಮೋಹ |
ಸಾಕಲ್ಯ ದೃಷ್ಟಿಯದು - ಮರುಳ ಮುನಿಯ || (೬೪)

(ಏಕದೊಳ್+ಅನೇಕವನ್+ಅನೇಕದೊಳಗೆ+ಏಕ+ಆವಲೋಕಿಪಂ)(ಶೋಕಂ+ಅವನಂ)
(ಸೋಕದು+ಅವನಿಗೆ+ಇಲ್ಲಂ)

ಪರಮಾತ್ಮನ ತತ್ತ್ವವನ್ನು ಕಂಡವನು ಒಂದರಲ್ಲಿ ಅನೇಕವನ್ನು ಮತ್ತು ಅನೇಕದೊಳಗೆ ಒಂದೇ ಒಂದನ್ನು ನೋಡಬಲ್ಲನು (ಅವಲೋಕಿಪಂ). ಅವನನ್ನು ದುಃಖವು ಸ್ಪರ್ಶಿಸುವುದಿಲ್ಲ ಮತ್ತು ಅವನು ಮೋಹಕ್ಕೆ ಒಳಗಾಗುವುದಿಲ್ಲ. ಇದು ಪರಿಪೂರ್ಣತೆಯನ್ನು (ಸಾಕಲ್ಯ) ಕಾಣುವ ನೋಟ.

Monday, September 12, 2011

ಗಂಗೆ (ತಾನೊಂದು) ನದಿ ಯಮುನೆ ಬೇರೊಂದು (ನದಿ) (63)


ಗಂಗೆ (ತಾನೊಂದು) ನದಿ ಯಮುನೆ ಬೇರೊಂದು (ನದಿ) |
ಸಂಗಮದ(ವರೆಗೆ) ಬೇರ‍್ತನ ಪ್ರಯಾಗವರಂ ||
ವಂಗದಾ ಅಬ್ಧಿಯಲಿ ಗಂಗೆಯಾರ್ ತುಂಗೆಯಾರ್ ? |
ವಿಂಗಡಿಸಲಹುದೇನೊ ? - ಮರುಳ ಮುನಿಯ || (೬೩)

(ವಿಂಗಡಿಸಲ್+ಅಹುದೇನೊ)

ಪ್ರಯಾಗದ ಸಂಗಮದಲ್ಲಿ ಸೇರುವ ತನಕ ಗಂಗೆ ಮತ್ತು ಯಮುನೆಗಳು ಬೇರೆ ಬೇರೆ ನದಿಗಳಾಗಿ ಹರಿಯುತ್ತದೆ. ಬಂಗಾಳಕೊಲ್ಲಿ (ವಂಗದಾ ಅಬ್ಧಿ)ಯ ಸಮುದ್ರವನ್ನು ಸೇರಿದ ಬಳಿಕ ಗಂಗೆ ಮತ್ತು ತುಂಗಾ (ಯಮುನಾ ಎಂದಿರಬೇಕೇನೋ) ನದಿಗಳು ಯಾವುದೆಂದು ವಿಭಾಗಿಸಲಾಗುವುದೇನು? ಹಾಗೆಯೇ ಪರಬ್ರಹ್ಮನಲ್ಲಿ ಸೇರುವತನಕ ನಾವು ಈ ಜಗತ್ತಿನಲ್ಲಿ ಬೇರೆ ಬೇರೆಯಾಗಿ ಬಾಳುವೆವು. ಅವನಲ್ಲಿ ಒಂದಾದಮೇಲೆ ನಮ್ಮ ಪ್ರತ್ಯೇಕತೆ ಅಸ್ತಿತ್ವಕ್ಕೆ ಇಲ್ಲದಾಗಿ ಹೊಗುವುದು.

Friday, September 9, 2011

ಕಿಡಿಯನುರಿಯಿಂದ ಬೇರೆಂದು ತೋರಿಸುತಿರ್ಪ (62)



ಕಿಡಿಯನುರಿಯಿಂದ ಬೇರೆಂದು ತೋರಿಸುತಿರ್ಪ |
ಬೆಡಗು ಮಾಯೆಯದು ಗಾಳಿಯು ಬೀಸುತಿರಲು ||
ನಡುಗಿಪ್ಪುದೆಲ್ಲವನು ಒಂದೆಡೆಯೊಳೆರಡೆಂದು |
ಹುಡುಗಾಟವಾಗುವುದು - ಮರುಳ ಮುನಿಯ || (೬೨)

(ಕಿಡಿಯಂ+ಉರಿಯಿಂದ)(ಬೇರೆ+ಎಂದು)(ತೋರಿಸುತ+ಇರ್ಪ)
(ನಡುಗಿಪ್ಪುದು+ಎಲ್ಲವನು)(ಒಂದು+ಎಡೆಯೊಳ್+ಎರಡು+ಎಂದು)(ಹುಡುಗಾಟ+ಆಗುವುದು)

ಒಂದು ದೊಡ್ಡ ಬೆಂಕಿಯು ಉರುಯಿತ್ತಿರುವಾಗ ಅದರಿಂದ ಹಾರಿದ ಕಿಡಿಯು ಬೇರೆ ಎಂದು ತೋರಿಸುತ್ತಿರುವ ಬೆಡಗು ಮಾಯೆಯಿಂದ ಆಗುತ್ತದೆ. ಹಾಗೆಯೇ ರಭಸವಾಗಿ ಗಾಳಿಯು ಬೀಸುತ್ತಿರುವಾಗ ಅದು ಅದರೆದುರಿಗೆ ಬರುವ ವಸ್ತುಗಳೆಲ್ಲವನ್ನೂ ಅಲುಗಾಡಿಸಿ ಒಂದು ವಸ್ತುವನ್ನು ಎರಡೆಂದು ಕಾಣಿಸುವಂತೆ ಮಾಡುತ್ತದೆ. ಇದು ಪರಮಾತ್ಮನ ಹುಡುಗಾಟವಾಗಿದೆ.

Thursday, September 8, 2011

ಇರುವುದೊಂದೋ ಎರಡೊ ಎರಡಂತೆ ಎಸೆವೊಂದೊ (61)


ಇರುವುದೊಂದೋ ಎರಡೊ ಎರಡಂತೆ ಎಸೆವೊಂದೊ |
ಮರಳು ಗಂಧಗಳೆರಡೊ, ಗಂಧವಿರದರಲು ಕಸ ||
ಮೆರಗು ಮಣಿ ಬೇರೆಯೇಂ ಮೆರುಗಿರದ ಮಣಿಯೆ ಶಿಲೆ |
ಎರಡುಮಿರೆ ಪುರುಳೊಂದು - ಮರುಳ ಮುನಿಯ || (೬೧)

(ಇರುವುದು+ಒಂದೋ)(ಎಸೆವ+ಒಂದೊ)(ಗಂಧಗಳು+ಎರಡೊ)(ಗಂಧ+ಇರದ+ಅರಲು)
(ಮೆರಗು+ಇರದ)(ಎರಡುಂ+ಇರೆ)(ಪೊರುಳ್+ಒಂದು)

ಮೊದಲೇ ಹೇಳಿದಂತೆ ಇರುವುದು ಒಂದೋ ಅಥವಾ ಎರಡೋ. ಇಲ್ಲ, ಒಂದೇ ಒಂದು ವಸ್ತು ಎರಡರಂತೆ ಶೋಭಿಸುತ್ತಿದೆಯೋ(ಎಸೆವ)? ಹೂವು (ಮರಲು) ಮತ್ತು ಸುಗಂಧಗಳು ಎರಡೋ? ಸುಗಂಧವಿರದಿದ್ದಲ್ಲಿ ಹೂವು (ಅರಲು) ಕಸಕ್ಕೆ ಸಮಾನವಾಗುತ್ತದೆ. ಕುಸುಮದೊಳು ಗಂಧವೋ, ಗಂಧದೊಳು ಕುಸುಮವೋ... ಕನಕದಾಸರ ಪದ ಜ್ಞಾಪಕಕ್ಕೆ ಬರುತ್ತದೆ. ಹೊಳಪು (ಮೆರಗು) ಮತ್ತು ರತ್ನ ಬೇರೆ ಬೇರೆಯೋ? ಹೊಳಪಿರದ ಮಣಿ ಕೇವಲ ಕಲ್ಲೆಂದೆನ್ನಿಸಿಕೊಳ್ಳುತ್ತದೆ ಅಷ್ಟೆ. ಹೀಗೆ ಎರಡೂ ಇದ್ದರೆ ಮಾತ್ರ ಅದರಲ್ಲಿ ತಿರುಳು (ಪುರುಳ್) ಇರುತ್ತದೆ.

Friday, August 26, 2011

ಏಕಮೋ ಅನೇಕಮೋ ಸದ್ವಸ್ತುವೆಣಿಸಲಿಕೆ (60)


ಏಕಮೋ ಅನೇಕಮೋ ಸದ್ವಸ್ತುವೆಣಿಸಲಿಕೆ |
ಲೋಕದೊಳನೇಕವದು ಮೂಲದೊಳಗೇಕ ||
ಸಾಕಲ್ಯದಿಂ ಭಜಿಸು ನೀನುಭಯಗಳನೆಂದುಂ |
ಏಕದಿನನೇಕ ನೀಂ - ಮರುಳ ಮುನಿಯ || (೬೦)

(ಸತ್+ವಸ್ತು+ಎಣಿಸಲಿಕೆ)(ಲೋಕದೊಳ್+ಅನೇಕವದು)(ಮೂಲದೊಳಗೆ+ಏಕ)
(ನೀನ್+ಉಭಯಗಳನ್+ಎಂದುಂ)(ಏಕದಿಂ+ಅನೇಕ)

ಪರಮಾತ್ಮನೆಂಬ ಶ್ರೇಷ್ಠವಾದ ವಸ್ತು (ಸತ್+ವಸ್ತು), ಪರಿಗಣಿಸುವಲ್ಲಿ ಒಂದೋ ಅಥವಾ ಅನೇಕವೋ? ಅದು ಈ ನಮ್ಮ ಪ್ರಪಂಚದಲ್ಲಿ ಅನೇಕ ರೂಪಗಳಲ್ಲಿ ಕಾಣಿಸಿಕೊಂಡರೂ, ಮೂಲರೂಪದಲ್ಲಿ ಅದು ಒಂದೇ ಒಂದು ವಸ್ತು. ಸಂಪೂರ್ಣವಾಗಿ (ಸಾಕಲ್ಯ) ನೀನು ಈ ಎರಡನ್ನೂ ಪೂಜಿಸು (ಭಜಿಸು). ನೀನು ಒಂದರಿಂದ ಅನೇಕವಾಗಿರುವ ಮನುಷ್ಯ ಜೀವಿ.

ಹೀಗೆ ವಿಧವಿಧವಾಗಿ ಪ್ರಪಂಚ ಕಾಣುತ್ತಿರುವಾಗ ಇದೆಲ್ಲ ಬೇರೆ ಬೇರೆಯೇ ಅನೇಕವೋ, ಅಥವಾ ಇದಕ್ಕೆಲ್ಲಾ ಮೂಲವಾಗಿರುವುದು ಒಂದೇ ಒಂದೆಯೇ ಎಂಬ ಸಂದೇಹ ಬರುವುದು ಸಹಜ. ಮೇಲಿನ ನೋಟಕ್ಕೆ ಇದೆಲ್ಲಾ ಬೇರೆ ಬೇರೆಯೆಂದೇ ಕಾಣುತ್ತದೆ. ಆದರೆ ವಿಚಾರ ಮಾಡಿನೋಡಿದಾಗ ತತ್ತ್ವ ತಿಳಿದುಬರುತ್ತದೆ. ಇದೆಲ್ಲಾ ಒಂದೇ ಒಂದು; ಯಾವಾಗಲೂ ಇರುವ ವಸ್ತುವಿನಿಂದ ಬಂದಿದ್ದು. ಒಂದೇ ಅನೇಕ ರೂಪಗಳನ್ನು ತಾಳಿದೆ. ಆ ಮೂಲ ವಸ್ತುವನ್ನು ಅದರ ಅನೇಕ ಅವಿರ್ಭಾವವನ್ನು ಗೌರವದಿಂದ ಕಂಡು ಪೂಜಿಸತಕ್ಕದ್ದು ಎಂದು ಹೇಳುತ್ತಾರೆ ಮುನಿಯಗುರು. ಆ ಮೂಲವಸ್ತುವಿನಿಂದ ಬಂದದ್ದೆಲ್ಲವೂ ಗೌರವಾರ್ಹವೆ. ಆ ಮೂಲವಸ್ತುವಿನಿಂದಲೇ ಬಂದವನು ನೀನು ಎಂದು ಅರಿತು ಲೋಕಜೀವನನ್ನು ನಡೆಸತಕ್ಕದ್ದು ಎನ್ನುತ್ತಾರೆ.

Thursday, August 25, 2011

ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ (59)


ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ |
ಮಾವ ಮಾವಂದಿರಿಂದಗಣಿತಾದಿಗಳಿಂ ||
ಜೀವವೊಂದುದಿಸಿಹುದು ಹೀರಿ ಸಾರಗಳನಿತ-|
ನಾವನೆಣಿಸುವನದನು - ಮರುಳ ಮುನಿಯ || (೫೯)

(ಮಾವಂದಿರಿಂದ+ಅಗಣಿತಾದಿಗಳಿಂ)(ಜೀವವೊಂದು+ಉದಿಸಿಹುದು)
(ಸಾರಗಳನ್+ಅನಿತನ್+ಅವನ್+ಎಣಿಸುವನ್+ಅದನು)

ಸಾವಿರಾರು ವಂಶ(ಕುಲ)ಗಳಿಂದ, ತಾಯಿ ತಂದೆಯರು, ಅತ್ತೆ ಮಾವಂದಿರು ಮತ್ತು ಲೆಕ್ಕಕ್ಕೆ ಸಿಗದಿರುವ ಇತ್ಯಾದಿಗಳಿಂದ (ಅಗಣಿತಾದಿಗಳಿಂ), ಒಂದು ಜೀವವು ಈ ಪ್ರಪಂಚದಲ್ಲಿ ಹುಟ್ಟಿದೆ (ಉದಿಸಿಹುದು). ಇದು ಸ್ವಲ್ಪ ಸ್ವಲ್ಪ (ಅನಿತು) ಸಾರಗಳನ್ನು ಇವರೆಲ್ಲರಿಂದ ಹೀರಿಕೊಂಡು ಹುಟ್ಟಿದೆ. ಇದನ್ನು ಲೆಕ್ಕ ಹಾಕಲಿಕ್ಕೆ ಯಾರಿಂದ ಸಾಧ್ಯ?

Wednesday, August 24, 2011

ಜಗವಿಹುದನಾದಿಯದು ಮೊದಲಿಲ್ಲ ಕೊನೆಯಿಲ್ಲ (58)


ಜಗವಿಹುದನಾದಿಯದು ಮೊದಲಿಲ್ಲ ಕೊನೆಯಿಲ್ಲ |
ಯುಗದಿಂದ ಯುಗಕೆ ಹರಿವುದು ಜೀವ ನದಿವೊಲ್ ||
ಅಘಪುಣ್ಯಗಳ ಬೇರ್ಗಳೆಂದಿನಿಂ ಬಂದಿಹವೊ |
ಬಗೆ ಮುಂದೆ ಗತಿಯೆಂತೊ - ಮರುಳ ಮುನಿಯ || (೫೮)

(ಜಗ+ಇಹುದು+ಅನಾದಿ+ಅದು)(ಬೇರ್ಗಳ್+ಎಂದಿನಿಂ)

ಜಗತ್ತು ಪುರಾತನ ಕಾಲ(ಅನಾದಿ)ದಿಂದಲೂ ಇದೆ. ಅದಕ್ಕೆ ಮೊದಲು ಮತ್ತು ಕೊನೆಗಳಿಲ್ಲ. ಒಂದು ಯುಗದಿಂದ ಇನ್ನೊಂದು ಯುಗಕ್ಕೆ ಇದು ಜೀವನದಿಯಂತೆ ಹರಿಯುತ್ತಿದೆ. ಪಾಪ (ಅಘ) ಮತ್ತು ಪುಣ್ಯಗಳ ಬೇರುಗಳು ಎಂದಿನಿಂದ ಬಂದಿರುವುವೋ ನಮಗೆ ತಿಳಿಯದು. ಮುಂದಿನ ಅವಸ್ಥೆ ಹೇಗೆ ಎಂದೂ ತಿಳಿಯದು.

Tuesday, August 23, 2011

ನಮ್ಮ ರವಿ ಭೂಗೋಲಗಳಿನಾಚೆ ನೂರಾರು (57)


ನಮ್ಮ ರವಿ ಭೂಗೋಲಗಳಿನಾಚೆ ನೂರಾರು |
ನೂರ‍್ಮಡಿಯ ಬಲದ ರವಿ ಭೂಗ್ರಹಗಳಿಹುವು ||
ಹೊಮ್ಮಿಸುವಳಿನ್ನೆಷ್ಟನೋ ಪ್ರಕೃತಿ ಮರಮರಳಿ |
ಬ್ರಹ್ಮಶಕ್ತಿಯಪಾರ - ಮರುಳ ಮುನಿಯ || (೫೭)

(ಭೂಗೋಲಗಳಿನ್+ಆಚೆ)(ಭೂಗ್ರಹಗಳ್+ಇಹುವು)(ಹೊಮ್ಮಿಸುವಳ್+ಇನ್ನೆಷ್ಟನೋ)(ಬ್ರಹ್ಮಶಕ್ತಿಯು+ಅಪಾರ)

ನಾವು ಈಗ ಜೀವಿಸುತ್ತಿರುವ ಸೂರ್ಯ ಮತ್ತು ಭೂಗೋಲಗಳಿಂದ ಆಚೆಗೆ, ನೂರಾರು ಮತ್ತು ನೂರುಪಟ್ಟು ಹೆಚ್ಚು ಶಕ್ತಿ ಇರುವ ಸೂರ್ಯ ಮತ್ತು ಭೂಗ್ರಹಗಳಿವೆ. ಪ್ರಕೃತಿಯು ಪುನಃ ಪುನಃ ಇನ್ನೂ ಎಷ್ಟೆಷ್ಟೋ ಸೂರ್ಯ ಮತ್ತು ಭೂಗ್ರಹಗಳನ್ನು ಉಂಟಾಗುವಂತೆ ಮಾಡುತ್ತಾಳೆ. ಬ್ರಹ್ಮಶಕ್ತಿ ಬಹಳ ಅಧಿಕವಾದದ್ದು (ಅಪಾರ).

Monday, August 22, 2011

ಎಂತು ನಾಂ ಕಾಡಿದೊಡಮಿವನಳಿಯದುಳಿದಿರ‍್ಪನ್ (56)


ಎಂತು ನಾಂ ಕಾಡಿದೊಡಮಿವನಳಿಯದುಳಿದಿರ‍್ಪನ್ |
ಎಂತಪ್ಪ ಧೀರನಿವನೇನಮೃತಸಾರನ್ ! ||
ಇಂತೆನುತೆ ಮರ್ತ್ಯರೊಳೆ ಪಂಥ ಹೂಡಿಪನು ವಿಧಿ |
ಸಂತತ ಸ್ಪರ್ಧೆಯದು - ಮರುಳ ಮುನಿಯ || (೫೬)

(ಕಾಡಿದೊಡಂ+ಇವನ್+ಅಳಿಯದೆ+ಉಳಿದಿರ‍್ಪನ್)(ಧೀರನ್+ಇವನು+ಏನ್+ಅಮೃತ+ಸಾರನ್)(ಇಂತು+ಎನುತೆ)

"ಇವನನ್ನು ನಾನು ಎಷ್ಟು ಪೀಡಿಸಿದರೂ (ಕಾಡಿದೊಡಂ) ಸಹ ಇವನು ನಾಶವಾಗದೆ (ಅಳಿಯದೆ) ಇನ್ನೂ ಉಳಿದಿರುವನಲ್ಲಾ ! ಇವನು ಯಾವ ರೀತಿಯ (ಎಂತಪ್ಪ) ಧೀರ? ಇವನೇನು ಅಮೃತವನ್ನು ಸೇವಿಸಿರುವನೋ?" ಹೀಗೆ ಹೇಳುತ್ತ ಮನುಷ್ಯರ ಜೊತೆ ವಿಧಿಯು ಪಂಥವನ್ನು ಹೂಡಿರುವನು. ಯಾವಾಗಲೂ (ಸಂತತ) ಇರುವಂತಹ ಸ್ಪರ್ಧೆ ಇದು.

Friday, August 19, 2011

ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ (55)


ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ |
ಮತ್ತೆ ತಾಂ ತೆನೆಯೊಳೇಳ್ವಂತೆ ನರಕುಲದ ||
ಸತ್ತ್ವ ಕಣವಿಲ್ಲಲ್ಲಿ ತಮಕಿಳಿದೊಡಂ ತಾನೆ |
ಮತ್ತೆದ್ದು ಮೆರೆಯುವುದು - ಮರುಳ ಮುನಿಯ || (೫೫)

(ಗೊಬ್ಬರ+ಆಗಿ)(ನೆಲಕೆ+ಇಳಿದು)(ಮಣ್+ಆಗಿ)(ತೆನೆಯ+ಒಳು+ಏಳ್ವಂತೆ)
(ಕಣವು+ಇಲ್ಲಿ+ಅಲ್ಲಿ)(ತಮಕೆ+ಇಳಿದೊಡಂ)(ಮತ್ತೆ+ಎದ್ದು)

ಭತ್ತವು ಹೇಗೆ ಗೊಬ್ಬರವಾಗಿ ನೆಲದೊಳಕ್ಕಿಳಿದು ಮಣ್ಣಾಗಿ ಪುನಃ ಭತ್ತದ ತೆನೆಯಾಗಿ ವಿಜೃಂಭಿಸುವುದೋ, ಹಾಗೆಯೇ ಮನುಷ್ಯ ಕುಲದ ಸತ್ತ್ವದ ಕಣವು ಅಲ್ಲಲ್ಲಿ ಪೂರ್ತಿಯಾಗಿ ಕಾಣದಂತೆ ಕೆಳಕ್ಕೆ (ತಮಕೆ) ಇಳಿದರೆ ತಾನೆ ಅದು ಪುನಃ ಎದ್ದು ಮೆರೆಯಲು ಸಾಧ್ಯ.

Thursday, August 18, 2011

ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ (54)


ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ |
ಮಣಿ ಮರಳು ಶಿಲೆಗಳಲಿ ಶುನಕ ಹರಿಣದಲಿ ||
ಗುಣ ಶಕ್ತಿ ವಿವಿಧತೆಯನನುವಂಶವಿರಿಸಿರ್ಪು - |
ದನ್ಯೋನ್ಯತೆಯ ಕಲಿಸೆ - ಮರುಳ ಮುನಿಯ || (೫೪)

(ವಿವಿಧತೆಯನು+ಅನುವಂಶ+ಇರಿಸಿ+ಇರ್ಪುದು+ಅನ್ಯೋನ್ಯತೆಯ)

ಹುಲ್ಲು (ತೃಣ), ಸಸ್ಯ, ಗಿಡಮರಗಳು, ಚಿನ್ನ(ಕನಕ), ಕಬ್ಬಿಣ, ರತ್ನ(ಮಣಿ), ಮರಳು, ಕಲ್ಲು(ಶಿಲೆ), ನಾಯಿ(ಶುನಕ) ಮತ್ತು ಜಿಂಕೆ ಇತ್ಯಾದಿಗಳಲ್ಲಿ, ಇವುಗಳು ಪರಸ್ಪರ ಪ್ರೀತಿಸುವುದನ್ನು ಕಲಿಯಲು, ಅನುವಂಶಿಕತೆಯು(ಅನುವಂಶ) ಬಗೆಬಗೆಯ ಸ್ವಭಾವ ಮತ್ತು ಬಲಾಬಲಗಳನ್ನು ಇಟ್ಟಿದೆ.

ಮೂಲಚೇತನದ ಮೂಟೆಗಳೆಲ್ಲ ವಸ್ತುಗಳು (53)


ಮೂಲಚೇತನದ ಮೂಟೆಗಳೆಲ್ಲ ವಸ್ತುಗಳು |
ಸ್ಥೂಲದಿಂ ಸೂಕ್ಷ್ಮಗಳು ಸೂಕ್ಷ್ಮದಿಂ ಸ್ಥೂಲ ||
ಕಾಲ ದೇಶಾಸಂಗ ಪರಿವರ್ತ್ಯ ಜಡಜೀವ |
ಮಾಲಾಪ್ರವಾಹವದು -ಮರುಳ ಮುನಿಯ || (೫೩)

ಮೂಲಶಕ್ತಿಯ ಮೂಟೆಗಳೆಲ್ಲವೂ ನಮಗೆ ಈ ಪ್ರಪಂಚದಲ್ಲಿರುವ ವಸ್ತುಗಳಾಗಿ ಕಂಡುಬರುತ್ತದೆ. ಇವು ದಪ್ಪ(ಸ್ಥೂಲ)ದರಿಂದ ಸಣ್ಣ (ಸೂಕ್ಷ್ಮ) ಮತ್ತು ಸಣ್ಣದರಿಂದ ದಪ್ಪ ಆಗಬಲ್ಲವು. ಒಂದು ಸಣ್ಣ ಬೀಜದಿಂದ ಒಂದು ಬೃಹತ್ ಮರ ಮತ್ತು ಆ ಮರದಿಂದ ಪುನಃ ಒಂದು ಸಣ್ಣ ಬೀಜ ಹುಟ್ಟುತ್ತದೆ. ಜಡವಾಗಿರುವ ಜೀವವು ಕಾಲ, ಸ್ಥಳ ಮತ್ತು ಸಂಪರ್ಕದಿಂದ ಪರಿವರ್ತನೆಗೊಳ್ಳುತ್ತದೆ. ಬೀಜ ಮರವಾಗುವ ಉದಾಹರಣೆಯನ್ನು ತೆಗೆದುಕೊಂಡರೆ, ಅ ಬೀಜವನ್ನು ಒಂದು ಸ್ಥಳದಲ್ಲಿ ನೆಡಬೇಕು. ಅದಕ್ಕೆ ನೀರು, ಗೊಬ್ಬರ, ಸೂರ್ಯನ ಬೆಳಕು ಇತ್ಯಾದಿಗಳು ಸೇರಬೇಕು. ಹಾಗಾದಾಗ ಸ್ವಲ್ಪ ಸಮಯದ ನಂತರ ಅದು ಗಿಡವಾಗಿ ಬೆಳೆಯಬಹುದು. ಈ ರೀತಿಯಾಗಿ ಅದು ಪರಿವರ್ತನೆಗೊಳ್ಳುತ್ತದೆ. ಸಾಲು ಸಾಲಾಗಿ ಬರುವ ಪ್ರವಾಹ (ಮಾಲಾಪ್ರವಾಹ)ಗಳಿಂದ ಪ್ರಕೃತಿಯಲ್ಲಿ ಪರಿವರ್ತನೆಗಳಾಗುತ್ತವೆ. ಇದಕ್ಕೆ ಮೂಲಚೇತನ ಪರಮಾತ್ಮನೆಂಬುದನ್ನು ಮರೆಯಬಾರದು.

Tuesday, August 16, 2011

ತನುವೇನು ಮನವೇನು ಘನವೇನು ರಸವೇನು (52)


ತನುವೇನು ಮನವೇನು ಘನವೇನು ರಸವೇನು |
ಗುಣವೇನು ಜಡವೇನು ಜೀವಬಲವೇನು ||
ಅನವಧಿಕ ಮೂಲ ಸ್ವಯಂಭೂತ ಚೈತನ್ಯ |
ಧುನಿಯ ಶೀಕರವೆಲ್ಲ - ಮರುಳ ಮುನಿಯ || (೫೨)

ದೇಹ, ಮನಸ್ಸು, ಘನವಸ್ತು, ರಸಪದಾರ್ಥ, ವಸ್ತುಗಳ ಸ್ವಭಾವಗಳು, ಜಡವಸ್ತುಗಳು ಮತ್ತು ಜೀವಗಳ ಶಕ್ತಿಗಳು, ಇವುಗಳೆಲ್ಲವೂ ಅಪರಿಮಿತ(ಅನವಧಿಕ)ವಾದ, ಆದಿಯಿಂದ ತಾನೇ ತಾನು (ಸ್ವಯಂಭೂತ) ಹುಟ್ಟಿರುವ ಶಕ್ತಿಗಳು. ಇವುಗಳೆಲ್ಲವೂ ಪರಮಾತ್ಮನೆಂಬ ಹೊಳೆ(ಧುನಿ)ಯ ತುಂತುರು ಹನಿ(ಶೀಕರ)ಗಳು.

Friday, August 5, 2011

ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ (51)

ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ
ಆವಿರ‍್ಭವಿಪರಿಂದು ಮಗ ಮೊಮ್ಮೊಗರೆನಿಸಿ ||
ಆವಗಂ ಸಾವಿರೂಟೆಯೆ ನೀರ‍್ಗಳಿಂ ನಮ್ಮ |
ಜೀವನದಿ ಬೆಳೆಯುವುದೊ - ಮರುಳ ಮುನಿಯ || (೫೧)

 (ಜನ್ಮಂಗಳ+ಅಜ್ಜ)(ಆವಿರ‍್ಭವಿಪರ್+ಇಂದು)(ಸಾವಿರ+ಊಟೆಯೆ)

 ಒಂದೊಂದು ಜೀವವೂ ಪ್ರಕೃತಿ ಪುರುಷ ವಿಲಾಸವೆಂಬ ಮಹಾ ಸಮುದ್ರದ ಒಂದು ಅಲೆ ಎಂದು ಹೇಳಿದೆವಲ್ಲವೇ  , ಇಂದು ಮಗ ಮತ್ತು ಮೊಮ್ಮಕ್ಕಳಾಗಿ ಹುಟ್ಟುತ್ತಾರೆ (ಅವಿರ‍್ಭವಿಪರು). ಯಾವಾಗಲೂ (ಆವಗಂ) ಸಾವಿರಾರು ಚಿಲುಮೆ(ಊಟೆ)ಗಳ ನೀರುಗಳಿಂದ ನಮ್ಮ ಜೀವವೆಂಬ ನದಿ ವೃದ್ಧಿ ಹೊಂದುತ್ತದೆ. ನಾವು ಕಾಣುವ ಅಲೆ ಎಲ್ಲಿಂದಲೋ ಬೀಸಿದ ಗಾಳಿಯ ಪರಿಣಾಮವಾಗಿ ಉಂಟಾದ ತರಂಗಮಾಲೆಯ ಒಂದು ಅಲೆ. ಅದು ಸಮುದ್ರದಿಂದ ಸ್ವತಂತವಲ್ಲ. ಅದು ತಾನೇ ಉಂಟಾದದ್ದೂ ಅಲ್ಲ - ಹಿಂದಿನ ತರಂಗಗಳ ಪರಿಣಾಮ ಹೀಗೆ. ಈಗ ಕಾಣುತ್ತಿರುವ ಒಬ್ಬ ಮನುಷ್ಯನ ದೇಹ ಮನಸ್ಸುಗಳಲ್ಲಿ ಅವನ ಅಪ್ಪ ತಾತ ಮುತ್ತಜ್ಜ ಮುಂತಾದವರೆಲ್ಲ ದೇಹ ಪ್ರಕೃತಿ ಮನೋಭಾವಗಳು ಅವಿರ್ಭವಿಸಿರುತ್ತವೆ. ಒಂದು ನದಿ ಹೇಗೆ ಅನೇಕ ನದಿಗಳ ಹಳ್ಳಗಳ ನೀರನ್ನು ಸೇರಿಸಿಕೊಂಡು ಮುಂದೆ ಹರಿಯುವುದೋ ಹಾಗೆ ನಮ್ಮ ಜೀವ ನದಿಯೂ ನಮ್ಮ ಇಂದಿನ ವಂಶದವರ ಗುಣಗಳನ್ನು ಕೂಡಿಕೊಂಡೇ ಮುಂದೆ ಸಾಗುತ್ತದೆ. ನಾವು ತಿಳಿದು ಕೊಂಡಷ್ಟು ನಾವು ಸ್ವತಂತ್ರರಲ್ಲ.
(ಮರುಳ ಮುನಿಯನ ಕಗ್ಗಕ್ಕೆ ಒಂದು ವಿವರಣೆ: ಡಿ.ಆರ್.ವೆಂಕಟರಮಣನ್)